ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ವಿಶ್ವ ನಾಯಕ. ಅವರ ಫೋಟೋ ಬಳಸಬಾರದೆಂದು ಎಲ್ಲಿಯೂ ಹೇಳಿಲ್ಲ. ಮೋದಿ ಅವರು ನನ್ನ ಹೃದಯದಲ್ಲಿದ್ದು ಬಿಜೆಪಿಯವರು ಚುನಾವಣೆಗೆ ಫೋಟೋ ಬಳಸದಂತೆ ಕೇಸ್ ಹಾಕಿಕೊಳ್ಳುತ್ತಾರೆಂಬ ಕಾರಣಕ್ಕೆ ನಾನೇ ಕೇವಿಯೆಟ್ ಹಾಕಿದ್ದೇನೆ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ನಗರದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಸ್ಪರ್ಧೆ ಮಾಡಲು ನಿರ್ಧರಿಸಿಯಾಗಿದೆ. ಸ್ಪರ್ಧೆ ಮಾಡಿದರೆ ಬಿಜೆಪಿಯವರು ನನ್ನನ್ನು ಪಕ್ಷದಿಂದ ಉಚ್ಚಾಟನೆ ಮಾಡಬಹುದು ಅಷ್ಟೇ. ಅದನ್ನು ಬಿಟ್ಟು ಬೇರೇನೂ ಮಾಡಲು ಸಾಧ್ಯವಿಲ್ಲ. ನಾನು ಯಡಿಯೂರಪ್ಪ ಅವರಂತೆ ಪಕ್ಷ ಬಿಟ್ಟು ಕೆಜೆಪಿ ಕಟ್ಟಲಿಲ್ಲ. ಜಗದೀಶ್ ಶೆಟ್ಟರ್ ಅವರಂತೆ ಕಾಂಗ್ರೆಸ್‌ಗೆ ಹೋಗಿಲ್ಲ. ನಾನಿನ್ನೂ ಪಕ್ಷ ಬಿಟ್ಟುಹೋಗಿಲ್ಲ ಎಂದು ಹೇಳಿದರು.
ಪಾಲಿಕೆ ಟಿಕೆಟ್ ಕೊಡೋದು ನಾನೇ
ಶಿವಮೊಗ್ಗ ಲೋಕಸಭಾ ಕ್ಷೇತ್ರದಿಂದ ಈ ಬಾರಿ 3 ಲಕ್ಷ ಮತಗಳ ಅಂತರದಲ್ಲಿ ಗೆಲ್ಲುತ್ತೇನೆ. ಗೆದ್ದ ನಂತರ ಬಿಜೆಪಿಗೆ ಸೇರುತ್ತೇನೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಈಶ್ವರಪ್ಪ, ಮುಂಬರುವ ಶಿವಮೊಗ್ಗ ಮಹಾನಗರ ಪಾಲಿಕೆ ಚುನಾವಣೆಯಲ್ಲಿ ನಾನೇ ಟಿಕೆಟ್ ಕೊಡುತ್ತೇನೆ. ನನ್ನದೇ ಅಂತಿಮ ನಿರ್ಧಾರ ಆಗಿರಲಿದೆ ಎಂದು ಯಡಿಯೂರಪ್ಪ ಬೆಂಬಲಿಗರಿಗೆ ಪರೋಕ್ಷವಾಗಿ ಎಚ್ಚರಿಕೆ ನೀಡಿದರು.
ಈಗಾಗಲೇ ಶಿವಮೊಗ್ಗ ಲೋಕಸಭಾ ಕ್ಷೇತ್ರದ ಎಲ್ಲ ವಿಧಾನಸಭಾ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದೇನೆ. ನನಗೆ ಅನ್ಯಾಯವಾಗಿದ್ದು ಬಿಜೆಪಿ ಅಪ್ಪ-ಮಕ್ಕಳ ಕೈಯಲ್ಲಿದೆ. ನಾವು ನಿಮಗೆ ಮತ ಕೊಡುತ್ತೇವೆ ಎಂದು ಮತದಾರರು ಹೇಳುತ್ತಿದ್ದಾರೆ. ಬೂತ್ ಮಟ್ಟದ ಕಾರ್ಯಕ್ರಮ ಯಶಸ್ವಿಯಾಗಿದೆ ಎಂದು ಹೇಳಿದರು.