ಜಿಲ್ಲೆ

90ರ ವಯಸ್ಸಲ್ಲೂ ಪತ್ರಿಕೆ ವಿತರಣೆ ಕಾಯಕ, ಕಠಿಣ ಪರಿಶ್ರಮಕ್ಕೆ ಎಸ್.ತಾರಾನಾಥ್ ಕಾಮತ್ ನಿದರ್ಶನ

ಮಂಗಳೂರು: ಮನಸ್ಸಿದ್ದರೆ ಕಠಿಣ ಪರಿಶ್ರಮಕ್ಕೆ ವಯಸ್ಸು ಅಡ್ಡಿ ಬರುವುದಿಲ್ಲ ಎಂಬುದಕ್ಕೆ ಎಸ್.ತಾರಾನಾಥ್ ಕಾಮತ್ ಉತ್ತಮ ನಿದರ್ಶನ. 90ರ ಇಳಿ ವಯಸ್ಸಿನಲ್ಲೂ ಚಟುವಟಿಕೆಯಿಂದ ಪತ್ರಿಕೆ ವಿತರಣೆಯ ಕಾಯಕ ಮುಂದುವರಿಸುತ್ತಿರುವುದು ಯುವಕರಿಗೆ ಮಾದರಿ. ಕ್ರಿಸ್ಮಸ್ ಹಬ್ಬದಂದೇ ಅವರ ಜನ್ಮದಿನ.

70 ವರ್ಷಗಳಿಂದ ಮಂಗಳೂರಿನಲ್ಲಿ ಯಾವುದೇ ಪತ್ರಿಕಾ ಕಚೇರಿಗಳು, ಮುದ್ರಣಾಲಯಗಳು ಇಲ್ಲದ ಕಾಲದಿಂದ, ಒಂದೆರಡು ಪತ್ರಿಕೆಗಳನ್ನು ಬೆರಳೆಣಿಕೆಯ ಮನೆಗಳಿಗೆ ತಲುಪಿಸುವಲ್ಲಿಂದ ಆರಂಭಗೊಂಡ ಕಾಯಕ ಈಗಲೂ ಮುಂದುವರಿದಿದೆ. ಪ್ರಸ್ತುತ ಪ್ರತಿದಿನ 2 ಸಾವಿರ ಪತ್ರಿಕೆಗಳನ್ನು ಮಾರಾಟ ಮಾಡುತ್ತಾರೆ.

ಮಳೆ, ಗಾಳಿ, ಚಳಿ, ಕರ್ಫ್ಯೂ, ಸೆಕ್ಷನ್ ಯಾವುದೇ ಇರಲಿ ಮಧ್ಯರಾತ್ರಿ 2.30ಕ್ಕೆ ಇವರ ದಿನಚರಿ ಆರಂಭವಾಗುತ್ತದೆ. 3 ಗಂಟೆಗೆ ಪಡೀಲ್‌ನಲ್ಲಿರುವ ಮನೆಯಿಂದ ಪುತ್ರನ ಜತೆ ಕಂಕನಾಡಿಗೆ ಬಂದು ಪತ್ರಿಕೆ ಜೋಡಿಸುತ್ತಾರೆ. ಬಳಿಕ ಕಂಕನಾಡಿ ಬೈಪಾಸ್ ರಸ್ತೆಯಲ್ಲಿರುವ ತನ್ನ ಪತ್ರಿಕೆ ಮಾರಾಟದ ಅಂಗಡಿಯಲ್ಲಿ ಪತ್ರಿಕೆ ವಿತರಿಸುತ್ತಾರೆ. ಈ ವಯಸ್ಸಿನಲ್ಲೂ ಅವರು ದಿನಕ್ಕೆ 10 ಗಂಟೆ ಕಾಲ ದುಡಿಯುತ್ತಾರೆ.

‘ಪರಿಶ್ರಮದಿಂದ ಹಣ ಸಂಪಾದಿಸಬೇಕು. ಬದುಕಿನಲ್ಲಿ ಪ್ರಾಮಾಣಿಕರಾಗಿರಬೇಕು’ ಎಂಬ ತತ್ವ ಮೈಗೂಡಿಸಿಕೊಂಡು 90ರ ವಯಸ್ಸಿನಲ್ಲೂ ಆರೋಗ್ಯವಾಗಿದ್ದಾರೆ.

ಪತ್ರಿಕೆ ವಿತರಣೆಯಿಂದಲೇ ಬದುಕು ಕಟ್ಟಿಕೊಂಡಿರುವ ಕಾಮತ್ ತನ್ನ ಇಬ್ಬರು ಪುತ್ರರಾದ ವಿಷ್ಣು ಕಾಮತ್ ಮತ್ತು ವಿನಾಯಕ ಕಾಮತ್ ಅವರಿಗೂ ಇದೇ ಕಾಯಕವನ್ನು ಪರಿಚಯಿಸಿದ್ದಾರೆ.

ಒಮ್ಮೆ 45ನೇ ಪ್ರಾಯದಲ್ಲಿ ಮನೆಮನೆಗೆ ಸೈಕಲ್‌ನಲ್ಲಿ ಪತ್ರಿಕೆ ವಿತರಣೆ ಮಾಡುತ್ತಿದ್ದಾಗ ಬಿದ್ದು ಸೊಂಟಕ್ಕೆ ಗಾಯವಾಗಿತ್ತು. ನಡೆದಾಡಲು ಇತರರನ್ನು ಅವಲಂಬಿಸಬೇಕಾದ ಸ್ಥಿತಿ ಉಂಟಾಗಿತ್ತು. ಸುಮಾರು 2 ವರ್ಷ ಕೆಲಸ ಮಾಡಲು ಅಸಾಧ್ಯವಾಗಿ ಮನೆಯಲ್ಲೇ ಇದ್ದರು. ಅದರೆ ಬಳಿಕ ತನ್ನ ನೋವು ಮೆಟ್ಟಿ ನಿಂತು ಮತ್ತೆ ಪತ್ರಿಕಾ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು.

ವಿಜಯವಾಣಿಗೆ ಆರಂಭದ ದಿನದಿಂದಲೂ ಬೆನ್ನು ತಟ್ಟಿ ಪ್ರೋತ್ಸಾಹಿಸಿದ್ದಾರೆ.

ಬಾಲ್ಯದಲ್ಲಿ ಹೆಚ್ಚು ವಿದ್ಯಾಭ್ಯಾಸ ಮಾಡಲು ಸಾಧ್ಯವಾಗಿರಲಿಲ್ಲ. ಆರಂಭದಲ್ಲಿ ಸ್ಟೇಷನರಿ ಅಂಗಡಿ ಇದ್ದು, 12 ಸೈಕಲ್ ಬಾಡಿಗೆಗೆ ನೀಡುತ್ತಿದ್ದೆ. ಆ ಬಳಿಕ 70 ವರ್ಷಗಳಿಂದ ಈ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದೇನೆ. ಬದುಕಿನಲ್ಲಿ ಪ್ರಾಮಾಣಿಕತೆ ಮುಖ್ಯ. ಎಸ್.ತಾರಾನಾಥ ಕಾಮತ್ ಹಿರಿಯ ಪತ್ರಿಕಾ ವಿತರಕ