ಮುರಗೋಡದಿಂದ ಇಂಚಲಕ್ಕೆ ತೆರಳುವ ರಸ್ತೆಯಲ್ಲಿ ಗುಂಡಿಗಳು ನಿರ್ಮಾಣವಾಗಿರುವುದು. 
ಜಿಲ್ಲೆ

ದಶಕ ಕಳೆದರೂ ರಸ್ತೆ ಕಂಡಿಲ್ಲ ಅಭಿವೃದ್ಧಿ

ಮುರಗೋಡ: ಮುರಗೋಡದಿಂದ ಇಂಚಲ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 8 ಕಿ.ಮೀ. ರಸ್ತೆ ತೀರಾ ಹದಗೆಟ್ಟಿದ್ದು, ವಾಹನ ಸವಾರರು ಪರದಾಡಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಕಳೆದ 10 ವರ್ಷದ ಹಿಂದೆ ಪ್ರಧಾನಮಂತ್ರಿ ಗ್ರಾಮ ಸಡಕ ಯೋಜನೆಯಡಿ ನಿರ್ಮಾಣವಾಗಿದ್ದ ರಸ್ತೆ ಹದಗೆಟ್ಟು ವರ್ಷಗಳೇ ಕಳೆದರೂ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಕಣ್ಣಿಗೆ ಮಾತ್ರ ಬಿಳುತ್ತಿಲ್ಲ.

ಸವದತ್ತಿ ತಾಲೂಕಿನ ಮುರಗೋಡ ಗ್ರಾಮದ ಮುಖ್ಯ ರಸ್ತೆಯಿಂದ ಚಳಕೊಪ್ಪ ಮಾರ್ಗವಾಗಿ ಇಂಚಲ, ಹಾರೂಗೊಪ್ಪ, ಚಚಡಿ, ನೇಸರಗಿ ಮೂಲಕ ಬೆಳಗಾವಿಗೆ ಸಂಪರ್ಕಿಸುವ ಅಡ್ಡ ರಸ್ತೆ ಈ ಭಾಗದ ಪ್ರಮುಖ ರಸ್ತೆಯಾಗಿದೆ. ಈ ರಸ್ತೆ ಮಾರ್ಗದಲ್ಲಿ ಸಾವಿರಾರು ಹೆಕ್ಟೇರ್ ಜಮೀನುಗಳು ಇದ್ದು, ಪ್ರತಿದಿನ ರೈತರು ತಮ್ಮ ಕೃಷಿ ಚಟುವಟಿಕೆಗಳಿಗೆ ಇದೇ ರಸ್ತೆ ಬಳಸುತ್ತಾರೆ. ಅಲ್ಲದೇ ಬೆಳಗಾವಿಗೆ ತೆರಳಲು ಈ ರಸ್ತೆ ಹತ್ತಿರವಾಗುವುದರಿಂದ ಸುತ್ತಲಿನ ಸಾವಿರಾರು ಜನ ಈ ರಸ್ತೆ ಬಳಸುತ್ತಾರೆ.

ರಸ್ತೆ ತೀರಾ ಹದಗೆಟ್ಟಿದ್ದು, ಗುಂಡಿಗಳು ನಿರ್ಮಾಣವಾಗಿವೆ. ಈ ಸ್ಥಿತಿ ಕುರಿತು ಅನೇಕ ಸಂಘಟನೆಗಳು, ಗ್ರಾಮಸ್ಥರು ಶಾಸಕರಿಗೆ ಹಾಗೂ ಸಂಸದರಿಗೆ ಸಾಕಷ್ಟು ಬಾರಿ ಮನವಿ ಸಲ್ಲಿಸಿದರೂ ಪ್ರಯೋಜನವಾಗಿಲ್ಲ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.