ಚೌಕಸಂದ್ರ ಜಯರಾಮನಾಯಕ್ ಹಾರೋಹಳ್ಳಿ
ತಾಲೂಕಿನ ನಾಲ್ಕು ಗ್ರಾಮ ಪಂಚಾಯಿತಿಗಳಿಗೆ 4 ವರ್ಷಗಳಿಂದ ಸದಸ್ಯರ ಆಯ್ಕೆಗೆ ಚುನಾವಣೆ ನಡೆಯದೆ ಗ್ರಹಣ ಹಿಡಿದಿದೆ. ತಾಲೂಕಿನ ಕೊಳ್ಳಿಗನಹಳ್ಳಿ, ಕಗ್ಗಲಹಳ್ಳಿ, ಟಿ ಹೊಸಳ್ಳಿ, ದ್ಯಾವಸಂದ್ರ ಗ್ರಾಪಂಗಳಿಗೆ 2015ರಲ್ಲಿ ನಡೆದ ಚುನಾವಣೆಯೇ ಕೊನೆಯದಾಗಿದೆ. ಉಳಿದ ಪಂಚಾಯಿತಿಗಳಿಗೆ ಕಳೆದ 2020ರಲ್ಲಿ ಚುನಾವಣೆ ನಡೆದಿದ್ದು ಅವುಗಳ ಅವಧಿಯೂ ಇನ್ನೇನು ಮುಗಿಯುತ್ತಾ ಬಂದಿದೆ. ಆದರೂ ಈ 4 ಗ್ರಾಮ ಪಂಚಾಯಿತಿಗಳಿಗೆ ಚುನಾವಣೆ ನಡೆಯದೇ ಸಾರ್ವಜನಿಕರಿಗೆ ಕೆಲಸ ಕಾರ್ಯಗಳಿಗೆ ತೊಂದರೆಯಾಗುತ್ತಿದೆ.
ಚುನಾವಣೆ ನಡೆಯದೇ ಇರುವುದರಿಂದ ಈ ನಾಲ್ಕು ಪಂಚಾಯಿತಿಗಳ ವ್ಯಾಪ್ತಿಯಲ್ಲಿ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದ್ದು, ಸಾರ್ವಜನಿಕರ ಕೆಲಸಗಳಿಗೆ ಹಿನ್ನಡೆಯಾಗಿದೆ. ಈ ನಾಲ್ಕು ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕೆಲವು ಗ್ರಾಮಗಳು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಸೇರುವುದರಿಂದ ಅವುಗಳನ್ನು ಹೊರತುಪಡಿಸಿ ಚುನಾವಣೆ ನಡೆಸಬೇಕಿದೆ. ಗ್ರಾಮ ಪಂಚಾಯಿತಿಯಲ್ಲಿ ಆಡಳಿತ ಮಂಡಳಿ ಇಲ್ಲದಿರುವುದರಿಂದ ಗ್ರಾಪಂ ಅಧಿಕಾರಿಗಳದ್ದೇ ದರ್ಬಾರ್ ನಡೆಯುತ್ತಿದೆ.
ಸವಲತ್ತುಗಳ ಬಗ್ಗೆ ಅರಿವಿಲ್ಲ
ಸ್ಥಳೀಯ ಗ್ರಾಮ ಪಂಚಾಯತಿಗಳಿಗೆ ಚುನಾವಣೆ ನಡೆದರೆ ಆಯ್ಕೆಯಾಗುವ ಸದಸ್ಯರು ಜನರಿಗೆ ಸರ್ಕಾರದಿಂದ ಲಭ್ಯವಿರುವ ಸವಲತ್ತುಗಳ ಬಗ್ಗೆ ಅರಿವು ಮೂಡಿಸುತ್ತಾರೆ. ಆದರೆ ಸದಸ್ಯರಿಲ್ಲದೆ ಸವಲತ್ತುಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವಿಲ್ಲದಂತಾಗಿದೆ.
ಜನಪ್ರತಿನಿಧಿಗಳ ಬೇಜವಾಬ್ದಾರಿ
ನಾಲ್ಕು ಗ್ರಾಪಂಗಳಿಗೆ ಚುನಾವಣೆ ನಡೆಯದೇ 4 ವರ್ಷಗಳು ಕಳೆದರೂ ಶಾಸಕರಾಗಲೀ, ಸಂಸದರಾಗಲೀ ಗಮನಹರಿಸದ ಕಾರಣ ಈ ಪಂಚಾಯಿತಿಗಳು ಅಭಿವೃದ್ಧಿಯಲ್ಲಿ ಹಿಂದೆ ಉಳಿದಿವೆ. ಒಟ್ಟಾರೆ ಈ 4 ಗ್ರಾಪಂಗಳಿಗೆ ಸರ್ಕಾರ ಚುನಾವಣೆ ನಡೆಸಿ ಅಭಿವೃದ್ಧಿ ಕೆಲಸಗಳಿಗೆ ವೇಗ ನೀಡಬೇಕಿದೆ ಎನ್ನುವುದು ಸಾರ್ವಜನಿಕರ ಒತ್ತಾಯವಾಗಿದೆ.
ಗ್ರಾಮ ಪಂಚಾಯಿತಿಯಲ್ಲಿ ಆಡಳಿತವಿಲ್ಲದೆ ಇ-ಖಾತೆ ಮಾಡಿಸಲಾಗುತ್ತಿಲ್ಲ. ನೀರಾವರಿ ಜಮೀನು ಇರುವುದರಿಂದ ಹೂಳೆತ್ತಿಸಲು ಸಾಧ್ಯವಾಗುತ್ತಿಲ್ಲ. ಬಡವರಿಗೆ ಅನುದಾನ ಕೊಡಿಸಲು ಆಗುತ್ತಿಲ್ಲ. ಪಂಚಾಯತಿಗಳಲ್ಲಿ ಯಾವುದೇ ಕೆಲಸಗಳಾಗುತ್ತಿಲ್ಲ. ಶೀಘ್ರವಾಗಿ ಈ ಪಂಚಾಯಿತಿಗಳಿಗೆ ಚುನಾವಣೆ ನಡೆಸಬೇಕು.
ಎಚ್.ಎಸ್. ಹರೀಶ್‌ಕುಮಾರ್, ಬಮುಲ್ ನಿರ್ದೇಶಕ, ಹೊನ್ನಲಗನದೊಡ್ಡಿ
ಪಂಚಾಯಿತಿ ಚುನಾವಣೆ ವಿಷಯವಾಗಿ ಚುನಾವಣಾ ಆಯೋಗ ಕೇಳಿದ್ದ ಎಲ್ಲ ಮಾಹಿತಿಯನ್ನೂ ನೀಡಿದ್ದೇವೆ. ಸರ್ಕಾರ ಹಾಗೂ ಚುನಾವಣಾ ಆಯೋಗ ಚುನಾವಣೆ ನಡೆಸುವ ಬಗ್ಗೆ ಕ್ರಮ ಕೈಗೊಳ್ಳಲಿದೆ.
ಸಿದ್ದಮುಗಿಲೇ ಗೌಡ, ಪಿಡಿಒ, ಕೊಳ್ಳಿಗನಹಳ್ಳಿ ಗ್ರಾಪಂ