ಕಾರವಾರ: ಮಳೆಗಾಲದ 61 ದಿನಗಳ ನಿಷೇಧದ ಅವಧಿ ಮುಕ್ತಾಯವಾಗಿ, ಆಳ ಸಮುದ್ರ ಮೀನುಗಾರಿಕೆಗೆ ಅವಕಾಶ ದೊರೆತು 10 ದಿನಗಳು ಕಳೆದಿವೆ.
ಆದರೆ, ಹೊರ ರಾಜ್ಯದ ಕಾರ್ಮಿಕರ ಕೊರತೆಯಿಂದ ಇಲ್ಲಿನ ಪರ್ಸೀನ್ ಬೋಟ್‌ಗಳು ಕಡಲಿಗಿಳಿಯಲು ಸಾಧ್ಯವಾಗಿಲ್ಲ.
ಕಾರವಾರ ಬೈತಖೋಲ್ ಬಂದರಿನಲ್ಲಿ 48 ಪರ್ಸೀನ್ ಬೋಟ್‌ಗಳಿದ್ದು, ಆಗಸ್ಟ್ 6 ರಿಂದ ಮೀನುಗಾರಿಕೆ ನಡೆಸಲು ಯೋಜಿಸಿದ್ದವು.
ಆದರೆ, ಇದುವರೆಗೂ ಒಡಿಶಾ, ಛತ್ತೀಸ್‌ಗಢ, ಜಾರ್ಖಂಡ್ ಭಾಗದಿಂದ ಬರಬೇಕಿದ್ದ ಸಾವಿರಕ್ಕೂ ಅಧಿಕ ಕಲಾಸಿಗಳು (ಕಾರ್ಮಿಕ) ತಲುಪದ ಕಾರಣ ಬೋಟ್‌ಗಳು ಬೈತಖೋಲ್ ಜಟ್ಟಿ ಬಿಟ್ಟು ಕದಲಿಲ್ಲ.
ವಾರಗಟ್ಟಲೇ ಆಳ ಸಮುದ್ರದಲ್ಲೇ ಇದ್ದು ಮೀನುಗಾರಿಕೆ ನಡೆಸುವ ಪ್ರತಿ ಪರ್ಸೀನ್ ಬೋಟ್‌ಗಳಲ್ಲಿ ದುಡಿಯಲು ಕನಿಷ್ಠ 35 ಜನ ಕಾರ್ಮಿಕರು ಬೇಕಾಗುತ್ತದೆ.
ಬೋಟ್‌ನ ಚಾಲಕ, ಸಹ ಚಾಲಕ, ಹಾರೇಮನ್, ಡಿಂಗಿ ಮನ್ ಮುಂತಾದ ಪ್ರಮುಖ ತಾಂತ್ರಿಕ ಕೌಶಲವಿರುವ, ಜವಾಬ್ದಾರಿಯುತ ಹುದ್ದೆಗಳಲ್ಲಿ ಮಾತ್ರ ಸ್ಥಳೀಯರಿದ್ದಾರೆ.
ಬಲೆ ಎಳೆಯಲು ಹೊರ ರಾಜ್ಯದ ಕಾರ್ಮಿಕರನ್ನು ಅವಲಂಬಿಸಿವೆ. ಇದರಿಂದ ಅವರಿಲ್ಲದೇ ಮೀನುಗಾರಿಕೆಯೇ ಇಲ್ಲ ಎಂಬ ಪರಿಸ್ಥಿತಿ ಈಗ ಬಂದಿದೆ.
ಏಕೆ ಸಮಸ್ಯೆ..?
`ಇಲ್ಲಿಗೆ ಕಾರ್ಮಿಕರಾಗಿ ಬರುವ ಒಡಿಶಾ ಛತ್ತೀಸ್‌ಗಢ, ಜಾರ್ಖಂಡ್ ಭಾಗದಲ್ಲಿ ಸಾಕಷ್ಟು ಮಳೆಯಾಗಿದೆ. ಸ್ಥಳೀಯವಾಗಿಯೇ ಕೃಷಿ ಕೆಲಸಗಳು ಸಾಕಷ್ಟಿರುವುದರಿಂದ ಇಲ್ಲಿಗೆ ಕೂಲಿ ಕೆಲಸಕ್ಕೆ ಬರಲು ಹಿಂದೇಟು ಹಾಕುತ್ತಿದ್ದಾರೆ. ಮುಖಂಡರ ಜತೆ ಚರ್ಚಿಸಿ ಅವರನ್ನು ಕರೆತರುವ ಕೆಲಸ ನಡೆಯುತ್ತಿದೆ. ಪ್ರತಿ ವರ್ಷ ಈ ಅವಽಯಲ್ಲಿ ನಮ್ಮಲ್ಲಿ ಅರಬ್ಬಿ ಸಮುದ್ರ ಪ್ರಕ್ಷುಬ್ಧವಾಗಿರುತ್ತಿತ್ತು. ಇದರಿಂದ ಮೀನುಗಾರಿಕೆ ತೆರಳಲು ಕಷ್ಟವಾಗುತ್ತಿತ್ತು.
ಈ ಬಾರಿ ಸಮುದ್ರದ ವಾತಾವರಣ ಆಳ ಸಮುದ್ರ ಮೀನುಗಾರಿಕೆಗೆ ಪೂರಕವಾಗಿದೆ. ಕಡಲಿಗಿಳಿದು ಬಲೆ ಬಿಡೋಣ ಎಂದರೆ, ಕಾರ್ಮಿಕರೇ ಬಂದಿಲ್ಲ' ಎನ್ನುತ್ತಾರೆ ಕಾರವಾರದ ಮೀನುಗಾರರ ಮುಖಂಡ ನಿತಿನ್ ಗಾಂವಕರ್.
ಕೆಲವೆಡೆ ಪ್ರಾರಂಭ
ಕಾರವಾರ ತಾಲೂಕಿನಲ್ಲಿ 218 ಟ್ರಾಲರ್(ಆರೇಳು ಜನರಿಂದ ನಡೆಯಬಲ್ಲ ಚಿಕ್ಕ ಬೋಟ್‌ಗಳು) ದೋಣಿಗಳು ನೋಂದಣಿಯಾಗಿವೆ. ಆದರೆ, ಅವುಗಳಲ್ಲೂ ಕಾರ್ಮಿಕರ ಕೊರತೆ ಉಂಟಾಗಿದೆ.
ಸ್ಥಳೀಯ ಕಾರ್ಮಿಕರನ್ನು ಸೇರಿಸಿಕೊಂಡು, ಅಲ್ಪ ಸ್ವಲ ಹೊರ ರಾಜ್ಯದ ಕಾರ್ಮಿಕರ ಜತೆ ಸೇರಿ 30 ರಿಂದ 40 ಬೋಟ್‌ಗಳು ಮಾತ್ರ ಕಾರ್ಯ ನಿರ್ವಹಿಸುತ್ತಿವೆ.
ಬೇಲೆಕೇರಿ ಭಾಗದಲ್ಲಿ ಕೆಲವು ಬೋಟ್‌ಗಳಿಗೆ ಈಗಾಗಲೇ ಕಾರ್ಮಿಕರು ಆಗಮಿಸಿದ್ದಾರೆ.
ಅಂಥ ದೋಣಿಗಳು ಮಾತ್ರ ಮೀನುಗಾರಿಕೆಗೆ ಇಳಿದಿವೆ ಎನ್ನುತ್ತಾರೆ ಆ ಭಾಗದ ಶ್ರೀಕಾಂತ ದುರ್ಗೇಕರ್. ತದಡಿಯಲ್ಲಿ ಈಗಾಗಲೇ ಮೀನುಗಾರಿಕೆ ಆರಂಭವಾಗಿದೆ.
ಭಟ್ಕಳ ಬಂದರಿನಲ್ಲಿ ಶುಕ್ರವಾರದಿಂದ ಪರ್ಸೀನ್ ಬೋಟ್‌ಗಳು ಮೀನುಗಾರಿಕೆ ಆರಂಭಿಸಿವೆ.
ಹೊರ ರಾಜ್ಯದ ಕಾರ್ಮಿಕರನ್ನು ಕರೆ ತಂದ ನಂತರ ನಮಗೆ ಮಾಹಿತಿ ನೀಡಿ ಎಂದು ದೋಣಿಗಳ ಮಾಲೀಕರಿಗೆ ನಾವು ಸೂಚಿಸುತ್ತೇವೆ. ಹೊರ ರಾಜ್ಯದಿಂದ ಬಂದವರ ಆರೋಗ್ಯ ತಪಾಸಣೆ ನಡೆಸಲಾಗುತ್ತದೆ. ಆದರೆ, ಇದುವರೆಗೂ ಯಾವುದೇ ಹೊರ ರಾಜ್ಯದ ಕಾರ್ಮಿಕರು ಬಂದ ಬಗ್ಗೆ ನಮಗೆ ದಾಖಲೆ ನೀಡಿಲ್ಲ.ಪ್ರತೀಕ ಶೆಟ್ಟಿಮೀನುಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ