ಜಿಲ್ಲೆ

ರಾಜಕೀಯ ಪಕ್ಷಗಳ ಗುಲಾಮರಾಗದಿರಿ ; ಶ್ರೀ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಅಭಿಮತ

ದೇವದುರ್ಗದಲ್ಲಿ ಹೇಮರಡ್ಡಿ ಮಲ್ಲಮ್ಮ ಜಯಂತಿ

ದೇವದುರ್ಗ: ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಆಶೀರ್ವಾದದಿಂದ ಹೆಮ್ಮರವಾಗಿ ಬೆಳೆದ ರಡ್ಡಿ ಸಮುದಾಯ ಯಾವುದೇ ಪಕ್ಷದ ಗುಲಾಮರಲ್ಲ. ರಾಜಕೀಯವನ್ನೇ ಬುಡಮೇಲು ಮಾಡುವ ಶಕ್ತಿಯಿದ್ದು, ಯಾರ ಗುಲಾಮಗಿರಿಗೂ ಒಳಗಾಗಬಾರದು ಎಂದು ಹೆಡಗಿಮದ್ರಾ ರಡ್ಡಿ ಗುರುಪೀಠದ ಶ್ರೀ ಶಾಂತಮಲ್ಲಿಕಾರ್ಜುನ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಪಟ್ಟಣದ ಸಾರ್ವಜನಿಕ ಕ್ಲಬ್ ಮೈದಾನದಲ್ಲಿ ಗುರುವಾರ ಆಯೋಜಿಸಿದ್ದ ಮಹಾಸಾಧ್ವಿ ಹೇಮರಡ್ಡಿ ಮಲ್ಲಮ್ಮ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಹೇಮರಡ್ಡಿ ಮಲ್ಲಮ್ಮ ಸಮುದಾಯ ಯಾರ ಹಂಗಿಲ್ಲದೆ 600 ವರ್ಷಗಳ ಹಿಂದೆಯೆ ಬೆಳೆದಿದೆ. ನನ್ನ ಭಕ್ತರಿಗೆ ಬಡತನವೇ ನೀಡಬೇಡ ಎಂದು ಶ್ರೀಶೈಲ ಮಲ್ಲಿಕಾರ್ಜುನ ದೇವರಿಗೆ ಮಲ್ಲಮ್ಮ ಬೇಡಿಕೊಂಡಿದ್ದರು. ಅವರ ಭಕ್ತಿಯ ಫಲವೇ ಇಂದು ಸಮುದಾಯ ದೊಡ್ಡಮಟ್ಟದಲ್ಲಿ ಬೆಳೆಯಲು ಸಾಧ್ಯವಾಗಿದೆ ಎಂದರು.

ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ್ ಮಾತನಾಡಿ, ಶಿಕ್ಷಣಕ್ಕೆ ಎಲ್ಲ ಸಮಸ್ಯೆಗಳನ್ನು ನಿವಾರಿಸುವ ಶಕ್ತಿಯಿದೆ. ಶಿಕ್ಷಣ ಪಡೆಯಲು ಯಾವುದೇ ಹಿಂಜರಿಕೆ ಬೇಡ. ರಡ್ಡಿ ಸಮುದಾಯ ಕಾಯಕಕ್ಕೆ ಹೆಚ್ಚಿನ ಆದ್ಯತೆ ನೀಡಿದೆ. ನಿಷ್ಠೆ, ಪ್ರಾಮಾಣಿಕತೆ ಹಾಗೂ ಸತತ ಪರಿಶ್ರಮದಿಂದ ಹಾಕಿಕೊಂಡ ಗುರಿ ಸಾಧಿಸಬಹುದು ಎಂದರು.

ಹಿರಿಯ ಮುಖಂಡ ಸಿ.ಎಸ್.ಪಾಟೀಲ್ ಮಾತನಾಡಿದರು. ಜಾಲಹಳ್ಳಿಯ ಶ್ರೀ ಜಯಶಾಂತಲಿಂಗ ಶಿವಾಚಾರ್ಯರು, ಶಿಖರಮಠದ ಶ್ರೀ ಕಪಿಲಸಿದ್ಧರಾಮ ಶಿವಾಚಾರ್ಯರು, ನೀಲಗಲ್‌ಮಠದ ಶ್ರೀ ಪಂಚಾಕ್ಷರಿ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಸಮುದಾಯ ತಾಲೂಕು ಅಧ್ಯಕ್ಷ ದೇವೀಂದ್ರಪ್ಪ ಗೌಡ ಹಂಚಿನಾಳ, ಪ್ರಮುಖರಾದ ಸಂಜೀವರೆಡ್ಡಿ ಸಾಹುಕಾರ, ನಾಗರಾಜ ಪಾಟೀಲ್, ಶರಣಗೌಡ ಗೌರಂಪೇಟೆ, ಸೋಮಶೇಖರ ಮಂದಕಲ್, ರಾಜಶೇಖರಗೌಡ ಮುಷ್ಟೂರು, ವೆಂಕಟರಾಯ ಇತರರಿದ್ದರು.