ದೇವದುರ್ಗ: ಮುಸ್ಲಿಂ ಮಹಿಳೆಯರನ್ನು ಅವಹೇಳನ ಮಾಡಿದ ಹಿಂದು ಸಂಘಟನೆ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಕ್ರಮಕೈಗೊಳ್ಳಲು ಆಗ್ರಹಿಸಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ಹಾಗೂ ವಿವಿಧ ಮುಸ್ಲಿಂ ಸಂಘಟನೆಗಳು ಪಟ್ಟಣದ ಡಾ.ಅಂಬೇಡ್ಕರ್ ವೃತ್ತದಿಂದ ಮಿನಿವಿಧಾನ ಸೌಧದವರೆಗೆ ಬೃಹತ್ ಪ್ರತಿಭಟನಾ ರ‌್ಯಾಲಿಯನ್ನು ಗುರುವಾರ ನಡೆಸಿದವು.
ಮಂಡ್ಯದ ಶ್ರೀರಂಗಪಟ್ಟಣದ ಹಿಂದು ಜಾಗರಣ ವೇದಿಕೆ ಕಾರ್ಯಕ್ರಮದಲ್ಲಿ ಆರ್‌ಎಸ್‌ಎಸ್‌ನ ಹಿಂದು ಮುಖಂಡ ಕಲ್ಲಡ್ಕ ಪ್ರಭಾರಕ ಭಟ್ ಕೋಮು ದ್ವೇಷ ಬಿತ್ತುವ ಹೇಳಿಕೆ ನೀಡಿದ್ದಾರೆ. ಅದರಲ್ಲೂ ಅಲ್ಪಸಂಖ್ಯಾತ ಮುಸ್ಲಿಂ ಮಹಿಳೆಯರ ಬಗ್ಗೆ ಕೀಳಾಗಿ ಮಾತನಾಡಿದ್ದಾರೆ. ಇದರಿಂದ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆಗೆ ಧಕ್ಕೆ ಬರಲಿದೆ. ಧರ್ಮ ಧರ್ಮಗಳ ಮಧ್ಯೆ ಜಗಳ ಹಚ್ಚುವ ಕುತಂತ್ರ ಅಡಗಿದೆ ಆಕ್ರೋಶ ವ್ಯಕ್ತಪಡಿಸಿದರು.
ಕಲ್ಲಡ್ಕ ಪ್ರಭಾಕರ ಭಟ್ ವಿರುದ್ಧ ಗೂಂಡಾಕಾಯ್ದೆ ಪ್ರಕರಣ ದಾಖಲಿಸಿ, ಗಡಿಪಾರು ಮಾಡಬೇಕು. ಕರ್ನಾಟಕ ಜಾನುವಾರು ಹತ್ಯೆ ಪ್ರತಿಬಂಧಕ ಮತ್ತು ಸಂರಕ್ಷಣಾ ಕಾಯ್ದೆ 2020 ರದ್ದುಪಡಿಸಬೇಕು. ಕೇಂದ್ರ ಸರ್ಕಾರ ರದ್ದು ಮಾಡಿರುವ ಅಲ್ಪಸಂಖ್ಯಾತರ ವಿದ್ಯಾರ್ಥಿ ವೇತನ ಮರು ಪ್ರಾರಂಭಿಸಬೇಕು ಎಂದು ಆಗ್ರಹಿಸಿದರು.