ಜಿಲ್ಲೆ

ವಿದ್ಯುತ್ ವಾಹನ ಸೌಲಭ್ಯದಲ್ಲಿ ರಾಜ್ಯ ಮುಂಚೂಣಿ

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ವಿದ್ಯುತ್ ವಾಹನ ಮೂಲ ಸೌಕರ್ಯ ಅಭಿವೃದ್ಧಿಯಲ್ಲಿ ದೇಶದಲ್ಲೇ ರಾಜ್ಯ ಮುಂಚೂಣಿಯಲ್ಲಿದ್ದು, ಸುಸ್ಥಿರ ಇಂಧನ ಬಳಕೆ ಮಾದರಿಯಲ್ಲೂ ನಮ್ಮ ರಾಜ್ಯದ್ದೇ ಮೊದಲ ಹೆಜ್ಜೆಯಾಗಿದೆ ಎಂದು ಇಂಧನ ಸಚಿವ ಕೆ.ಜೆ. ಜಾರ್ಜ್ ಹೇಳಿದರು.

ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ ಬೆಸ್ಕಾಂ ಸ್ಥಾಪಿಸಿರುವ ದೇಶದ ಪ್ರಥಮ ಸೌರಶಕ್ತಿ ಸಂಯೋಜಿತ ಸೆಕೆಂಡ್ ಲ್ೈ ಬ್ಯಾಟರಿ ಇವಿ ಚಾರ್ಜಿಂಗ್ ಕೇಂದ್ರವನ್ನು ಸೋಮವಾರ ಲೋಕಾರ್ಪಣೆಗೊಳಿಸಿ ಮಾತನಾಡಿದರು. ರಾಜ್ಯದಲ್ಲಿ ಹೆಚ್ಚುತ್ತಿರುವ ಇವಿ ಬೇಡಿಕೆಗೆ ಅನುಕೂಲವಾಗುವಂತೆ ಚಾರ್ಜಿಂಗ್ ಕೇಂದ್ರಗಳು ಹಾಗೂ ಮೂಲ ಸೌಕರ್ಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಬದ್ಧವಾಗಿದ್ದು, ರಾಜ್ಯದ ಇವಿ ನೀತಿ ಹೆಚ್ಚಿನ ಬಲ ತುಂಬಿದೆ. ಇದೀಗ ಏರ್‌ಪೋರ್ಟ್ ಸಮೀಪ ಇವಿ ಚಾರ್ಜಿಂಗ್ ಸ್ಟೇಷನ್ ಉದ್ಘಾಟಿಸಲಾಗಿದ್ದು, ಇದರಿಂದ ಕ್ಯಾಬ್ ಚಾಲಕರು, ಇವಿ ಬಳಕೆಯ ಸಾರ್ವಜನಿಕರಿಗೆ ಅನುಕೂಲವಾಗಲಿದೆ ಎಂದರು.

24 ಗಂಟೆ ಸರ್ವಿಸ್:

ಬೆಸ್ಕಾಂ, ಜರ್ಮನ್ ಕಾರ್ಪೊರೇಷನ್ ಫಾರ್ ಇಂಟರ್‌ನ್ಯಾಷನಲ್ ಕೋ ಆಪರೇಷನ್ (ಜಿಐಝಡ್) ಸಹಭಾಗಿತ್ವದಲ್ಲಿ ನಿರ್ಮಾಣಗೊಂಡಿರುವ ಬೃಹತ್ ಇವಿ ಚಾರ್ಜಿಂಗ್ ಹಬ್‌ನಲ್ಲಿ 23 ವಾಹನಗಳನ್ನು ಏಕಕಾಲದಲ್ಲಿ ಚಾರ್ಜ್ ಮಾಡಬಹುದಾಗಿದೆ. ಈ ಸ್ಟೇಷನ್‌ನಲ್ಲಿ ಸೌರ ವಿದ್ಯುತ್ತನ್ನು ಹಳೆಯ ಕಾರಿನ ಬ್ಯಾಟರಿಗಳಲ್ಲಿ ಶೇಖರಣೆ ಮಾಡಲಾಗುತ್ತದೆ. ಹಗಲಿನಲ್ಲಿ ಸೋಲಾರ್ ವಿದ್ಯುತ್ ಉತ್ಪಾದಿಸಿ ಅದನ್ನು ಬ್ಯಾಟರಿ ವ್ಯವಸ್ಥೆಯ ಸಹಾಯದಿಂದ ದಿನದ 24 ಗಂಟೆಯೂ ಇವಿ ವಾಹನಗಳಿಗೆ ಸರಬರಾಜು ಮಾಡಲಾಗುತ್ತದೆ ಎಂದು ಇಂಧನ ಸಚಿವರು ತಿಳಿಸಿದರು. ರಾಜ್ಯದಲ್ಲಿ 5,880 ಇವಿ ಚಾರ್ಜಿಂಗ್ ಸ್ಟೇಷನ್‌ಗಳಿವೆ. ಬೆಂಗಳೂರು ನಗರ ಜಿಲ್ಲೆಯಲ್ಲಿ 4,462 ಇವಿ ಚಾರ್ಜಿಂಗ್ ಸ್ಟೇಷನ್‌ಗಳಿವೆ. ಈ ವರ್ಷ ಹೊಸದಾಗಿ 140 ಚಾರ್ಜರ್‌ಗಳನ್ನು ಅಳವಡಿಸಲಾಗಿದೆ ಎಂದು ವಿವರಿಸಿದರು.

ಚಾರ್ಜಿಂಗ್ ಸ್ಟೇಷನ್ ವಿಶೇಷತೆ:

24 ಗಂಟೆ ಕಾಲ ಇವಿ ಚಾರ್ಜಿಂಗ್ ಸೌಲಭ್ಯ ನೀಡುವ ದೇಶದ ಮೊದಲ ಚಾರ್ಜಿಂಗ್ ಸ್ಟೇಷನ್ ಇದಾಗಿದೆ. ಈ ಹಬ್‌ನಲ್ಲಿ 45 ಕಿ.ವ್ಯಾ. ಸೌರ ವಿದ್ಯುತ್ ವ್ಯವಸ್ಥೆ ಮತ್ತು 100 ಕಿ.ವ್ಯಾ.ಎಚ್. ಸೆಕೆಂಡ್-ಲ್ೈ ಬ್ಯಾಟರಿ ಸಂಗ್ರಹಣೆ ಸಾಮರ್ಥ್ಯ ದೊಂದಿಗೆ ಏಕಕಾಲದಲ್ಲಿ 18 ಫಾಸ್ಟ್ ಚಾರ್ಜಿಂಗ್ ಪಾಯಿಂಟ್‌ಗಳು ಮತ್ತು 5 ಸ್ಲೋ ಚಾರ್ಜಿಂಗ್ ಪಾಯಿಂಟ್‌ಗಳೊಂದಿಗೆ 23 ಚಾರ್ಜಿಂಗ್ ಪಾಯಿಂಟ್‌ಗಳಿವೆ ಎಂದು ಬೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ಡಾ.ಎನ್.ಶಿವಶಂಕರ್ ತಿಳಿಸಿದರು.

ಬೆಸ್ಕಾಂ ಕೈಗೆಟುಕುವ ದರದಲ್ಲಿ ಇವಿ ಚಾರ್ಜಿಂಗ್ ಸೌಲಭ್ಯ ಒದಗಿಸುತ್ತಿದೆ. ಖಾಸಗಿಯವರ ಚಾರ್ಚಿಂಗ್ ದರ ನಮ್ಮ ಸ್ಟೇಷನ್‌ಗೆ ಹೋಲಿಸಿದರೆ 2-3 ಪಟ್ಟು ಹೆಚ್ಚಿದೆ ಎಂದು ಮಾಹಿತಿ ನೀಡಿದರು. ಬೆಸ್ಕಾಂನ ಇವಿ ಮಿತ್ರ ಅಪ್ಲಿಕೇಷನ್‌ನಲ್ಲಿ ಇವಿ ಚಾರ್ಜಿಂಗ್ ಸ್ಟೇಷನ್ ಸ್ಥಳ, ದರ, ಲಭ್ಯವಿರುವ ಸ್ಲಾಟ್‌ಗಳು ಎಂಬ ಮಾಹಿತಿ ಪಡೆಯಬಹುದು. ಅಥವಾ ಸ್ಟೇಷನ್‌ನಲ್ಲಿರುವ ಕ್ಯೂರ್‌ಕೋಡ್ ಸ್ಕ್ಯಾನ್ ಮಾಡಿ, ವಾಟ್ಸಪ್‌ಮೂಲಕವೂ ಹಣ ಪಾವತಿಸಿ ಚಾರ್ಜ್ ಮಾಡಬಹುದು ಎಂದು ತಿಳಿಸಿದರು.

ಹಲವು ಪ್ರಥಮಗಳಿಗೆ ಸಾಕ್ಷಿ:

ಎಲೆಕ್ಟ್ರಿಕ್ ವಾಹನಗಳನ್ನು ಬಳಕೆ ಮಾಡುತ್ತಿರುವ ಕ್ಯಾಬ್ ಚಾಲಕರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಬೆಂಗಳೂರು ವಿಮಾನ ನಿಲ್ದಾಣ ಸಮೀಪ ಹೊಸ ಚಾರ್ಜಿಂಗ್ ಸ್ಟೇಷನ್ ಆರಂಭಿಸಲಾಗಿದೆ, ವಿಮಾನ ನಿಲ್ದಾಣದಿಂದ ನಿತ್ಯ ಸುಮಾರು 10 ಸಾವಿರ ಕ್ಯಾಬ್‌ಗಳು ಬೆಂಗಳೂರಿಗೆ ಓಡಾಡುತ್ತವೆ. ಈ ಪೈಕಿ ಸಾವಿರಾರು ಎಲೆಕ್ಟ್ರಿಕ್ ಕಾರ್‌ಗಳಿದ್ದು, ಅವುಗಳ ಚಾರ್ಚಿಂಗ್‌ಗೆ ಸರ್ಕಾರದಿಂದ ವ್ಯವಸ್ಥೆ ಕಲ್ಪಿಸಿರುವುದು ವಿಶೇಷವಾಗಿದೆ, ದೇಶದಲ್ಲಿ ನಮ್ಮ ರಾಜ್ಯ ಇಂಥ ಹಲವು ಪ್ರಥಮಗಳಿಗೆ ಸಾಕ್ಷಿಯಾಗುತ್ತಿರುವುದು ಹೆಮ್ಮೆಯ ಸಂಗತಿ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದರು.