ಜಿಲ್ಲೆ

ಎತ್ತಿನಹೊಳೆ ಯೋಜನೆ ಸ್ಥಳ ಪರೀಲಿಸಿದ ರೇವಣ್ಣ

ಆಲೂರು: ಎತ್ತಿನಹೊಳೆ ಯೋಜನೆ ಕಾಮಗಾರಿಯಿಂದ ಮನೆಗಳಿಗೆ ಹಾನಿಯಾಗುತ್ತಿದೆ ಎಂದು ಆರೋಪಿಸಿ ಬುಧವಾರ ಗ್ರಾಮಸ್ಥರು ನಡೆಸುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಶಾಸಕ ಎಚ್.ಡಿ.ರೇವಣ್ಣ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರತಿಭಟನಾಕಾರರಿಗೆ ಬೆಂಬಲ ಸೂಚಿಸಿದರು.


ತಾಲೂಕಿನ ಪಾಳ್ಯ ಹೋಬಳಿಯ ಜಿಜಿ ಕೊಪ್ಪಲು, ಬೀರಕನಹಳ್ಳಿ ಗ್ರಾಮಗಳ ಬಳಿ ನಡೆಯುತ್ತಿರುವ ಎತ್ತಿನಹೊಳೆ ಯೋಜನೆಯ ಕಾಮಗಾರಿಗಳ ರೂಪುರೇಷೆ, ಸಾಧಕ-ಬಾಧಕಗಳ ಬಗ್ಗೆ ಚರ್ಚೆ ನಡೆಸಿ ಮಾಹಿತಿ ಪಡೆದುಕೊಂಡು ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಸರ್ಕಾರದ ಮಹತ್ವಪೂರ್ಣ ಯೋಜನೆಯಾದ ಎತ್ತಿನಹೊಳೆ ಕಾಮಗಾರಿ ಆಲೂರು ತಾಲೂಕಿನ ತಾಳೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿನ ಜಿ.ಜಿ.ಕೊಪ್ಪಲು ಬೀರಕನಹಳ್ಳಿ ಗ್ರಾಮಗಳ ಸಮೀಪದಲ್ಲಿ ಹಾದು ಹೋಗುತ್ತಿದ್ದು, ಸದ್ಯ ಭೂಮಿಗೆ ಮಾತ್ರ ಪರಿಹಾರವನ್ನು ನೀಡಲಾಗಿದೆ. ಬೃಹತ್ ಕಾಲುವೆ ನಿರ್ಮಾಣದ ಸಂದರ್ಭದಲ್ಲಿ ಕಲ್ಲು ಸಿಡಿಸಿದ್ದರಿಂದ ಗ್ರಾಮದಲ್ಲಿ ಹಲವು ಮನೆಗಳು ಹಾನಿಯಾಗಿವೆ. ಈ ಸಂಬಂಧ ಪರಿಹಾರ ನೀಡಲು ಸರ್ವೆ ನಡೆಸಿದರೂ ಪರಿಹಾರ ನೀಡಲು ಮೀನಮೇಷ ಎಣಿಸುತ್ತಿದ್ದಾರೆ. ಮನೆಗಳಿಗೆ ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದರೆ ಗ್ರಾಮಸ್ಥರೊಂದಿಗೆ ಜನಪ್ರತಿನಿಧಿಗಳು ಸೇರಿಕೊಂಡು ಕಾಮಗಾರಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರಲ್ಲದೆ, ಕೂಡಲೇ ಜಿಲ್ಲಾಧಿಕಾರಿಗಳು ಸೂಕ್ತ ಪರಿಹಾರ ನೀಡಲು ಕ್ರಮ ವಹಿಸಬೇಕು ಎಂದು ಆಗ್ರಹಿಸಿದರು.


ಈ ಸಂದರ್ಭದಲ್ಲಿ ಗ್ರಾಮಸ್ಥರು ಶಾಸಕ ಎಚ್.ಡಿ.ರೇವಣ್ಣ ಅವರಿಗೆ ಎತ್ತಿನಹೊಳೆ ಯೋಜನೆ ಅಧಿಕಾರಿಗಳು ಪೊಲೀಸ್ ಭದ್ರತೆಯಲ್ಲಿ ರಾತ್ರಿ ವೇಳೆ ಕಾಮಗಾರಿ ಮಾಡಲು ತಯಾರಿ ನಡೆಸುತ್ತಿದ್ದಾರೆ. ಕಾಮಗಾರಿಗೆ ಅಡ್ಡಿಪಡಿಸಲು ಮುಂದಾದವರನ್ನು ಬಂಧಿಸುತ್ತೇವೆ ಎಂದು ಹೆದರಿಸುತ್ತಾರೆ ಎಂದು ಅಳಲು ತೋಡಿಕೊಂಡರು.
ಇದಕ್ಕೆ ಪ್ರತಿಕ್ರಿಯಿಸಿ ಮಾತನಾಡಿ ರೇವಣ್ಣ, ಹಾನಿಗೊಳಗಾದ ಮನೆಗಳಿಗೆ ಸೂಕ್ತ ಪರಿಹಾರ ನೀಡಬೇಕು. ಪರಿಹಾರವನ್ನು ನೀಡದೆ ಕಾಮಗಾರಿ ಮಾಡಲು ಅಧಿಕಾರಿಗಳು ಮುಂದಾದರೆ ಜನಪ್ರತಿನಿಧಿಗಳೆಲ್ಲರೂ ಒಟ್ಟಾಗಿ ನ್ಯಾಯಕ್ಕಾಗಿ ಬೃಹತ್ ಹೋರಾಟ ನಡೆಸಬೇಕಾಗುತ್ತದೆ. ಪೊಲೀಸರು ಬಂಧಿಸುವುದಾದರೆ ಗ್ರಾಮಸ್ಥರನ್ನು ಬಿಟ್ಟು ಮೊದಲು ನಮ್ಮನ್ನು ಬಂಧಿಸಿಲಿ ನೋಡೋಣ? ಎಂದು ಸವಾಲೆಸೆದರು.

ಜಿಲ್ಲೆಯಲ್ಲಿ ಮಳೆ ಕೊರತೆ ಇದ್ದು, ರೈತರು ತಲೆ ಮೇಲೆ ಕೈ ಹೊತ್ತು ಕುಳಿತುಕೊಳ್ಳುವಂತಾಗಿದೆ. ಮಳೆಯು ಕೈಕೊಟ್ಟಿರುವುದರಿಂದ ಸಾವಿರಾರು ಹೆಕ್ಟೇರ್ ಪ್ರದೇಶದಲ್ಲಿ ಬೆಳೆದ ಮೆಕ್ಕೆಜೋಳ, ಭತ್ತ ಸೇರಿದಂತೆ ಅನೇಕ ಬೆಳೆಗಳು ನೀರಿಲ್ಲದೆ ಒಣಗಲು ಆರಂಭಿಸಿದ್ದು ರೈತರು ಕಂಗಾಲಾಗಿದ್ದಾರೆ. ಜಿಲ್ಲೆಯ ಹೇಮಾವತಿ ಜಲಾಶಯದಿಂದ 18 ಟಿಎಂಸಿ ನೀರನ್ನು ಹೊರಗಡೆ ಬಿಡಲಾಗಿದೆ. ಈ ನೀರು ಎಲ್ಲಿಗೆ ಹೋಯಿತು? ಅಧಿಕಾರಿಗಳನ್ನು ಕೇಳಿದರೆ ಮಾಹಿತಿ ನೀಡುತ್ತಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ತಿಂಗಳು ಕಳೆದರೂ ಅಧಿಕಾರಿಗಳು ಕಾನೂನಿನ ಚೌಕಟ್ಟಿನಲ್ಲಿ ಕೆಲಸ ಮಾಡುತ್ತಿಲ್ಲ. ರಾಜ್ಯ ಸರ್ಕಾರ ನೀರಾವರಿ ಸಲಹಾ ಸಮಿತಿಯನ್ನು ಮೊದಲು ರದ್ದುಪಡಿಸಬೇಕು. ರಾಜ್ಯ ಸರ್ಕಾರ ತಮಿಳುನಾಡಿನ ಹಿತ ಕಾಯುವುದರಲ್ಲಿ ಮುಂದಾಗಿದೆ. ಆದ್ದರಿಂದ ತಮಿಳುನಾಡಿನವರಿಗೆ ರಾಜ್ಯದ ಜಲಾಶಯಗಳ ಬಾಗಿಲು ಕೀ ಗಳನ್ನು ಕೊಟ್ಟು ಅವರಿಗೆ ಎಷ್ಟು ನೀರು ಬೇಕೋ ಅಷ್ಟು ಹರಿಸಲಿ ಎಂದು ಎಚ್.ಡಿ.ರೇವಣ್ಣ ಆರೋಪಿಸಿದರು.


ಮಾಜಿ ಶಾಸಕ ಎಚ್.ಕೆ.ಕುಮಾರಸ್ವಾಮಿ ಮಾತನಾಡಿ, ಪರಿಹಾರವನ್ನು ನೀಡುವ ಬಗ್ಗೆ ಎತ್ತಿನಹೊಳೆ ಯೋಜನೆಯ ಅಧಿಕಾರಿಗಳು ಭರವಸೆ ನೀಡಿ ವರ್ಷ ಕಳೆದರೂ ಯಾವುದೇ ಪರಿಹಾರ ಸಂತ್ರಸ್ತರಿಗೆ ಬಂದಿಲ್ಲ. ಗ್ರಾಮಸ್ಥರು ಈ ಬಗ್ಗೆ ಕೇಳಿದರೆ ಇಲ್ಲದ ಸಬೂಬು ಹೇಳುತ್ತಾರೆ. ಈ ಭಾಗದಲ್ಲಿ ಬಹುತೇಕ ಪರಿಶಿಷ್ಟ ಜನಾಂಗ ವಾಸವಿದ್ದು, ದಿನ-ನಿತ್ಯ ಕೂಲಿ ಕೆಲಸದಿಂದ ಜೀವನ ನಡೆಸುವ ಪರಿಸ್ಥಿತಿ ಇದೆ. ಇಂತಹ ಸಂದರ್ಭದಲ್ಲಿ ಅವರು ಹೇಗೆ? ಮನೆಗಳನ್ನು ಕಟ್ಟಿಕೊಳ್ಳಬೇಕಿದೆ. ಕಾಲುವೆ ಪಕ್ಕದಲ್ಲಿರುವ ಕಾರಣದಿಂದ ಸಂಬಂಧಪಟ್ಟವರು ಸೂಕ್ತ ಪರಿಹಾರ ನೀಡಬೇಕು, ಇಲ್ಲವಾದರೆ ಕಾಮಗಾರಿ ಸ್ಥಗಿತಗೊಳಿಸಿ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

ಜೆಡಿಎಸ್ ತಾಲೂಕು ಅಧ್ಯಕ್ಷ ಕೆ.ಎಸ್.ಮಂಜೇಗೌಡ, ತಾಲೂಕು ಪಂಚಾಯಿತಿ ಮಾಜಿ ಸದಸ್ಯ ನಟರಾಜ್ ನಾಕಲಗೂಡು, ತಾಳೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಉಮೇಶ್, ಸದಸ್ಯರಾದ ಪುಟ್ಟಸ್ವಾಮಿ ನಾಯ್ಕ, ಗೌಡೇಗೌಡ, ವಸಂತಸೋಮಶೇಖರ್, ರತ್ನಮ್ಮ, ಮೋಹನ್ ಕುಮಾರ್, ಮುಖಂಡರಾದ ಪಿ.ಎಲ್.ಲಿಂಗರಾಜು, ಯೋಗೇಶ್, ಮೂರ್ತಿ, ಸಬ್‌ಇನ್ಸ್‌ಪೆಕ್ಟರ್ ಗಳಾದ ಜನಾಭಾಯಿ ಕಡಪಟ್ಟಿ, ಚನ್ನೇಗೌಡ ಇತರರು ಇದ್ದರು.