ಜಿಲ್ಲೆ

ಮುಂದಿನ‌ ವರ್ಷ ಜೂನ್ ಗೆ ತುಮಕೂರಿಗೆ ಎತ್ತಿನಹೊಳೆ‌ ನೀರು !

ತುಮಕೂರು: ಎತ್ತಿನಹೊಳೆ ಯೋಜನೆ ಕಾಮಗಾರಿ ನಡೆಯುತ್ತಿದೆ. ಪ್ರತಿವರ್ಷ ಹಣ ಬಿಡುಗಡೆ ಮಾಡುತ್ತಿದ್ದೇವೆ. 2026ರ ಜೂನ್ ಗೆ ತುಮಕೂರಿಗೆ ಈ ಯೋಜನೆ ನೀರು ಹರಿಯುವ ನಿರೀಕ್ಷೆ ಇದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಜಿ.ಪರಮೇಶ್ವರ ಹೇಳಿದರು.

ಸಿದ್ದಗಂಗಾ ಮಠಕ್ಕೆ ಗುರುವಾರ ಬೆಳಗ್ಗೆ ಭೇಟಿ ನೀಡಿ ಮಠಾಧ್ಯಕ್ಷ ಸಿದ್ಧಲಿಂಗ ಶ್ರೀಗಳ ಆಶೀರ್ವಾದ ಪಡೆದು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಆರ್ಥಿಕ ವ್ಯವಸ್ಥೆಯಲ್ಲಿ ಎಷ್ಟು ಸಾಧ್ಯವಿದೆಯೋ ಅಷ್ಟು ಹಣವನ್ನು ಈ ಯೋಜನೆಗೆ ನೀಡುತ್ತಿದ್ದೇವೆ. ಬರುವ ಜೂನ್‌ ವೇಳೆಗೆ ಅರಸಿಕೆರೆಗೆ ನೀರು ತಲುಪಲಿದೆ ಎಂದು ತಜ್ಞರು ಹೇಳುತ್ತಿದ್ದಾರೆ. ಎರಡು-ಮೂರು ಕಡೆ ಅರಣ್ಯ ಭೂಮಿಯಿಂದ ಸಮಸ್ಯೆಯಾಗಿದೆ. ಅದು ಬಗೆಹರಿದರೆ 2026ರ ಜೂನ್‌ಗೆ ತುಮಕೂರಿಗೆ ಎತ್ತಿನಹೊಳೆ ನೀರು ಬರುತ್ತದೆ. ಮುಂದೆ ಚಿಕ್ಕಬಳ್ಳಾಪುರ, ಕೋಲಾರಕ್ಕೆ ನೀರು ಹರಿದು ಹೋಗುತ್ತದೆ ಎಂದರು.

ಸದ್ಯ ತುಮಕೂರು ನಗರಕ್ಕೆ ಕುಡಿಯುವ ನೀರಿನ ಸಮಸ್ಯೆಯಿಲ್ಲ. ಬುಗಡನಹಳ್ಳಿ ಕೆರೆಯಲ್ಲಿ ಶೇಖರಣೆ ಮಾಡಿರುವ ಹೇಮಾವತಿ ನೀರು ಜೂನ್, ಜುಲೈ ತಿಂಗಳವರೆಗೆ ಆಗುತ್ತದೆ ಎಂಬ ಮಾಹಿತಿಯನ್ನು ಪಾಲಿಕರ ಆಯುಕ್ತರು ಕೊಟ್ಟಿದ್ದಾರೆ. ಮೇ ತಿಂಗಳಲ್ಲಿ ಹೇಮಾವತಿಯಿಂದ ಎರಡು ಟಿಎಂಸಿ ನೀರು ಬಿಡಿಸುವಂತೆ ಹಾಸನ ಉಸ್ತುವಾರಿ ಸಚಿವ ಕೆ.ಎನ್.ರಾಜಣ್ಣ ಅವರ ಜತೆಗೆ ಮಾತನಾಡುತ್ತೇನೆ‌ ಎಂದು ತಿಳಿಸಿದರು.