ಜಿಲ್ಲೆ

ನೈತಿಕ ನಡವಳಿಕೆ, ಸಾಮಾಜಿಕ ಜವಾಬ್ದಾರಿ ಇರಲಿ: ಡಾ.ವೀರೇಂದ್ರ ಹೆಗ್ಗಡೆ

ಮಂಜುನಾಥ ತಿಮ್ಮಯ್ಯ

ಮೈಸೂರು: ಪ್ರತಿಯೊಂದು ಕ್ಷೇತ್ರದಲ್ಲೂ ನೈತಿಕ ನಡವಳಿಕೆ ಕಾಪಾಡಿಕೊಂಡು ಮುಂದುವರಿಯಬೇಕಿದೆ ಎಂದು ರಾಜ್ಯಸಭಾ ಸದಸ್ಯ, ಎಸ್‌ಡಿಎಂ ಐಎಂಡಿ ಛೇರ‌್ಮನ್ ಡಾ.ಡಿ.ವೀರೇಂದ್ರ ಹೆಗ್ಗಡೆ ಹೇಳಿದರು.


ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಇನ್‌ಸ್ಟಿಟ್ಯೂಟ್ ಫಾರ್ ಮ್ಯಾನೇಜ್‌ಮೆಂಟ್ ಡೆವಲಪ್‌ಮೆಂಟ್(ಎಸ್‌ಡಿಎಂ-ಐಎಂಡಿ) ಕಾಲೇಜಿನಲ್ಲಿ ಶುಕ್ರವಾರ ಸಂಜೆ ಆಯೋಜಿಸಿದ್ದ 29ನೇ ವಾರ್ಷಿಕ ಘಟಿಕೋತ್ಸವದಲ್ಲಿ ಮಾತನಾಡಿದರು.


ನಿರ್ವಹಣಾ ಅಭಿವೃದ್ಧಿ ವಿದ್ಯಾರ್ಥಿಗಳು ಲಾಭ ಮತ್ತು ಷೇರುದಾರರ ಮೌಲ್ಯ ಹೆಚ್ಚಿಸುವ ಕಡೆ ಮಾತ್ರ ಗಮನಕೊಡುವುದಲ್ಲ. ಬದಲಿಗೆ ನೈತಿಕ ನಡವಳಿಕೆ ಮತ್ತು ಕಾರ್ಪೋರೇಟ್ ಸಾಮಾಜಿಕ ಜವಾಬ್ದಾರಿಯ ಗುಣಮಟ್ಟವನ್ನೂ ಎತ್ತಿ ಹಿಡಿಯುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.


ಪಠ್ಯಕ್ರಮವನ್ನು ಮೀರಿದ ಪ್ರಾಯೋಗಿಕ ಶಿಕ್ಷಣವನ್ನು ಪಡೆದುಕೊಳ್ಳಬೇಕು. ಇದು ವೃತ್ತಿ ಶ್ರೇಣಿಗಳು ಮತ್ತು ಪುರಸ್ಕಾರದಿಂದ ದೊರೆಯಲ್ಲ. ಅದನ್ನು ಪ್ರಾಮಾಣೀಕರಿಸಲು ಆಗಲ್ಲ. ಅಲ್ಲದೆ, ಮೌಲ್ಯ ಮತ್ತು ನೈತಿಕತೆ ಜೀವನದ ದಾರಿ ದೀಪವಾಗಬೇಕು. ಅದು ವೃತ್ತಿಯಲ್ಲೂ ಪ್ರಜ್ವಲಿಸಬೇಕು. ಇದು ಸಮಾಜ ಮತ್ತು ಮನುಕುಲಕ್ಕೆ ಲಾಭ ಆಗಲಿದೆ. ವೈಯಕ್ತಿಕ ಯಶಸ್ಸಿಗೂ ಕಾರಣವಾಗಲಿದೆ ಎಂದರು.


ನಮ್ಮ ಎಲ್ಲ ಸಂಸ್ಥೆಗಳಲ್ಲೂ ನೈತಿಕತೆ, ಮೌಲ್ಯ, ಸಾಮಾಜಿಕ ಜವಾಬ್ದಾರಿಗೆ ಒತ್ತು ನೀಡಲಾಗಿದೆ. ಇದು ಜಾರಿಗೆ ಶಿಕ್ಷಣ ಅಸ್ತ್ರವಾಗಿದೆ. ಎಸ್‌ಡಿಎಂಐಎಂಡಿ ಶಿಕ್ಷಣ ಸಂಸ್ಥೆಯಲ್ಲೂ ಗುಣಮಟ್ಟ ಶಿಕ್ಷಣ ಮತ್ತು ಸತ್ಪ್ರಜೆಗಳನ್ನು ರೂಪಿಸಲು ಶ್ರಮಿಸುತ್ತಿದೆ. ಇಲ್ಲಿ ಕಲಿತ ಹಳೇ ವಿದ್ಯಾರ್ಥಿಗಳು ಉದ್ಯಮ, ಸಮಾಜದಲ್ಲಿ ಜವಾಬ್ದಾರಿಯುತ ಮತ್ತು ಉನ್ನತ ಸ್ಥಾನ ಹೊಂದಿದ್ದಾರೆ ಎಂದು ಸಂತಸ ವ್ಯಕ್ತಪಡಿಸಿದರು.


ನಿರ್ವಹಣ ಕೋರ್ಸ್‌ಗಳು ಕೇವಲ ಜ್ಞಾನವನ್ನು ಪಡೆದುಕೊಳ್ಳುವುದರ ಬಗ್ಗೆ ಅಲ್ಲ. ಇದು ವಿದ್ಯಾರ್ಥಿ ಕೌಶಲ ಗೌರವಿಸುವ, ದೃಷ್ಟಿಕೋನ ವಿಸ್ತರಿಸುವ, ನಾಯಕನ ಮನಸ್ಥಿತಿಯನ್ನು ಬೆಳೆಸುವುದಾಗಿದೆ. ಜತೆಗೆ ನಿಜವಾದ ನಾಯಕತ್ವವು ಆಜ್ಞೆ ಮತ್ತು ನಿಯಂತ್ರಣವಲ್ಲ. ಇದು ಪರಾನುಭೂತಿ, ನಮ್ರತೆ ಮತ್ತು ಇತರರನ್ನು ಶ್ರೇಷ್ಠತೆಗೆ ಪ್ರೇರೇಪಿಸುವ ಸಾಮರ್ಥ್ಯವಾಗಿದೆ ಎಂದರು.


2022-24ನೇ ಬ್ಯಾಚ್‌ನ ಕೆ.ಕೆ.ಕರುಂಬಯ್ಯ, ಅಕೀರ್ತಿ ಶರ್ಮಾ, ಸಾಯಿ ಕಿರಣ್ ಮಿನ್ನುಕುರಿ, ರಜತ್ ಶಾಹ ಚಿನ್ನದ ಪದಕ ಪಡೆದುಕೊಂಡರು. 171 ವಿದ್ಯಾರ್ಥಿಗಳಿಗೆ ಪದವಿ ಪ್ರದಾನ ಮಾಡಲಾಯಿತು.

ಟಿಮ್ಕನ್ ಇಂಡಿಯಾ ಲಿಮಿಟೆಡ್ ಛೇರ‌್ಮನ್, ವ್ಯವಸ್ಥಾಪಕ ನಿರ್ದೇಶಕ ಸಂಜಯ್ ಕೌಲ್, ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಉಪಾಧ್ಯಕ್ಷ ಡಿ.ಸುರೇಂದ್ರಕುಮಾರ್, ಕಾಲೇಜಿನ ಆಡಳಿತ ಮಂಡಳಿ ಸದಸ್ಯರಾದ ಆರ್.ವೆಂಕಟೇಶ್ ನಾರಾಯಣ್, ಡಾ.ಕಮಲ್ ಬಾಲಿ, ಡಿ.ಎನ್.ಮುತ್ತುಕುಮಾರ್, ಡಾ.ಎಚ್.ಚತುರ್ವೇದಿ, ಕಾಲೇಜಿನ ನಿರ್ದೇಶಕ ಡಾ.ಎಸ್.ಎನ್.ಪ್ರಸಾದ್ ಇನ್ನಿತರರಿದ್ದರು.