ಜಿಲ್ಲೆ

ಎಥೆನಾಲ್ ಬಳಕೆ ಹೆಚ್ಚು, ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಇಳಿಕೆ: ನಿತಿನ್ ಗಡ್ಕರಿ

ಮೈಸೂರು: ರಾಸಾಯನಿಕ ಬದಲಾಗಿ ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು ಎಂದು ಕೇಂದ್ರ ರಸ್ತೆ ಸಾರಿಗೆ ಮತ್ತು ರಾಷ್ಟ್ರೀಯ ಹೆದ್ದಾರಿ ಸಚಿವ ನಿತಿನ್ ಗಡ್ಕರಿ ಹೇಳಿದರು.


ಸೀಪಾ ಸಂಸ್ಥೆ ವತಿಯಿಂದ ಉತ್ತರಪ್ರದೇಶದ ನೊಯ್ಡದಲ್ಲಿರುವ ಜೆಎಸ್‌ಎಸ್ ತಾಂತ್ರಿಕ ಶಿಕ್ಷಣ ಅಕಾಡೆಮಿಯಲ್ಲಿ ಮಂಗಳವಾರ ಆಯೋಜಿಸಿದ್ದ ಸುಸ್ಥಿರ ಭಾರತ-2023 ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ರೈತರು ರಸಗೊಬ್ಬರ ಮತ್ತು ಕ್ರಿಮಿನಾಶಕ ಬಳಸುವುದನ್ನು ಕಡಿಮೆ ಮಾಡಬೇಕು ಎಂದು ಸಲಹೆ ನೀಡಿದರು.


ರೈತ ಈಗ ಅನ್ನದಾತ ಮಾತ್ರವಲ್ಲ, ಆತ ಶಕ್ತಿದಾತನೂ ಆಗಿದ್ದಾನೆ. ಹಾಗಾಗಿ, ಸಾವಯವ ಕೃಷಿ ಪದ್ಧತಿ ಅಳವಡಿಸಿಕೊಂಡರೆ ಜನರ ಆರೋಗ್ಯವೂ ಉತ್ತಮವಾಗಿರುತ್ತದೆ. ಆಗ ಸದೃಢ ದೇಶ ಕಟ್ಟಲು ಸಾಧ್ಯವಾಗುತ್ತದೆ. ಜಗತ್ತಿನಲ್ಲಿ ಯಾವ ವಸ್ತುವಾಗಲಿ, ವ್ಯಕ್ತಿಯಾಗಲಿ ಅನವಶ್ಯಕವಲ್ಲ. ಆದರೆ, ಅವುಗಳನ್ನು ಹೇಗೆ ಬಳಸುತ್ತೇವೆ ಎಂಬುದು ಮುಖ್ಯವಾಗುತ್ತದೆ. ಪರಿಸರಕ್ಕೆ ಪೂರಕವಾದ ಸೌರ, ವಾಯು ಶಕ್ತಿಯನ್ನು ಹೆಚ್ಚು ಬಳಸಬೇಕು ಎಂದರು.


ಭಾರತದಲ್ಲಿ ಎಥೆನಾಲ್ ಬಳಕೆ ಹೆಚ್ಚುತ್ತಿದೆ. ಪೆಟ್ರೋಲಿಯಂ ಉತ್ಪನ್ನಗಳ ಬಳಕೆ ಕಡಿಮೆಯಾಗುತ್ತಿದೆ ಎಂದು ಹೇಳಿದರು.


ಸುತ್ತೂರು ಮಠ ಅಧ್ಯಾತ್ಮ ಮತ್ತು ವಿಜ್ಞಾನದ ಸಮ್ಮಿಲನ ಕೇಂದ್ರವಾಗಿದೆ. ಎರಡನ್ನೂ ಸಮತೋಲನಗೊಳಿಸಿಕೊಂಡು ಸಾಗುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.


ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಮಾತನಾಡಿ, ಪ್ರಕೃತಿ ಮತ್ತು ಮಾನವನ ನಡುವೆ ಸಾಮರಸ್ಯದ ಸಹಬಾಳ್ವೆ ಸೃಷ್ಟಿಸಲು ನಾವೀನ್ಯತೆ ಅಳವಡಿಸಿಕೊಳ್ಳಬೇಕಿದೆ. ಕನಸುಗಳು ಮತ್ತು ಆಕಾಂಕ್ಷೆಗಳೊಂದಿಗೆ ಸುಸ್ಥಿರ ಭವಿಷ್ಯಕ್ಕಾಗಿ ಒಂದಾಗಿ ಸಾಗಬೇಕಿದೆ. ಸುಸ್ಥಿರತೆ ಎಂಬುದು ಪ್ರಸ್ತುತ ಅತ್ಯಂತ ಅರ್ಹವಾದ ನಿರ್ಣಾಯಕ ವಿಷಯವಾಗಿದೆ. ಎಲ್ಲ ಜೀವಿಗಳು ಇದನ್ನು ತಮ್ಮ ಆದ್ಯತೆಯಾಗಿ ಪರಿಗಣಿಸಬೇಕು ಎಂದರು.


ಇಂತಹ ಸಮ್ಮೇಳನಗಳು ಪ್ರಕೃತಿ ಮತ್ತು ಆರ್ಥಿಕ ಅಭಿವೃದ್ಧಿಯ ನಡುವೆ ಸಾಮರಸ್ಯವನ್ನು ತರುವುದರೊಂದಿಗೆ, ಸರ್ಕಾರ ಮತ್ತು ಸಮಾಜದ ಬದ್ಧತೆ ಹೆಚ್ಚಿಸುತ್ತವೆ. ಸುಸ್ಥಿರ ಭಾರತಕ್ಕಾಗಿ ಸೀಪಾದಂತಹ ಸಂಸ್ಥೆಗಳು ಕೈಗೊಳ್ಳುತ್ತಿರುವ ಜಾಗೃತಿ ಕಾರ್ಯಕ್ರಮಗಳು ಶ್ಲಾಘನೀಯ ಎಂದು ತಿಳಿಸಿದರು.


ಸೋಲಾರ್ ಎನರ್ಜಿ ಕಾರ್ಪೋರೇಷನ್ ಆಫ್ ಇಂಡಿಯಾ ಅಧ್ಯಕ್ಷ ಪ್ರೊ.ಆರ್.ಪಿ. ಗುಪ್ತಾ, ಸೀಪಾ ಸಂಸ್ಥೆ ಅಧ್ಯಕ್ಷ ಡಾ.ರಘುರಾಮ್ ಅರ್ಜುನನ್, ಎಪಿಜೆ ಅಬ್ದುಲ್ ಕಲಾಂ ವಿಶ್ವವಿದ್ಯಾಲಯ ಕುಲಪತಿ ಪ್ರೊ.ಜೆ.ಪಿ.ಪಾಂಡೆ, ಜೆಎಸ್‌ಎಸ್ ಮಹಾವಿದ್ಯಾಪೀಠದ ಕಾರ್ಯನಿರ್ವಾಹಕ ಕಾರ್ಯದರ್ಶಿ ಡಾ.ಸಿ.ಜಿ. ಬೆಟಸೂರಮಠ ಪಾಲ್ಗೊಂಡಿದ್ದರು.