ಜಿಲ್ಲೆ

ದೇವರ ನಾಮಸ್ಮರಣೆಯಿಂದ ಶಾಶ್ವತ ಸುಖ ಪ್ರಾಪ್ತಿ

ಉಪ್ಪಿನಬೆಟಗೇರಿ: ಸುಖ, ಸಂಪತ್ತು ಕ್ಷಣಿಕವಾಗಿದ್ದು, ಶಾಶ್ವತವಾದ ಸುಖ ಪಡೆಯಬೇಕಾದರೆ, ದೇವರ ನಾಮಸ್ಮರಣೆಯಲ್ಲಿ ತೊಡಗಿಕೊಳ್ಳಬೇಕು ಎಂದು ಉಪ್ಪಿನಬೆಟಗೇರಿ ಮೂರುಸಾವಿರ ವಿರಕ್ತಮಠದ ಕುಮಾರ ವಿರೂಪಾಕ್ಷ ಸ್ವಾಮೀಜಿ ಹೇಳಿದರು.

ಬನದ ಹುಣ್ಣಿಮೆ ಅಂಗವಾಗಿ ಗ್ರಾಮದ ಮೂರುಸಾವಿರ ವಿರಕ್ತಮಠದಲ್ಲಿ ಶ್ರೀ ಗುರು ವಿರೂಪಾಕ್ಷೇಶ್ವರ ಅಕ್ಕನ ಬಳಗದ ಸಹಯೋಗದಲ್ಲಿ ಸೋಮವಾರ ಏರ್ಪಡಿಸಿದ್ದ ಮಾಸಿಕ ಶಿವಾನುಭವ ಗೋಷ್ಠಿಯನ್ನು ಉದ್ಘಾಟಿಸಿ ಅವರು ಆಶೀರ್ವಚನ ನೀಡಿದರು.

ಪರಮಾತ್ಮನ ಚೈತನ್ಯದಿಂದ ಶರೀರಕ್ಕೆ ಆತ್ಮ ಬಂದಿದೆ ಎಂಬ ಮನೋಭಾವ ಹೊಂದಿದ ಪ್ರತಿಯೊಬ್ಬರೂ ಪ್ರಪಂಚದಲ್ಲಿ ಸುಖಿಯಾಗಿರುತ್ತಾರೆ. ಧನ ಮತ್ತು ವಿದ್ಯೆ ಎಂಬ ಸಂಪತ್ತನ್ನು ವಿನಿಯೋಗಿಸುತ್ತ ಹೋದಂತೆ ಅದು ಇನ್ನಷ್ಟು ಬೆಳೆಯುತ್ತದೆ. ಮಠ ಮತ್ತು ಧಾರ್ವಿುಕ ಕೇಂದ್ರಗಳಿಂದ ಮನಸಿಗೆ ಶಾಂತಿ, ನೆಮ್ಮದಿ ದೊರಕಲಿದ್ದು, ಪ್ರತಿಯೊಬ್ಬರೂ ಇಂಥ ಪವಿತ್ರ ಸ್ಥಳಗಳಿಗೆ ಭೇಟಿ ನೀಡುತ್ತ ಗುರುಗಳು ನೀಡುವ ಹಿತೋಪದೇಶ ಆಲಿಸಬೇಕು ಎಂದರು.

ಖೇಡಗಿಯ ಪ್ರಭು ದೇವರು, ನಿರುಪಾದಿ ದೇವರು ಸಾನ್ನಿಧ್ಯ ವಹಿಸಿ ಮಾತನಾಡಿದರು. ಮಕ್ಕಳು ವಚನ ಹೇಳಿ ಬಹುಮಾನ ಪಡೆದರು. ಡಾ.ಡಿ.ಐ. ನದಾಫ್, ಎಫ್.ವೈ. ಮಡಿವಾಳರ, ಬಸವರಾಜ ಮಸೂತಿ, ಸುನಂದಾ ಮಡಿವಾಳರ, ಮಹಾನಿಂಗ ಆಯಟ್ಟಿ, ಹಸನಸಾಬ್ ನದಾಫ, ಗಂಗಪ್ಪ ತಳವಾರ, ಈರಯ್ಯ ಗೌರಿಮಠ, ಮೈಲಾರಪ್ಪ ಮಡಿವಾಳರ, ಇತರರು ಇದ್ದರು.