ಸಿ.ಎಂ.ನಾಡಿಗೇರ್, ಭರಮಸಾಗರ
ಭರಮಸಾಗರ ಏತ ನೀರಾವರಿ ಯೋಜನೆಯಡಿ ಈಗಾಗಲೇ 42 ಕೆರೆಗಳಿಗೆ ನೀರು ತುಂಬಿಸುವ ಕಾರ್ಯ ಫಲಪ್ರದಗೊಂಡಿದ್ದು, ಸುತ್ತಲಿನ ಗ್ರಾಮಗಳು ಸೇರಿದಂತೆ ಸಮೀಪದ ಕಾತ್ರಾಳು ಕೆರೆಗೆ ನೀರು ಹರಿದು ಯಳಗೋಡು, ಮುದ್ದಾಪುರ ಕೆರೆ ಸದ್ಯ ಭರ್ತಿಗೊಂಡ ಕಾರಣ ಈ ಭಾಗದ ರೈತರ ಮೊಗದಲ್ಲಿ ಮಂದಹಾಸ ಮೂಡಿಸಿದೆ.
ಹರಿಹರದ ರಾಜನಹಳ್ಳಿ ಬಳಿಯ ಜಾಕ್ವೆಲ್ ನಿಂದ ಭರಮಸಾಗರದ ಸಂಗ್ರಹಣಾ ಕೆರೆಯಲ್ಲಿ ನೀರು ಶೇಖರಿಸಿ ಇಲ್ಲಿಂದ ಜಾಕ್ವೆಲ್ ಮೂಲಕ 41 ಕೆರೆಗಳಿಗೆ ನೀರು ಹರಿಸುವ (ರೂ. 556ಕೋಟಿ ರೂ. ವೆಚ್ಚದ) ಯೋಜನೆ ಇದಗಿದ್ದು, ಆರಂಭಗೊಂಡ ಎರಡು ವರ್ಷದಲ್ಲಿಯೇ ಯಶಸ್ವಿಗೊಂಡಿದೆ. ಈ ಯೋಜನೆಯ ಪ್ರತಿ ಹಂತದಲ್ಲಿಯೂ ಸಿರಿಗೆರೆ ಶ್ರೀಗಳು ತಮ್ಮ ಮಾರ್ಗದರ್ಶನ ನೀಡಿ ಈ ಹಿಂದೆ ವಿಫಲಗೊಂಡ ಹಲವು ನೀರಾವರಿ ಯೋಜನೆಗಳ ದೋಷಗಳನ್ನು ಮನಗಂಡು ಅದರಂತೆ ಆಗದಿರಲು ತಾವೇ ಸ್ವತಃ ಕಾಮಗಾರಿ ಪರಿಶೀಲಿಸಿದ್ದರ ಪರಿಣಾಮ ಯೋಜನೆ ಕೊನೆಯ ಹಂತ ತಲುಪಿದೆ ಎಂದರೆ ತಪ್ಪಾಗಲಾರದು.
5 ಕೆರೆಗಳಿಗೆ ನೀರುಣಿಸುವಿಕೆ ಹಿನ್ನಡೆ:
ಆಲಘಟ್ಟದ ಬಳಿಯ ಜಾಕ್‌ವೆಲ್ 3 ರ ಕಾಮಗಾರಿ ಮುಗಿದ್ದಿದ್ದರೂ ಅಲ್ಲಿ ಸ್ವಲ್ಪಮಟ್ಟಿನ ಭೂಸ್ವಾಧೀನದಲ್ಲಿ ಅಡೆತಡೆಯುಂಟಾಗಿದೆ. ಇದರಿಂದಾಗಿ ಕೋಣನೂರು, ಬೊಮ್ಮೇನಹಳ್ಳಿ, ದೊಡ್ಡಾಲಘಟ್ಟ, ವಡ್ಡರಸಿದವನಹಳ್ಳಿ, ಕಡ್ಲೆಗುದ್ದು ಈ 5 ಕೆರೆಗಳಿಗೆ ಮಾತ್ರ ನೀರುಣಿಸುವುದು ಬಾಕಿ ಇದೆ.
ಕೂಡಲೇ ಅದನ್ನು ಬಗೆಹರಿಸಲು ಸಿರಿಗೆರೆ ಶ್ರೀಗಳೇ ಮುಂದಾಗಬೇಕಿದೆ ಎನ್ನುತ್ತಾರೆ ಆ ಭಾಗದ 5 ಕೆರೆ ಅಚ್ಚುಕಟ್ಟು ಆಶ್ರಿತ ರೈತರು.
ಸದ್ಯ ಕಾತ್ರಾಳು ಕೆರೆಗೆ ನೀರು ಹರಿಸಲಾಗುತ್ತಿದ್ದು, ಮುಂದುವರಿದ ಭಾಗವಾಗಿ ಈಗ ಮುದ್ದಾಪುರ, ಯಳಗೋಡು ಕೆರೆಗಳಿಗೂ ನೀರು ಹರಿದಿದ್ದನ್ನು ಕಂಡ ರೈತರು ಸಿಹಿ ಹಂಚಿ ಸಂಭ್ರಮಿಸಿದರು. ಈಗಾಗಲೇ ಹೋಬಳಿಯಾದ್ಯಂತ ಅಂತರ್ಜಲ ಹೆಚ್ಚಾಗುತ್ತಲಿದ್ದು, ರೈತರು ತೋಟ ಮಾಡಲು ಮುಂದಾಗಿದ್ದಾರೆ. ಜೊತೆಗೆ ವಿಫಲಗೊಂಡ ಕೊಳವೆಬಾವಿಗಳು ಮರುಜೀವ ಪಡೆದಿವೆ. ಈ ಮೂಲಕ ನೀರು ಹರಿಸಿ ರೈತರು ತಮ್ಮ ಬೆಳೆಗಳನ್ನು ಕಾಪಾಡಿಕೊಳ್ಳಲು ಮುಂದಾಗಿದ್ದಾರೆ.
ಈಗಾಗಲೇ ಆವರಿಸಿರುವ ಬರದ ಛಾಯೆಯಲ್ಲಿ ಈ ಕೆರೆ ತುಂಬಿಸುವ ಯೋಜನೆಯಿಂದ ಸ್ವಲ್ಪಮಟ್ಟಿಗೆ ನಿಟ್ಟುಸಿರು ಬಿಡುವಂತಾಗಿದೆ.
ಸಿರಿಗೆರೆ ಶ್ರೀಗಳ ದೂರದೃಷ್ಟಿಯ ಫಲವಾಗಿ ರೈತರು ತಮ್ಮ ಜಮೀನುಗಳಲ್ಲಿ ನೀರು ಕಾಣುವಂತಾಗಿದೆ. ಬಾಕಿ ಇರುವ ಇನ್ನೂ 5 ಕೆರೆಗಳಿಗೆ ಶ್ರೀಗಳ ಮದ್ಯಸ್ಥಿಕೆಯಿಂದ ನೀರು ಹರಿಯುವ ಆಶಾಭಾವನೆ ಇದೆ
ನಾಗಣ್ಣ, ರೈತಸಂಘದ ಜಿಲ್ಲಾಧ್ಯಕ್ಷ