ಮೈಸೂರು: ಹಾಸನದಲ್ಲಿ ಹಮ್ಮಿಕೊಂಡಿರುವ ಜನಕಲ್ಯಾಣ ಸಮಾವೇಶದಲ್ಲಿ ಕನಿಷ್ಠ 3 ಲಕ್ಷ ಜನರು ಸೇರುವ ನಿರೀಕ್ಷೆ ಇದೆ ಎಂದು ಕೆಪಿಸಿಸಿ ವಕ್ತಾರ ಎಂ. ಲಕ್ಷ್ಮಣ್ ಹೇಳಿದರು.
ಜನಕಲ್ಯಾಣ ಸಮಾವೇಶ ಯಾವ ಉದ್ದೇಶಕ್ಕೆ ನಡೆಸಲಾಗುತ್ತಿದೆ ಎಂದು ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಪ್ರಶ್ನಿಸುತ್ತಿದ್ದಾರೆ. ಸಮಾವೇಶ ನಡೆಸಲು ಕಾರಣವಾಗಿರುವ ಅಂಶಗಳಿಗೆ ನಾನು ಉತ್ತರ ಕೊಡುತ್ತೇನೆ. ಹಾಸನದಲ್ಲಿ ಲೈಂಗಿಕ ಸಂತ್ರಸ್ತರಿಗೆ ಧೈರ್ಯ ತುಂಬುವ ಕಾರ್ಯವನ್ನು ನಮ್ಮ ಸರ್ಕಾರ ಮಾಡಿದೆ. ಗಂಡಸರು ಸಹ ಲೈಂಗಿಕವಾಗಿ ತೊಂದರೆ ಅನುಭವಿಸಿದ್ದಾರೆ. ಮಾಜಿ ಪ್ರಧಾನಿ ಮೊಮ್ಮಕ್ಕಳು ದೌರ್ಜನ್ಯ ನಡೆಸಿದರೂ ನಮ್ಮ ಸರ್ಕಾರ ಸಂತ್ರಸ್ತರ ಪರವಾಗಿದೆ. ಈ ವಿಚಾರವನ್ನು ಜನತೆಗೆ ತಿಳಿಸಲು ಸಮಾವೇಶ ನಡೆಸುತ್ತಿದ್ದೇವೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಬಿಜೆಪಿಯ 63 ಶಾಸಕರ ಪೈಕಿ ಎಷ್ಟು ಶಾಸಕರು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹಾಗೂ ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಪರವಾಗಿ ಇದ್ದಾರೆ ಎಂಬುದನ್ನು ಸ್ಪಷ್ಟಪಡಿಸಲಿ. ವಿಜಯೇಂದ್ರ ಅವರನ್ನು ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಹಾಗೂ ಇತರರು ದಿನಬೆಳಗಾದರೆ ಕಳ್ಳ ಎಂದು ಕರೆಯುತ್ತಿದ್ದಾರೆ. ಈ ವಿಚಾರವನ್ನು ಜನತೆಗೆ ತಿಳಿಸಲು ಕಾಂಗ್ರೆಸ್ ಸಮಾವೇಶ ನಡೆಸುತ್ತಿದೆ ಎಂದರು.
ಬಿಜೆಪಿ ಹಾಗೂ ಜೆಡಿಎಸ್ ನಾಯಕರು ತಮ್ಮ ತಪ್ಪುಗಳನ್ನು ಮರೆಮಾಚಲು ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಹಲವಾರು ಸುಳ್ಳು ಆರೋಪಗಳನ್ನು ಮಾಡುತ್ತಿದ್ದಾರೆ. ಇದನ್ನು ಜನತೆಗೆ ಮನವರಿಕೆ ಮಾಡಿಕೊಡುವ ಅವಶ್ಯಕತೆ ಇರುವ ಹಿನ್ನೆಲೆಯಲ್ಲಿ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಹೇಳಿದರು.
ಬಿಜೆಪಿಯಲ್ಲಿ ಅಸಮಾಧಾನಗೊಂಡಿರುವ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಂಗ್ರೆಸ್ ಪಕ್ಷಕ್ಕೆ ಬರುವ ಸಾಧ್ಯತೆ ಇಲ್ಲ. ಏಕೆಂದರೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧವೇ ಅವರು ಸಾಕಷ್ಟು ಟೀಕೆಗಳನ್ನು ಮಾಡುತ್ತಿದ್ದಾರೆ. ಹೀಗಾಗಿ ಅವರು ಕಾಂಗ್ರೆಸ್‌ಗೆ ಬರುವ ಸಾಧ್ಯತೆ ಇಲ್ಲ. ನಮ್ಮ ಅಧ್ಯಕ್ಷರನ್ನು ಬೈದವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದು ಹೇಗೆ? ಅವರು ಬಿಜೆಪಿಯಲ್ಲಿ ಇರುವುದೇ ಉತ್ತಮ. ಬಿಜೆಪಿಯಲ್ಲಿದ್ದುಕೊಂಡು ಈಗ ಮಾಡುತ್ತಿರುವ ಕೆಲಸ ಮುಂದುವರೆಸಲಿ ಎಂದು ವ್ಯಂಗ್ಯವಾಡಿದರು.