ಜಿಲ್ಲೆ

ರಾಯಲ್ ರೆಡ್ ಸ್ಪೋರ್ಟ್ಸ್ ಕ್ಲಬ್ ಸ್ಥಾಪನೆ

ಬಳ್ಳಾರಿ : ಜಿಲ್ಲೆಯಲ್ಲಿ ಕ್ರೀಡಾಪಟುಗಳ ಪ್ರೋತ್ಸಾಹಕ್ಕಾಗಿ ರಾಯಲ್ ರೆಡ್ ಸ್ಪೋರ್ಟ್ಸ್ ಕ್ಲಬ್ ಸಂಸ್ಥೆ ಆರಂಭಿಸಲಾಗುವುದು ಎಂದು ಶಾಸಕ ನಾರಾ ಭರತರೆಡ್ಡಿ ಹೇಳಿದರು.

ಇಲ್ಲಿನ ತಾಳೂರು ರಸ್ತೆಯಲ್ಲಿ ಜನ್ಮ ದಿನಾಚರಣೆಯ ಅಂಗವಾಗಿ ನಾರಾ ಭರತ್‌ರೆಡ್ಡಿ ಅಭಿಮಾನಿ ಬಳಗ (ಎನ್‌ಬಿಆರ್ ಟೀಮ್)ದಿಂದ ನಡೆದ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು. ಜಿಲ್ಲೆಯ ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ವೈಯಕ್ತಿಕ ಹಣ ವಿನಿಯೋಗಿಸಿ ಸ್ಥಾಪಿಸಲಾಗುವುದು. ಜಿಲ್ಲೆಯಲ್ಲಿ ಮೊದಲಿನಿಂದ ಸಾಕಷ್ಟು ಕ್ರೀಡಾಳುಗಳಿದ್ದು ಅದರಲ್ಲೂ ವಿಶೇಷವಾಗಿ ಯುವಕರಿಗೆ ಉತ್ತೇಜನ ನೀಡಬೇಕು. ಯುವಜನ ಸಬಲೀಕರಣ ಮಾಡುವ ಉದ್ದೇಶದಿಂದ ಈ ಸಂಸ್ಥೆ ಆರಂಭಿಸಲಾಗುವುದು ಎಂದರು.

ರಾಯಲ್ ರೆಡ್ ಸ್ಪೋರ್ಟ್ಸ್ ಕ್ಲಬ್ ಮೂಲಕ ಕ್ರಿಕೆಟ್, ಫುಟ್ಬಾಲ್, ಹಾಕಿ, ಬ್ಯಾಡ್ಮಿಂಟನ್, ಬಾಸ್ಕೆಟ್ ಬಾಲ್, ಕಬಡ್ಡಿ ಹಾಗೂ ಅಥ್ಲೆಟಿಕ್ಸ್ ನಲ್ಲಿ ಆಸಕ್ತಿ ಇರುವ ಯುವಕರನ್ನು ಗುರುತಿಸಿ ತಂಡ ರಚಿಸಿ ತರಬೇತಿ ನೀಡುವುದು ಅಲ್ಲದೆ ಕ್ಲಬ್ ಮೂಲಕ ತರಬೇತಿ ಪಡೆಯುವವರಿಗೆ ಉಚಿತ ಸದಸ್ಯತ್ವ ನೀಡುವ ಚಿಂತನೆಯಿದೆ ಎಂದರು.