ಜಿಲ್ಲೆ

ವೆನ್ಲಾಕ್‌ನಲ್ಲಿ ಪ್ರತಿಷ್ಠಿತ ಆಸ್ಪತ್ರೆಗಳ ಪ್ರಾದೇಶಿಕ ಕೇಂದ್ರ ಸ್ಥಾಪನೆ, ವೆನ್ಲಾಕ್ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ಕಟ್ಟಡ ಉದ್ಘಾಟನಾ ಸಮಾರಂಭದಲ್ಲಿ ವಿಧಾನಸಭಾಧ್ಯಕ್ಷ ಯು.ಟಿ ಖಾದರ್

ಮಂಗಳೂರು: ರಾಜ್ಯದ ಪ್ರತಿಷ್ಠಿತ ಆಸ್ಪತ್ರೆಗಳಾದ ಕಿದ್ವಾಯಿ ಕ್ಯಾನ್ಸರ್ ಆಸ್ಪತ್ರೆ, ಜಯದೇವ ಹೃದಯ ಆಸ್ಪತ್ರೆ, ನಿಮಾನ್ಸ್ ಮಾನಸಿಕ ಆಸ್ಪತ್ರೆಯ ಪ್ರಾದೇಶಿಕ ಕೇಂದ್ರವನ್ನು ವೆನ್ಲಾಕ್‌ನಲ್ಲಿ ಸ್ಥಾಪನೆಗೆ ಮಹತ್ತರ ಯೋಜನೆ ರೂಪಿಸಲಾಗುವುದು ಎಂದು ವಿಧಾನಸಭಾಧ್ಯಕ್ಷ ಯು.ಟಿ ಖಾದರ್ ಹೇಳಿದರು.

ಸ್ಮಾರ್ಟ್ ಸಿಟಿಯ ಅನುದಾನದಲ್ಲಿ ನಿರ್ಮಾಣಗೊಂಡ ವೆನ್ಲಾಕ್ ಜಿಲ್ಲಾಸ್ಪತ್ರೆಯ ನೂತನ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ಕಟ್ಟಡದ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ವೆನ್ಲಾಕ್ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ಕಟ್ಟಡದಲ್ಲಿ ಪ್ರತಿಷ್ಠಿತ ಆಸ್ಪತ್ರೆಗಳ ಪ್ರಾದೇಶಿಕ ಕೇಂದ್ರ ಸ್ಥಾಪನೆಯಾದರೆ ಕ್ಯಾನ್ಸರ್, ಹೃದಯ ಆಸ್ಪತ್ರೆ, ಮಾನಸಿಕ ಚಿಕಿತ್ಸೆಗಳಿಗೆ ಬೆಂಗಳೂರಿನಂತಹ ಹೊರಪ್ರದೇಶಕ್ಕೆ ಹೋಗುವುದು ತಪ್ಪಲಿದೆ. ಜತೆಗೆ ದ.ಕ ಜಿಲ್ಲೆಯಲ್ಲೇ ಸೂಪರ್ ಸ್ಪೆಷಾಲಿಟಿ ಚಿಕಿತ್ಸೆ ಲಭ್ಯವಾಗಲಿದೆ. ಸಧ್ಯಕ್ಕೆ ಸುಸಜ್ಜಿತ ರೀತಿಯಲ್ಲಿ ವೆನ್ಲಾಕ್ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ಕಟ್ಟಡ ನಿರ್ಮಾಣಗೊಂಡಿದೆ. ಕಟ್ಟಡ ಇದ್ದ ಮಾತ್ರಕ್ಕೆ ಒಳ್ಳೆಯ ಆಸ್ಪತ್ರೆಯಾಗುವುದಿಲ್ಲ, ಇಲ್ಲಿನ ಕಾರ್ಯವೈಖರಿ, ಚಿಕಿತ್ಸೆ, ಸ್ಪಂಧನೆ ಉತ್ತಮವಾಗಿದ್ದರೆ ಮಾತ್ರ ಸೂಪರ್ ಸ್ಪೆಷಾಲಿಟಿಯು ಎಲ್ಲರನ್ನೂ ತಲುಪಲು ಸಾಧ್ಯ. ಈ ಆಸ್ಪತ್ರೆಯಲ್ಲಿ ಆರೋಗ್ಯ ಸೇವೆಯ ಕೊರತೆ ಆಗಬಾರದು, ಸೇವೆಯಲ್ಲಿ ತೃಪ್ತಿಯಿದ್ದರೆ ಮಾತ್ರ ಇಲ್ಲಿನ ಸೌಲಭ್ಯಗಳು ಜನರಿಗೆ ತಲುಪಬಹುದು ಎಂದರು.

ಆರೋಗ್ಯ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ವೆನ್ಲಾಕ್ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ಕಟ್ಟಡದ ಮೂಲಕ ದ.ಕ ಜಿಲ್ಲೆಯ ಹಲವು ದಶಕಗಳ ಆರೋಗ್ಯ ಸೇವೆಗೆ ಹೈಟೆಕ್ ಸ್ಪರ್ಷ ನೀಡಲಾಗಿದೆ. ವೆನ್ಲಾಕ್ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಗೆ ಕೆಎಂಸಿ ವತಿಯಿಂದ 4ಕೋ.ರೂ ವೆಚ್ಚದ ಆರೋಗ್ಯ ಉಪಕರಣಗಳನ್ನು ನೀಡಿದ್ದಾರೆ, ಸರ್ಕಾರ ಹಾಗೂ ಕೆಎಂಸಿ ಜತೆಗಿನ ಸಹಭಾಗಿತ್ವದಿಂದಾಗಿ ವೆನ್ಲಾಕ್ ಆಸ್ಪತ್ರೆ ಇಂದು ಉತ್ತಮ ಆರೋಗ್ಯ ಸೇವೆ ನೀಡಲು ಸಾಧ್ಯವಾಗಿದೆ. ಮುಂದಿನ 2 ತಿಂಗಳಲ್ಲಿ ಕ್ಯಾಥ್‌ಲ್ಯಾಬ್ ಲೋಕಾರ್ಪಣೆಗೊಳ್ಳಲಿದೆ.

ಶಾಸಕ ವೇದವ್ಯಾಸ ಕಾಮತ್ ಅಧ್ಯಕ್ಷತೆ ವಹಿಸಿದ್ದರು.

ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಜಿ.ಪಂ.ಸಿಇಒ ಡಾ.ಆನಂದ್, ಮನಪಾ ಮೇಯರ್ ಸುಧೀರ್ ಶೆಟ್ಟಿ ಕಣ್ಣೂರು, ಸಂಸದ ಕ್ಯಾ.ಬ್ರಿಜೇಶ್ ಚೌಟ, ಪುತ್ತೂರು ಶಾಸಕ ಅಶೋಕ್ ರೈ, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್, ಕರ್ನಾಟಕ ಗೇರು ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ತುಳು ಸಾಹಿತ್ಯ ಅಕಾಡಮಿ ಅಧ್ಯಕ್ಷ ತಾರನಾಥ್ ಕಾಪಿಕಾಡ್, ಪಾಲಿಕೆ ಪ್ರತಿಪಕ್ಷ ನಾಯಕ ಪ್ರವೀನ್ ಚಂದ್ರ ಆಳ್ವಾ, ಎಂಸಿಸಿ ಕಮೀಷನರ್ ಆನಂದ್, ಸ್ಮಾರ್ಟ್‌ಸಿಟಿ ಎಂಡಿ ರಾಜು ಕೆ., ಡಿಎಚ್‌ಒ ಡಾ. ತಿಮ್ಮಯ್ಯ ಸಹಿತ ಹಲವರು ಇದ್ದರು.

ವೆನ್ಲಾಕ್ ಆಸ್ಪತ್ರೆ ಅಧೀಕ್ಷಕಿ ಡಾ.ಜೆಸಿಂತಾ ಡಿಸೋಜ ಸ್ವಾಗತಿಸಿದರು.

-----------------

ಕ್ಯಾನ್ಸರ್ ಚಿಕಿತ್ಸಾ ವಿಭಾಗದ ಬೇಡಿಕೆ

ದ.ಕ ಸಂಸದ ಕ್ಯಾ.ಬ್ರಿಜೇಶ್ ಚೌಟ ಮಾತನಾಡಿ, ದ.ಕ ಜಿಲ್ಲೆ ಆರೋಗ್ಯ ಸೇವೆಯಲ್ಲಿ ಮುಂದಿದೆ. ಆದರೆ ಕ್ಯಾನ್ಸರ್ ಚಿಕಿತ್ಸಾ ವಿಭಾಗದ ಅಗತ್ಯತೆ ಇಲ್ಲಿದೆ. ವೆನ್ಲಾಕ್ ಸರ್ಜಿಕಲ್ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ಕ್ಯಾನ್ಸರ್ ಚಿಕಿತ್ಸಾ ವಿಭಾಗ ತೆರೆಯುವ ಸಾಧ್ಯತೆ ಬಗ್ಗೆ ರಾಜ್ಯ ಸರ್ಕಾರ ಹಾಗೂ ಕೆಎಂಸಿ ಗಮನ ಹರಿಸಬೇಕು. ಜಿಲ್ಲೆಯಲ್ಲಿ ಆಯುಸ್ಮಾನ್ ಯೋಜನೆ ಬಗ್ಗೆ ಮಾಹಿತಿ ಕೊರತೆಯಿಂದ ಯೋಜನೆ ಹಲವರಿಗೆ ತಲುಪುತ್ತಿಲ್ಲ, ಈಬಗ್ಗೆ ಆರೋಗ್ಯ ಇಲಾಖೆ ಮಾಹಿತಿ ನೀಡುವ ಕಾರ್ಯ ಮಾಡಬೇಕು ಎಂದರು.

---------------------

ಸೂಪರ್ ಸ್ಪೆಷಾಲಿಟಿ ಸರ್ಜಿಕಲ್‌ನ ವಿಶೇಷತೆ

ನೂತನ ಮಾದರಿಯ 1,65,000 ಚದರ ಅಡಿ ವಿಸ್ತೀರ್ಣದ ಸೂಪರ್ ಸ್ಪೆಷಾಲಿಟಿ ಸರ್ಜಿಕಲ್ ಕಟ್ಟಡದ ತಳ ಅಂತಸ್ತು, ನೆಲ ಅಂತಸ್ತು ಒಳಗೊಂಡಂತೆ ಒಟ್ಟು 7 ಅಂತಸ್ತುಗಳನ್ನು ಕಟ್ಟಡವು ಹೊಂದಿದ್ದು, 250 ಹಾಸಿಗೆಗಳ ಸೌಲಭ್ಯ ಹೊಂದಿದೆ. 4ನೇ ಅಂತಸ್ತಿನವರೆಗೆ ಕಾಮಗಾರಿ ಪೂರ್ಣಗೊಂಡಿದೆ. ಕಟ್ಟಡದ ತಳ ಅಂತಸ್ತಿನಲ್ಲಿ ಕ್ಯಾಥ್ ಲ್ಯಾಬ್ ಮತ್ತು ರೇಡಿಯಾಲಜಿ ವಿಭಾಗಗಳಿವೆ. ನೆಲ ಅಂತಸ್ತಿನಲ್ಲಿ 15 ಹಾಸಿಗೆಗಳ ತುರ್ತು ಚಿಕಿತ್ಸಾ ವಿಭಾಗ, 8 ಹಾಸಿಗೆಗಳ ತುರ್ತು ಚಿಕಿತ್ಸಾ ಐಸಿಯು, ಎಂಡೋಸ್ಕೋಪಿ ಮತ್ತು ತುರ್ತು ಶಸ್ತ್ರ ಚಿಕಿತ್ಸಾ ಕೊಠಡಿಗಳಿವೆ. ಒಂದನೇ ಮಹಡಿಯಲ್ಲಿ 60 ಹಾಸಿಗೆಗಳ ಇ.ಎನ್.ಟಿ. ಮತ್ತು ಯುರಾಲಜಿ ಶಸ್ತ್ರ ಚಿಕಿತ್ಸಾ ವಾರ್ಡ್‌ಗಳು ಮತ್ತು ಎರಡನೇ ಮಹಡಿಯಲ್ಲಿ 70 ಹಾಸಿಗೆಗಳ ನ್ಯೂರೊ ಸರ್ಜರಿ, ಕಾರ್ಡಿಯೋಥ್ರಾಸಿಕ್ ಸರ್ಜರಿ ಮತ್ತು ಕಣ್ಣಿನ ಶಸ್ತ್ರ ಚಿಕಿತ್ಸಾ ವಾರ್ಡ್‌ಗಳಿವೆ. ಮೂರು ಮತ್ತು ನಾಲ್ಕನೇ ಅಂತಸ್ತಿನಲ್ಲಿ ತಲಾ 10 ಸುಸಜ್ಜಿತ ಶಸ್ತ್ರಚಿಕಿತ್ಸಾ ಕೊಠಡಿಗಳಿವೆ. ಅಲ್ಲದೆ ತಲಾ 10 ಹಾಸಿಗೆಗಳ ಶಸ್ತ್ರ ಚಿಕಿತ್ಸಾ ಪೂರ್ವ ಮತ್ತು 15 ಹಾಸಿಗೆಗಳ ಶಸ್ತ್ರ ಚಿಕಿತ್ಸಾ ನಂತರದ ವಾರ್ಡ್ ಲಭ್ಯ.