ಮಡಿಕೇರಿ:
ವಯೋವೃದ್ಧರಿಗೆ ಆರೈಕೆ ಕೇಂದ್ರಗಳ ಸ್ಥಾಪನೆ ಮತ್ತು ಅಶಕ್ತರಿಗೆ ನೆರವಾಗುವ ಉದ್ದೇಶದಿಂದ ನೂತನವಾಗಿ ನೋಂದಾಯಿತ ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿರುವುದಾಗಿ ಟ್ರಸ್ಟ್ ಸಂಸ್ಥಾಪಕ ಅಧ್ಯಕ್ಷ ಶಿವಕುಮಾರ್ ಹೂಟಗಳ್ಳಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಟ್ರಸ್ಟ್‌ನ ಟ್ರಸ್ಟಿಗಳಾಗಿ ಸುಂಟಿಕೊಪ್ಪದ ಏಳನೇ ಹೊಸಕೋಟೆಯ ಸೌಮ್ಯಶ್ರೀ, ಮಡಿಕೇರಿಯ ಕೆ.ಎಂ.ಚೇತನ್, ಮೈಸೂರಿನ ಲೇನರ್ಡ ಜೋಸೆಫ್ ಬ್ಯಾಸ್ಟೀನ್, ಕೆ. ನಾಗೇಂದ್ರ ಗೌರವ ಅಧ್ಯಕ್ಷರಾಗಿ ಬಿಗ್ ಬಾಸ್ ಖ್ಯಾತಿಯ ಸ್ನೇಕ್ ಶ್ಯಾಮ್ ಹಾಗೂ ಕಾನೂನು ಘಟಕದ ಮುಖ್ಯಸ್ಥೆಯಾಗಿ ವಕೀಲರಾದ ಮೊನಾಲಿಸಾ ಶಿವಕುಮಾರ್ ಆಯ್ಕೆಯಾಗಿದ್ದಾರೆ. ಕಾರ್ಯದರ್ಶಿ ಮತ್ತು ಖಜಾಂಚಿ ಆಯ್ಕೆ ಪ್ರಕ್ರಿಯೆ ಮುಂದಿನ ಆಡಳಿತ ಮಂಡಳಿ ಸಭೆಯಲ್ಲಿ ನಡೆಯಲಿದೆ ಎಂದು ತಿಳಿಸಿದ್ದಾರೆ.
ಮಾನವೀಯತೆ ಚಾರಿಟೇಬಲ್ ಟ್ರಸ್ಟ್ ಸರ್ಕಾರದಿಂದ ಮಾನ್ಯತೆ ಪಡೆದಿರುವ ಸಂಸ್ಥೆಯಾಗಿದ್ದು, ಇದರ ಉದ್ದೇಶಗಳನ್ನು ಸರ್ಕಾರ ಮಾನ್ಯ ಮಾಡಿದೆ. ವಯಸ್ಸಾದ ವ್ಯಕ್ತಿಗಳಿಗೆ ಆರೈಕೆ ಕೇಂದ್ರಗಳನ್ನು ಸ್ಥಾಪಿಸುವುದು ಸಂಸ್ಥೆಯ ಮುಖ್ಯ ಯೋಜನೆಯಾಗಿದೆ. ಅನಾಥಾಶ್ರಮ ನಿರ್ಮಾಣ ಮಾಡಿ ಕ?್ಟದ ಪರಿಸ್ಥಿತಿಯಲ್ಲಿರುವವರು ಹಾಗೂ ವಯಸ್ಸಾದವರಿಗೆ ಆಶ್ರಯ, ಉಚಿತ ಊಟ, ಬಟ್ಟೆ ಹಾಗೂ ಮಾನಸಿಕ ನೆಮ್ಮದಿ ನೀಡಲಾಗುವುದು. ದೈಹಿಕ, ಮಾನಸಿಕ ಅಶಕ್ತರು ಮತ್ತು ವಿಕಲಚೇತನ ಮಕ್ಕಳಿಗೆ ನೇರವಾಗಿ ಅವರ ಪುನರ್ವಸತಿಗೆ ಸಹಾಯ ಮಾಡಲಾಗುವುದು. ಶಿಕ್ಷಣದ ಮೂಲಕ ಮೂಲಭೂತ ಸೌಕರ್ಯಗಳನ್ನು ಒದಗಿಸುವುದು, ಪುನರ್ವಸತಿ ಮತ್ತು ಸರ್ಕಾರದ ಕಾರ್ಯಕ್ರಮದೊಂದಿಗೆ ಕೈಜೋಡಿಸುವುದು ಸಂಸ್ಥೆಯ ಉದ್ದೇಶವಾಗಿದೆ.
ಟ್ರಸ್ಟ್ ವೆಬ್ಸೈಟ್ ಹಾಗೂ ಮೊಬೈಲ್ ಅಪ್ಲಿಕೇಶನ್ ತಯಾರಾಗುತ್ತಿದ್ದು, ಇದರ ಪ್ರಯೋಜನವನ್ನು ನಿರಾಶ್ರಿತರು, ಬಡವರು, ಭಿಕ್ಷುಕರು, ನೊಂದವರು ಪಡೆದುಕೊಳ್ಳಬಹುದು. ಮುಂದಿನ ದಿನಗಳಲ್ಲಿ ಹೆಲ್ಪ್ ಲೈನ್ ಕೂಡ ಪ್ರಾರಂಭಿಸಲಾಗುವುದು ಎಂದು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗೆ ೯೪೮೧೩೩೨೧೮೧, ೯೭೩೯೯೭೩೯೪೭ ನ್ನು ಸಂಪರ್ಕಿಸಬಹುದು ಎಂದಿದ್ದಾರೆ.