ಜಿಲ್ಲೆ

ಇ-ಆಫೀಸ್ ಸ್ಥಾಪನೆ: ಪಶ್ಚಿಮ ಪಾಲಿಕೆ ಆಯುಕ್ತರ ಹೇಳಿಕೆ

ಬೆಂಗಳೂರು: ಆಡಳಿತದಲ್ಲಿ ಪಾರದರ್ಶಕತೆ ಹಾಗೂ ನಾಗರಿಕರಿಗೆ ತ್ವರಿತವಾಗಿ ಸೇವೆ ಒದಗಿಸಲು ಅನುಕೂಲವಾಗುವಂತೆ ಇ-ಆಫೀಸ್ ಸ್ಥಾಪಿಸಿ ಕಾಗದದ ದಾಖಲೆಗಳನ್ನು ಡಿಜಿಟಲೀಕರಣ ಮಾಡುವ ಪ್ರಕ್ರಿಯೆ ಆರಂಭಿಸುವಂತೆ ಪಶ್ಚಿಮ ನಗರ ಪಾಲಿಕೆ ಆಯುಕ್ತ ಡಾ. ಕೆ.ವಿ.ರಾಜೇಂದ್ರ ಅವರು ಅಧಿಕಾರಿಗಳಿಗೆ ಸೂಚಿಸಿದರು.

ಮಂಗಳವಾರ ಪಶ್ಚಿಮ ಪಾಲಿಕೆಯ ವಿವಿಧ ವಿಭಾಗಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಕಾರ್ಪೋರೇಷನ್ ವ್ಯಾಪ್ತಿಯಲ್ಲಿ ಹೊಸದಾಗಿ ಅಭಿಲೇಖಾಲಯ ಸ್ಥಾಪನೆಗೆ ಸೂಕ್ತ ಜಾಗವನ್ನು ಗುರುತಿಸಿ, ದಾಖಲೆಗಳ ಸ್ಕ್ಯಾನಿಂಗ್ ವ್ಯವಸ್ಥೆಗೆ ಕ್ರಮ ಕೈಗೊಳ್ಳಬೇಕು. ವಿವಿಧ ದಾಖಲೆಗಳ ಸ್ಕ್ಯಾನಿಂಗ್ ಕಾರ್ಯವನ್ನು ತ್ವರಿತವಾಗಿ ನಡೆಸುವಂತೆ ನಿರ್ದೇಶಿಸಿದರು.

ಇತ್ತೀಚಿಗೆ ಡಿಸಿಎಂ ಅವರು ಹೇರೋಹಳ್ಳಿಯಲ್ಲಿ ಕೈಗೊಂಡ ‘ಬೆಂಗಳೂರ ನಡಿಗೆ’ ಕಾರ್ಯಕ್ರಮದಲ್ಲಿ ಜನರಿಂದ ಸ್ವೀಕರಿಸಲಾದ ಅಹವಾಲುಗಳ ಪೈಕಿ ಹೆಚ್ಚಿನವುಗಳನ್ನು ಸ್ಥಳದಲ್ಲೇ ಪರಿಹರಿಸಲಾಗಿದೆ. ಉಳಿದವುಗಳನ್ನು ತಕ್ಷಣ ಕ್ರಮ ಕೈಗೊಂಡು ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು. ಮುಖ್ಯವಾಗಿ ರಸ್ತೆಗುಂಡಿಗಳನ್ನು ತ್ವರಿತವಾಗಿ ಮುಚಿ, ನಾಗರಿಕರಿಗೆ ಅನುಕೂಲವಾಗುವಂತಹ ರಸ್ತೆ ಮಾರ್ಗ ನಿರ್ಮಿಸಬೇಕು. ಜತೆಗೆ, ಜಂಕ್ಷನ್‌ಗಳ ಅಭಿವೃದ್ಧಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಅವರು ಅಧಿಕಾರಿಗಳಿಗೆ ಸೂಚಿಸಿದರು.

ಅನಧಿಕೃತ ಜಾಹೀರಾತು ಫಲಕ ತೆರವುಗೊಳಿಸಿ:

ಪಾಲಿಕೆ ವ್ಯಾಪ್ತಿಯಲ್ಲಿ ನಗರ ನೈರ್ಮಲ್ಯಕ್ಕೆ ಆದ್ಯತೆ ನೀಡಲಾಗಿದ್ದು, ಶಾಶ್ವತವಾಗಿ ಬ್ಲ್ಯಾಕ್ ಸ್ಪಾಟ್ ಗಳನ್ನು ತೆರವುಗೊಳಿಸಿ ಅವು ಮತ್ತೆ ಮರುಕಳಿಸದಂತೆ ಖಚಿತಪಡಿಸಿಕೊಳ್ಳಬೇಕು. ಅನಧಿಕೃತವಾಗಿ ಅಳವಡಿಸಲ್ಪಟ್ಟ ಜಾಹೀರಾತು ಫಲಕಗಳು, ಫ್ಲೆಕ್ಸ್ ಹಾಗೂ ಬ್ಯಾನರ್‌ಗಳನ್ನು ತ್ವರಿತವಾಗಿ ತೆರವುಗೊಳಿಸಬೇಕು ಎಂದು ಆಯುಕ್ತರು ಖಡಕ್ ಸೂಚನೆ ನೀಡಿದರು.

ಸಭೆಯಲ್ಲಿ ಪಶ್ಚಿಮ ಪಾಲಿಕೆಯ ಅಪರ ಆಯುಕ್ತ ದಿಗ್ವಿಜಯ್ ಬೋಡ್ಕೆ, ಅಪರ ಆಯುಕ್ತರು (ಕಂದಾಯ) ಜಿ.ಎನ್.ಮಂಜುನಾಥಸ್ವಾಮಿ, ಜಂಟಿ ಆಯುಕ್ತರಾದ ಆರತಿ ಆನಂದ್, ಸಂಗಪ್ಪ, ಮುಖ್ಯ ಅಭಿಯಂತರರು ಹಾಗೂ ವಿವಿಧ ವಿಭಾಗಗಳ ಮುಖ್ಯಸ್ಥರು ಹಾಜರಿದ್ದರು.

ಪಾಲಿಕೆ ಮಟ್ಟದಲ್ಲಿ ಕಚೇರಿಗಳ ಸ್ಥಾಪನೆ:

ಪಶ್ಚಿಮ ಪಾಲಿಕೆಯಲ್ಲಿ ಕಂದಾಯ, ಆರೋಗ್ಯ, ಕಾಮಗಾರಿ, ಕಲ್ಯಾಣ, ಜಾಹಿರಾತು, ಲೆಕ್ಕಪತ್ರ, ಆಡಳಿತ, ನಗರ ಯೋಜನೆ, ಆಸ್ತಿ ಹಾಗೂ ಕಾನೂನು ಸೇರಿ ಅಗತ್ಯ ವಿಭಾಗಗಳ ಕಚೇರಿಗಳನ್ನು ಸ್ಥಾಪಿಸಿ ವ್ಯವಸ್ಥಿತ ಆಡಳಿತಕ್ಕೆ ಕ್ರಮ ಕೈಗೊಳ್ಳಬೇಕು. ಪಾಲಿಕೆಯ ಮಿತಿಗೆ ಒಳಪಟ್ಟ ಕಡತಗಳನ್ನು ಸಂಬಂಧಿಸಿದ ವಿಭಾಗಗಳ ಅಧಿಕಾರಿಗಳಿಗೆ ಹಸ್ತಾಂತರಿಸಬೇಕು ಎಂದು ಆಯುಕ್ತರು ಅಧಿಕಾರಿಗಳಿಗೆ ತಾಕೀತು ಮಾಡಿದರು.