ಮೈಸೂರು: ರಾಜ್ಯದೆಲ್ಲೆಡೆ ಪ್ರತಿ ತಾಲೂಕು ಮಟ್ಟದಲ್ಲಿ ಖಾಸಗಿ ಸಹಭಾಗಿತ್ವದಲ್ಲಿ ಬಯೋ ಡೀಸೆಲ್ ಬಂಕ್‌ಗಳು ಸ್ಥಾಪನೆಗೊಳ್ಳಲಿವೆ.
ಬಯೋ ಡೀಸೆಲ್ ಬಳಕೆಗೆ ಪ್ರೋತ್ಸಾಹ ನೀಡುವ ಉದ್ದೇಶದಿಂದ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯು ಮೈಸೂರು ಸೇರಿದಂತೆ ರಾಜ್ಯದೆಲ್ಲೆಡೆ ತಾಲೂಕು ಮಟ್ಟದಲ್ಲಿ ಬಯೋ ಡೀಸೆಲ್ ಬಂಕ್‌ಗಳನ್ನು ತೆರೆಯಲು ಮುಂದಾಗಿದೆ.
ಈಗಾಗಲೇ ಉತ್ತರಪ್ರದೇಶದಲ್ಲಿ 10 ಕಡೆ ಬಯೋ ಡೀಸೆಲ್ ಬಂಕ್‌ಗಳು ಕಾರ್ಯ ನಿರ್ವಹಿಸುತ್ತಿದ್ದು, ಅದೇ ಮಾದರಿಯಲ್ಲಿ ರಾಜ್ಯದಲ್ಲಿ ಬಯೋ ಡೀಸೆಲ್ ಬಂಕ್‌ಗಳನ್ನು ಆರಂಭಿಸುವುದು ಮಂಡಳಿಯ ದೂರದೃಷ್ಟಿ ಯೋಜನೆಯಾಗಿದೆ.
ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ ಸಹಕಾರದಿಂದ ರಾಜ್ಯದ ಪ್ರಥಮ ಬಯೊ ಡಿಸೇಲ್ ಬಂಕ್ ತುಮಕೂರಿನಲ್ಲಿ ಸ್ಥಾಪನೆಗೊಂಡಿದೆ. ಮುಂದೆ ಬಯೋ ಡೀಸೆಲ್ ಮಾರಾಟಕ್ಕೆ ಪ್ರತ್ಯೇಕ ಬಂಕ್‌ಗಳನ್ನು ಸ್ಥಾಪನೆ ಮಾಡಿದರೆ ವಾಹನ ಸವಾರರಿಗೆ ಅನುಕೂಲವಾಗಲಿದೆ ಎನ್ನುವ ಉದ್ದೇಶದಿಂದ ರಾಜ್ಯಾದ್ಯಂತ ವಿಸ್ತರಣೆಗೆ ಮುಂದಾಗಿದೆ.
ಬಯೋ ಡೀಸೆಲ್ ಮಾರಾಟಕ್ಕೆ ನೋಡಲ್ ಏಜೆನ್ಸಿಯಾಗಿ ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿಯನ್ನು ರಾಜ್ಯ ಸರ್ಕಾರ ಆಯ್ಕೆ ಮಾಡಿದೆ. ಇದರಿಂದ ತಾಲೂಕು ಮಟ್ಟದಲ್ಲಿ ಬಂಕ್ ತೆರೆಯಲು ಯೋಜನೆ ರೂಪಿಸಲಾಗಿದೆ.
ಬಯೋ ಡೀಸೆಲ್ ಬಂಕ್ ಆರಂಭಕ್ಕೆ ಆಸಕ್ತಿ ಇರುವವರು ತಮ್ಮ ವ್ಯಾಪ್ತಿಯ ಜಿಲ್ಲೆಯ ಜಿಲ್ಲಾಧಿಕಾರಿಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಿದ ಮಾಲೀಕರಿಗೆ ಮಂಡಳಿಯು ಸಂಬಂಧಪಟ್ಟ ಆಹಾರ ಇಲಾಖೆ, ಪೊಲೀಸ್ ಇಲಾಖೆ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ, ಅಗ್ನಿಶಾಮಕ ಇಲಾಖೆ ಸೇರಿದಂತೆ 12 ಇಲಾಖೆಗಳಿಂದ ನಿರಾಕ್ಷೇಪಣಾ ಪತ್ರಗಳನ್ನು ಕೊಡಿಸುವಲ್ಲಿ ಮಧ್ಯವರ್ತಿಯಾಗಿ ಕಾರ್ಯನಿರ್ವಹಿಸಲಿದೆ. ಅಲ್ಲದೆ ತಂತ್ರಜ್ಞಾನದ ನೆರವು ಸಹ ನೀಡಲಾಗುತ್ತದೆ.
ಸ್ಥಳೀಯ ಹಾಗೂ ನೆರೆ ರಾಜ್ಯಗಳಿಂದ ಪೂರೈಕೆಯಾಗುವ ಬಯೋ ಡೀಸೆಲ್‌ನ ಗುಣಮಟ್ಟವನ್ನು ಮಂಡಳಿಯೇ ಪರೀಕ್ಷೆಗೊಳಪಡಿಸಿ ಪ್ರಮಾಣ ಪತ್ರ ನೀಡಲಿದ್ದು, ಆ ಬಳಿಕ ವ್ಯಾಪಾರಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಕೇಂದ್ರ ಸರ್ಕಾರದ ನಿಯಮದಂತೆ ರಾಜ್ಯದಲ್ಲಿಯೂ ಡೀಸೆಲ್ ಬಳಕೆ ಮಾಡುವ ವಾಹನಗಳಿಗೆ ಶೇ. 5ರಷ್ಟು ಬಯೋ ಡೀಸೆಲ್ ಬಳಕೆ ಮಾಡುವುದು ಕಡ್ಡಾಯವಾಗಿದೆ. ಜತೆಗೆ ಬಯೋ ಡೀಸೆಲ್‌ನಿಂದಲೇ ಸಂಚರಿಸುವ ಸಾಕಷ್ಟು ವಾಹನಗಳು ಕೂಡ ರಸ್ತೆಗಿಳಿದಿವೆ.
ರಾಜ್ಯದಲ್ಲಿ ಪ್ರತಿ ದಿನ 2.9 ಕೋಟಿ ಲೀ. ನಷ್ಟು ಡೀಸೆಲ್ ಬಳಕೆಯಾಗುತ್ತಿದ್ದು, ಅದಕ್ಕೆ ಶೇ. 5ರಷ್ಟು ಬಯೋ ಡೀಸೆಲ್ ಸೇರ್ಪಡೆಗೊಳಿಸಿದರೆ ಬರೋಬ್ಬರಿ 14 ಲಕ್ಷ ಲೀಟರ್ ಬಯೋ ಡೀಸೆಲ್ ಬಳಕೆಯಾಗಲಿದೆ. ಜತೆಗೆ ಜನರೇಟರ್ ಸೇರಿದಂತೆ ಜೆಸಿಬಿ, ಇಟಾಚಿ, ಟ್ರ್ಯಾಕ್ಟರ್ ಮೊದಲಾದ ಭಾರಿ ವಾಹನಗಳಿಗೆ ನೇರವಾಗಿ ಬಯೋಡೀಸೆಲ್ ಬಳಕೆ ಮಾಡಲು ಅವಕಾಶವಿರುವುದರಿಂದ ಸಹಜವಾಗಿಯೇ ಬಳಕೆ ಹೆಚ್ಚಾಗಿದೆ.
ಪ್ರತಿ ಜಿಲ್ಲೆಯಲ್ಲಿಯೂ ಪ್ರತಿ ದಿನ 50 ಸಾವಿರ ಲೀಟರ್ ಬಯೋಡೀಸೆಲ್‌ಗೆ ಬೇಡಿಕೆ ಇದ್ದು, ಅದನ್ನು ಪೂರೈಕೆ ಮಾಡಲು ಮಂಡಳಿ ನಿರ್ಧರಿಸಿದೆ ಎಂದು ಮಂಡಳಿಯ ವ್ಯವಸ್ಥಾಪಕ ನಿರ್ದೇಶಕ ಎಲ್.ಶಿವಶಂಕರ್ ತಿಳಿಸಿದ್ದಾರೆ.
ಪ್ರತಿ ಲೀಟರ್ ಡೀಸೆಲ್ ದರಕ್ಕಿಂತ ಬಯೋ ಡೀಸೆಲ್ ದರ 5 ರೂ. ಕಡಿಮೆ ಇದ್ದು, ಭಾರಿ ವಾಹನಗಳು ಸೇರಿದಂತೆ ನಾಲ್ಕು ಚಕ್ರದ ವಾಹನಗಳು ಮತ್ತು ಜನರೇಟರ್‌ಗಳಿಗೆ ಬಳಕೆ ಮಾಡಿದರೆ ಗ್ರಾಹಕರಿಗೆ ಸಾಕಷ್ಟು ಹಣ ಉಳಿತಾಯವಾಗಲಿದೆ.
ಇಂಧನ ಹೊರೆ ಕಡಿಮೆಯಾಗಲಿದೆ
ಬಯೋ ಡಿಸೇಲ್ ಬಳಕೆಯಿಂದ ಜನರಿಗೆ ಇಂಧನ ದರ ಕಡಿಮೆಯಾಗಲಿದೆ. ಅಲ್ಲದೆ ವಿದೇಶಿ ವಿನಿಮಯವೂ ಉಳಿತಾಯವಾಗುವುದರಿಂದ ರಾಜ್ಯದ ಎಲ್ಲ ತಾಲೂಕುಗಳಲ್ಲಿಯೂ ಖಾಸಗಿ ಸಹಭಾಗಿತ್ವದಲ್ಲಿ ಬಯೋ ಡೀಸೆಲ್ ಬಂಕ್‌ಗಳನ್ನು ಆರಂಭಿಸಲು ಯೋಜನೆ ರೂಪಿಸಲಾಗಿದೆ. ಆಸಕ್ತರು ಬಂಕ್ ಸ್ಥಾಪನೆಗೆ ಮುಂದಾದಲ್ಲಿ ಮಂಡಳಿಯಿಂದ ಅಗತ್ಯ ಸಹಕಾರ ಮತ್ತು ಸೌಲಭ್ಯ ಕಲ್ಪಿಸಲಾಗುವುದು.
ಎಸ್.ಇ.ಸುಧೀಂದ್ರ
ಅಧ್ಯಕ್ಷ, ಕರ್ನಾಟಕ ರಾಜ್ಯ ಜೈವಿಕ ಇಂಧನ ಅಭಿವೃದ್ಧಿ ಮಂಡಳಿ