ಜಿಲ್ಲೆ

ಅಶೋಕೆಯಲ್ಲಿ ಬೃಹತ್ ಗ್ರಂಥಾಲಯ ಸ್ಥಾಪನೆ

ವೀರೇಶ ಸೌದ್ರಿ

ಗೋಕರ್ಣ: ಹಿಂದೆ ವಿಶ್ವ ಪ್ರಸಿದ್ಧ ತಕ್ಷಶಿಲಾ ವಿಶ್ವವಿದ್ಯಾಲಯದಲ್ಲಿ ಬೃಹತ್ ಗ್ರಂಥಾಲಯವಿತ್ತು. ವಿದೇಶಿ ದಾಳಿಯಲ್ಲಿ ಅದಕ್ಕೆ ಬೆಂಕಿ ಹಚ್ಚಲ್ಪಟ್ಟಾಗ ಆ ಬೆಂಕಿ ನಿರಂತರ ಆರು ತಿಂಗಳ ಕಾಲ ಉರಿಯುತ್ತಲೇ ಇತ್ತು ಎನ್ನುವ ಐತಿಹಾಸಿಕ ದಾಖಲೆಯಿದೆ. ತತ್ ಪ್ರತಿರೂಪಿಯಾದ ಬೃಹತ್ ಗ್ರಂಥಾಲಯ ಅಶೋಕೆಯಲ್ಲಿನ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ತಲೆ ಎತ್ತಲಿದೆ ಎಂದು ಶ್ರೀರಾಘವೇಶ್ವರ ಭಾರತೀ ಸ್ವಾಮೀಜಿ ಹೇಳಿದರು.

ಉಪ್ಪಿನಂಗಡಿ ಮಂಡಲದ ಪಂಜ, ಬೆಳ್ಳಾರೆ, ಬೆಟ್ಟಂಪಾಡಿ ಮತ್ತು ಚೊಕ್ಕಾಡಿ ವಲಯಗಳ ಶಿಷ್ಯಭಕ್ತರ ಬುಧವಾರದ ಭಿಕ್ಷಾಸೇವೆಯಲ್ಲಿ ಶ್ರೀಗಳು ಆಶೀರ್ವಚನ ನೀಡಿದರು.

ಈ ಅಪೂರ್ವ ಗ್ರಂಥಾಲಯ ಮಂಗಳೂರು ಹೋಬಳಿಯ ಶಿಷ್ಯಭಕ್ತರ ಸೇವೆಯಾಗಿ ಸಮರ್ಪಣೆಯಾಗಲಿದೆ. ಜತೆಗೆ ಮಾಣಿಮಠದಲ್ಲಿ ಆಯೋಜಿತವಾಗಿರುವ ಈ ವರ್ಷದ ನವರಾತ್ರಿ ಉತ್ಸವದಲ್ಲಿ ಅರ್ಪಿತವಾಗುವ ಸಮಸ್ತ ಕಾಣಿಕೆ ವಿವಿವಿ ಗ್ರಂಥಾಲಯಕ್ಕೆ ವಿನಿಯೋಗವಾಗಲಿದೆ. ನವರಾತ್ರಿ ಎನ್ನುವುದು ಸರಸ್ವತಿಯ ದಿವ್ಯ ಪೂಜೆ. ಈ ಸಂದರ್ಭದ ಎಲ್ಲ ಕಾಣಿಕೆಯನ್ನು ವಿದ್ಯಾಧಿದೇವತೆಯ ಗ್ರಂಥಾಲಯ ನಿರ್ಮಾಣಕ್ಕಾಗಿ ಮೀಸಲಿಡಲಾಗುವುದು ಎಂದರು.

ಮುಂದಿನ ಸರ್ವೋತ್ತಮ ಭವಿಷ್ಯಕ್ಕಾಗಿ ಸಮಾಜದ ಪ್ರತಿ ಮಗು ಗುರುಕುಲ ವ್ಯವಸ್ಥೆಯಲ್ಲಿಯೇ ಶಿಕ್ಷಣ ಪಡೆಯುವಂತಾಗಬೇಕು. ಬದುಕಿಗೆ ಅಗತ್ಯವಿರುವ ಶಿಸ್ತು ಮತ್ತು ಸಂವಿಧಾನವನ್ನು ನಮ್ಮ ಪಾರಂಪರಿಕ ಶಿಕ್ಷಣ ಪದ್ಧತಿ ಒದಗಿಸಲಿದೆ. ಅದಕ್ಕೆ ಪೂರಕವಾಗಿ ಗ್ರಂಥಾಲಯವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಸಂಸ್ಕಾರ ರಹಿತ ಶಿಕ್ಷಣ ಅಪಾಯಕಾರಿ. ಇಂತಹ ಶಿಕ್ಷಣ ನಮ್ಮತನವನ್ನು ಹಾನಿಗೊಳಿಸಿ ಆತ್ಮಾಭಿಮಾನಕ್ಕೆ ಧಕ್ಕೆ ತರಬಲ್ಲದು ಎಂದು ಎಚ್ಚರಿಸಿದರು.

ಮಾಜಿ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅವರಿಗೆ ಶ್ರೀಗಳು ಅನುಗ್ರಹ ಮಂತ್ರಾಕ್ಷತೆ ದಯಪಾಲಿಸಿ ಆಶೀರ್ವದಿಸಿದರು. ಸಮಾಜದ 21 ಸಾಧಕರನ್ನು ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಹಳ್ಳೇರ ಸಮಾಜದ ವತಿಯಿಂದ ಶ್ರೀಗಳಿಗೆ ಪಾದಪೂಜಾ ಸೇವೆ ನೆರವೇರಿತು.

ಸಭೆಯಲ್ಲಿ ಹವ್ಯಕ ಮಹಾಮಂಡಲ ಪ್ರ. ಕಾರ್ಯದರ್ಶಿ ಉದಯಶಂಕರ ಭಟ್ಟ ಮಿತ್ತೂರು, ಮಂಗಳೂರು ಪ್ರಾಂತ ಕಾರ್ಯದರ್ಶಿ ವೇಣುಗೋಪಾಲ ಕೆದ್ಲ, ವೈದಿಕ ಪ್ರಧಾನ ಮಹೇಶ ಚೂಂತಾರು, ಉಪ್ಪಿನಂಗಡಿ ಮಂಡಲಾಧ್ಯಕ್ಷ ಈಶ್ವರ ಪ್ರಸನ್ನ, ಚಾತುರ್ಮಾಸ್ಯ ಸಮಿತಿ ಅಧ್ಯಕ್ಷ ಯು.ಎಸ್.ಜಿ. ಭಟ್ಟ, ಲೋಕಸಂಪರ್ಕಾಧಿಕಾರಿ ಜಿ.ಕೆ. ಹೆಗಡೆ, ಕಾರ್ಯಾಲಯ ಕಾರ್ಯದರ್ಶಿ ಜಿ.ವಿ. ಹೆಗಡೆ ಇತರರಿದ್ದರು. ಸುಬ್ರಾಯ ಅಗ್ನಿಹೋತ್ರಿ ಮತ್ತು ವಿನಾಯಕ ಶಾಸ್ತ್ರಿ ನಿರ್ವಹಿಸಿದರು.