ಕೋಲಾರ: ಶ್ರೀನಿವಾಸಪುರ ಕ್ಷೇತ್ರದಲ್ಲಿ ಕೈಗಾರಿಕೆಗಳ ಸ್ಥಾಪನೆಗೆ ಯಾರೋ ಬೇಡ ಅಂತ ಹೇಳಿದರು ಎಂದು ಸರ್ಕಾರ ಕ್ರಮಕೈಗೊಳ್ಳದೆ ಇರುವುದು ಸರಿಯಲ್ಲ ಎಂದು ಸದನದಲ್ಲಿ ಶಾಸಕ ಜಿ.ಕೆ.ವೆಂಕಟಶಿವಾರೆಡ್ಡಿ ಸದನ ಬಾವಿಗೆ ಇಳಿದು ಪ್ರತಿಭಟನೆಗೆ ಮುಂದಾದರು. ಈ ವೇಳೆ ಸ್ಪೀಕರ್ ಯು.ಟಿ.ಖಾದರ್ ಅವರು, ಸಂಬಂಧಪಟ್ಟ ಇಲಾಖೆಯ ಸಚಿವರು ನೀಡುವ ಉತ್ತರವನ್ನು ಕೇಳಿ, ಬಾವಿಗೆ ಇಳಿದು ಪ್ರತಿಭಟನೆ ನಡೆಸುವುದು ಪರಿಹಾರವಲ್ಲ ಎಂದು ಮನವೊಲಿಸಿದರಾದರೂ ಶ್ರೀನಿವಾಸಪುರ ತಾಲೂಕು ಆಂಧ್ರ ಗಡಿಯಲ್ಲಿದ್ದು, ತೀರಾ ಹಿಂದುಳಿದ ಕ್ಷೇತ್ರ. ಈಗಾಗಲೇ ಕೈಗಾರಿಕೆಗಳ ಸ್ಥಾಪನೆಗೆ ಜಾಗ ಗುರುತಿಸಲಾಗಿದೆ. ಆದರೀಗ ಕೈಗಾರಿಕೆ ಪ್ರಸ್ತಾವನೆ ಬಗ್ಗೆ ಕೈಗಾರಿಕೋದ್ಯಮಗಳಿಂದ ಬೇಡಿಕೆ ಇದಿಯೋ ? ಇಲ್ಲವೆ? ಎಂಬುದನ್ನು ಪರಿಗಣಿಸಿ, ತದನಂತರ ಸ್ವಾಧಿನ ಪ್ರಕ್ರಿಯೆ ನಡೆಸಲಾಗುವುದು ಎಂದು ಸರ್ಕಾರ ಹೇಳುತ್ತಿದೆ. ಆದರೆ ಕೈಗಾರಿಕೆಗಳಿಗೆ ಜಮೀನು ಕಲ್ಪಿಸುವುದು ಸರ್ಕಾರಕ್ಕೆ ಭಾರವೇನೂ ಇಲ್ಲ, ಸಚಿವರ ಸ್ನೇಹಿತರೇ ಕೈಗಾರಿಕೆಗಳ ಸ್ಥಾಪನೆಗೆ ಅಡ್ಡಿ ಪಡಿಸುತ್ತಿರುವುದರಿಂದ, ಸರ್ಕಾರ ಸುಮ್ಮನಿರುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಮೊದಲ ಹಂತದಲ್ಲಿ 1,273ಎಕರೆ ಸ್ವಾಧಿನ
ಶಾಸಕ ವೆಂಕಟಶಿವಾರೆಡ್ಡಿ ಪ್ರತಿಭಟನೆಗೆ ಮುಂದಾಗುತ್ತಿದ್ದಂತೆ, ಮಧ್ಯ ಪ್ರವೇಶಿದ ಸಚಿವ ಎಂ.ಬಿ.ಪಾಟೀಲ, ಶ್ರೀನಿವಾಸಪುರ ಕ್ಷೇತ್ರದಲ್ಲಿ ಕೈಗಾರಿಕೆ ಸ್ಥಾಪನೆಗೆ ಈಗಾಗಲೇ ಗುರುತಿಸಲಾಗಿರುವ 2,524 ಎಕರೆ ಪೈಕಿ ಮೊದಲ ಹಂತದಲ್ಲಿ 1,273ಎಕರೆ ಸ್ವಾಧಿನ ಮಾಡಿಕೊಳ್ಳಲಾಗುತ್ತಿದ್ದು, ಹಣಕಾಸಿನ ಲಭ್ಯತೆ, ಬೇಡಿಕೆ ನೋಡಿಕೊಂಡು ಕೆಐಡಿಬಿಯಿಂದ ಎರಡನೇ ಹಂತದ ಕ್ರಮವಹಿಸಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೆ ಮತ್ತೇ ಪ್ರತಿಕ್ರಿಯಿಸಿದ ವೆಂಕಟಶಿವಾರೆಡ್ಡಿ, 42 ವರ್ಷದಿಂದ ಸದನದಲ್ಲಿ ಇದ್ದೇನೆ, ಸಚಿವರ ತಂದೆ ಪಾಟೀಲರ ಜತೆ ಕೆಲಸ ಮಾಡಿದ್ದೇನೆ. ರೈತರ, ಕಾರ್ಮಿಕರ, ಬಡವರ ಋಣ ತೀರಿಸಿಕೊಳ್ಳಲು ಸಿಕ್ಕಿರುವ ಅವಕಾಶ ಸದುಪಯೋಗ ಪಡಿಸಿಕೊಳ್ಳಿ ಎಂದು ಆಗಿಂದಲೂ ಸಲಹೆ ನೀಡಿದ್ದೇನೆ ಎಂದರು. ಮೊದಲು ಬೋರ್ಡ್ ಸಭೆಯಲ್ಲಿ ಇಟ್ಟು ಅಂತಿಮಗೊಳ್ಳಿಸಲಿ, ನಾನು ಶಾಸಕನಾಗಿದ್ದ ಅವಧಿಯಲ್ಲಿ ಕೈಗಾರಿಕೆಗಳು ಸ್ಥಾಪನೆ ಮಾಡಬಾರದು ಎಂದು ಸರ್ಕಾರದ ಮೇಲೆ ಒತ್ತಡ ತಂದಿದ್ದಾರೆ. ಹೀಗೆ ಮಾಡುವುದು ಸರಿಯಿಲ್ಲ ಎಂದು ವೆಂಕಡಶಿವಾರೆಡ್ಡಿ ಕಿಡಿಕಾರಿದರು.