ಸುಂಟಿಕೊಪ್ಪ: ಎಸ್‌ಎಸ್‌ಎಲ್‌ಸಿ ಪರೀಕ್ಷೆ ಸೋಮವಾರ ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆ ಹಾಗೂ ಸಂತಮೇರಿ ಶಾಲೆಯ ಕೇಂದ್ರದಲ್ಲಿ ಸೋಮವಾರ ಸುಸೂತ್ರವಾಗಿ ನಡೆದಿದೆ.
ನಿರ್ಮಲ ವಿದ್ಯಾಭವನ ಹಟ್ಟಿಹೊಳೆ, ಸೂರ್ಲಬ್ಬಿ ಸರ್ಕಾರಿ ಪ್ರೌಢಶಾಲೆ, ಮಾದಾಪುರದ ಸರ್ಕಾರಿ ಪ್ರೌಢಶಾಲೆ, ಗರಗಂದೂರಿನ ಚೆನ್ನಮ್ಮ ಪ್ರೌಢಶಾಲೆ, ಸುಂಟಿಕೊಪ್ಪ ಸಂತ ಮೇರಿ ಆಂಗ್ಲ ಮಾಧ್ಯಮ ಪ್ರೌಢಶಾಲೆ, ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆ, ಕಾನ್‌ಬೈಲ್ ಸರ್ಕಾರಿ ಪ್ರೌಢಶಾಲೆ, ಶಾಂತಿನಿಕೇತನ, ಸುಂಟಿಕೊಪ್ಪ ನಾಡು ಪ್ರೌಢಶಾಲೆಯ ವಿದ್ಯಾರ್ಥಿಗಳು ಪರೀಕ್ಷೆ ಎದುರಿಸಿದ್ದಾರೆ.
ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆಯ 150 ಮಕ್ಕಳಲ್ಲಿ ಒಬ್ಬ ವಿದ್ಯಾರ್ಥಿ ಗೈರಾಗಿದ್ದಾನೆ. ಸಂತ ಮೇರಿ ಆಂಗ್ಲ ಮಾಧ್ಯಮ ಪರೀಕ್ಷಾ ಕೇಂದ್ರದಲ್ಲಿ 231 ವಿದ್ಯಾರ್ಥಿಗಳು ಹಾಜರಾಗಿ ಪರೀಕ್ಷೆ ಎದುರಿಸಿದ್ದಾರೆ. ಸುಂಟಿಕೊಪ್ಪ ಸರ್ಕಾರಿ ಪ್ರೌಢಶಾಲೆ ಹಾಗೂ ಸಂತಮೇರಿ ಆವರಣದಲ್ಲಿ ಪರೀಕ್ಷೆಗೆ ಆಗಮಿಸಿದ್ದ ವಿದ್ಯಾರ್ಥಿಗಳಿಗೆ ಗಣ್ಯರು ಸ್ವಾಗತ ಕೋರಿದರು. ಸ್ವಾಗತ ಸಮಾರಂಭದ ಅಧ್ಯಕ್ಷತೆಯನ್ನು ಸುಂಟಿಕೊಪ್ಪ ಪದವಿಪೂರ್ವ ಕಾಲೇಜಿನ ಉಪಪ್ರಾಂಶುಪಾಲ ಬಾಲಕೃಷ್ಣ ಹಾಗೂ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯಲ್ಲಿ ವ್ಯವಸ್ಥಾಪಕ ರೆ.ಫಾ.ಅರುಳ್ ಸೆಲ್ವಕುಮಾರ್ ಹಾಗೂ ಮುಖ್ಯಶಿಕ್ಷಕ ಸೆಲ್ವರಾಜ್ ಅವರು ಮಾತನಾಡಿ ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.
ಎಸ್‌ಎಸ್‌ಎಲ್‌ಸಿ ಪರೀಕ್ಷೆ ಹಿನ್ನೆಲೆಯಲ್ಲಿ ಪರೀಕ್ಷಾ ಕೇಂದ್ರದ 200 ಮೀಟರ್ ಸುತ್ತಳತೆಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ.