ಶಿವಮೊಗ್ಗ: ನಗರದ ವ್ಯಾಪ್ತಿಯಲ್ಲಿ ಸುಮಾರು 14 ಕಿಮೀ ತುಂಗಾ ನಾಲೆ ಹರಿದು ಹೋಗುತ್ತದೆ. ಇದರ ಇಕ್ಕೆಲಗಳ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಳ್ಳುತ್ತಿದ್ದಾರೆ ಎಂಬ ದೂರುಗಳು ಕೇಳಿ ಬರುತ್ತಿವೆ. ಹೀಗಾಗಿ ಈ ಭಾಗದಲ್ಲಿ ಸಸಿಗಳನ್ನು ನೆಟ್ಟು ಹಸಿರೀಕರಣಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ನಾಗರಿಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟದಿಂದ ಸೋಮವಾರ ಏರ್ಪಡಿಸಿದ್ದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈಗಾಗಲೇ ಊರಗಡೂರು ಗುಡ್ಡವನ್ನು ಸಂರಕ್ಷಣೆ ಮಾಡಲಾಗಿದೆ. ಇದೇ ಮಾದರಿಯಲ್ಲಿ ರಾಗಿಗುಡ್ಡವನ್ನೂ ಸಂರಕ್ಷಿಸಿ ಕಾಡು ಬೆಳೆಸಲು ಯೋಜನೆ ರೂಪಿಸಲಾಗುವುದು ಎಂದು ಹೇಳಿದರು.
ದ್ರೌಪದಮ್ಮ ವೃತ್ತದ ಬಳಿ ರಸ್ತೆ ಅಗಲೀಕರಣವಾಗಿಲ್ಲ. ಈ ಭಾಗದಲ್ಲಿ ಖಾಸಗಿ ಆಸ್ತಿಗಳಿವೆ. ಅವರೆಲ್ಲರಿಗೂ ಪರಿಹಾರ ನೀಡದೇ ರಸ್ತೆ ಅಗಲೀಕರಣಕ್ಕೆಂದು ಭೂಸ್ವಾಧೀನ್ ಸಾಧ್ಯವಿಲ್ಲ. ಇದರ ಬಗ್ಗೆ ಅಧಿಕಾರಿಗಳೊಂದಿಗೆ ಚರ್ಚಿಸುತ್ತೇನೆ. ಆರ್‌ಎಂಎಲ್ ನಗರದಲ್ಲಿ ರಸ್ತೆ ಕಾಮಗಾರಿ ಮುಗಿದಿದೆ. ಆದರೆ ಚರಂಡಿ ನಿರ್ಮಾಣಕ್ಕೆ ಹಣ ಇಲ್ಲವಾಗಿದೆ. ಇದಕ್ಕಾಗಿ ವಿಶೇಷ ಅನುದಾನ ಬೇಕಿದೆ ಎಂದರು.