ಹುಬ್ಬಳ್ಳಿ: ಸಾಹಿತ್ಯದ ಪ್ರಕಾರಗಳಲ್ಲಿ ಪ್ರಬಂಧ ಅತಿ ಮುಖ್ಯವಾಗಿದ್ದು, ಅದರ ನಡೆ, ಜತೆಗೆ ಕೃತಿಕಾರನ ಸೃಜನಶೀಲತೆಗೆ ಇಂಬು ನೀಡುವ ವಿಪುಲ ಅವಕಾಶಗಳು ಇದರಲ್ಲಿವೆ ಎಂದು ಶಿಕ್ಷಣ ತಜ್ಞ ಹಾಗೂ ಪ್ರಬಂಧಕಾರ ವೆಂಕಟೇಶ ಮಾಚಕನೂರು ಅಭಿಪ್ರಾಯಪಟ್ಟರು.
ನಗರದ ಐಬಿಎಂಆರ್ ಕಾಲೇಜಿನಲ್ಲಿ ಭಾನುವಾರ ಅಖಿಲ ಭಾರತೀಯ ಸಾಹಿತ್ಯ ಪರಿಷತ್ ಧಾರವಾಡ ಜಿಲ್ಲಾ ಘಟಕ ಹಾಗೂ ಹೂಬಳ್ಳಿ ಲೇಖಕಿಯರ ಬಳಗದ ಸಹಯೋಗದಲ್ಲಿ ಆಯೋಜಿಸಿದ್ದ ಪ್ರಬಂಧ ಕಾರ್ಯಾಗಾರ ಉದ್ಘಾಟಿಸಿ ಅವರು ಮಾತನಾಡಿದರು.
ಇಂಗ್ಲಿಷ್ ಮೂಲದ ಎಸ್ಸೆ ಕನ್ನಡದ ಸಾಹಿತ್ಯ ಪ್ರಕಾರದಲ್ಲಿ ತನ್ನದೇ ಆದ ಸ್ವಂತಿಕೆಯನ್ನು ರೂಪಿಸಿಕೊಂಡಿದೆ. ಪ್ರಬಂಧವೆಂಬುದು ಒಂದು ಜಿಜ್ಞಾಸೆ, ಬದುಕಿನ ಸಮಗ್ರತೆಯನ್ನು ನೋಡುವ ವಿಧಾನವೂ ಹೌದು ಎಂದು ಹೇಳಿದರು.
ಸಾಹಿತಿ ಶ್ರೀನಿವಾಸ ವಾಡಪ್ಪಿ ಮಾತನಾಡಿ, ಪ್ರಬಂಧ ಸಾಹಿತ್ಯಕ್ಕೆ 200 ವರ್ಷಗಳ ಇತಿಹಾಸವಿದೆ. ನವೋದಯದ ಎಲ್ಲ ಪ್ರಸಿದ್ಧ ಸಾಹಿತಿಗಳೂ ಈ ಪ್ರಕಾರದಲ್ಲಿ ತಮ್ಮ ಸಾಹಿತ್ಯ ಕೃಷಿ ಕೈಗೊಂಡಿದ್ದಾರೆ ಎಂದರು.
ಡಾ. ಪ್ರಜ್ಞಾ ಮತ್ತಿಹಳ್ಳಿ ಮಾತನಾಡಿ, ಪ್ರಬಂಧ ಹೆಣೆಯುವಲ್ಲಿ ಜೀವನದ ಅನುಭವ, ಅನುಭೂತಿ, ಒಂದಿಷ್ಟು ವೇದನೆಗಳನ್ನು ಸಾಂದ್ರೀಕರಿಸಿಕೊಳ್ಳುವಿಕೆಯ ಜೊತೆ ಶಬ್ಧ ಸಂಪತ್ತು ಕೂಡ ಬಹಳ ಮುಖ್ಯ ಎಂದು ತಿಳಿಸಿದರು.
ಅಂಕಣಕಾರ ಪ್ರಶಾಂತ ಆಡೂರ ಅವರು ತಮ್ಮ ಹರಟೆ ಮಾದರಿಯ ಪ್ರಬಂಧಗಳನ್ನು ಓದುವುದರ ಮೂಲಕ, ಪ್ರಬಂಧ ವಿಷಯ ವಸ್ತು ಮತ್ತು ರಚನಾ ಕೌಶಲದ ಪರಿಚಯ ಮಾಡಿಕೊಟ್ಟರು.
ಕಮ್ಮಟದಲ್ಲಿ ಭಾಗವಹಿಸಿದ್ದವರ ಜೊತೆಗೆ ಸಂವಾದ ನಡೆಯಿತು.
ಗುರುರಾಜ ಕೌಜಲಗಿ, ಹುಬ್ಬಳ್ಳಿ ತಾಲೂಕು ಕಸಾಪ ಅಧ್ಯಕ್ಷ ವಿರೂಪಾಕ್ಷ ಕಟ್ಟಿಮನಿ, ವೆಂಕಟೇಶ ಮರಗುದ್ದಿ, ಜೀವಿ ಕಲಾ ಬಳಗದ ಗದಿಗೆಯ್ಯಾ ಹಿರೇಮಠ, ರವಿ ಕಮಡೊಳ್ಳಿ, ಸಂಧ್ಯಾ ದೀಕ್ಷಿತ್, ಮಾಧವಿ ಕುಲಕರ್ಣಿ, ವೀಣಾ ಬರಗಿ, ಸುನಂದಾ ಶ್ಯಾಗೋಟಿ, ಲತಾ ಹೆಗಡೆ, ಆರ್.ಎಂ. ಗೋಗೇರಿ ಉಪಸ್ಥಿತರಿದ್ದರು.
ಶಾಲಿನಿ ರುದ್ರಮುನಿ ಪ್ರಾರ್ಥಿಸಿದರು. ಪರಿಷತ್ತಿನ ಧಾರವಾಡ ಜಿಲ್ಲಾ ಘಟಕದ ಅಧ್ಯಕ್ಷ ಸುಶೀಲೇಂದ್ರ ಕುಂದರಗಿ ಸ್ವಾಗತಿಸಿದರು. ರೂಪಾ ಜೋಶಿ ಪ್ರಾಸ್ತಾವಿಕ ಮಾತನಾಡಿದರು. ಕಿತ್ತೂರು ಕರ್ನಾಟಕ ಸಂಚಾಲಕ ಜನಮೇಜಯ ಉಮರ್ಜಿ ನಿರೂಪಿಸಿದರು. ಡಾ. ಸರೋಜಾ ಮೇಟಿ ವಂದಿಸಿದರು.