ಜಿಲ್ಲೆ

ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ದೇಸಿ ಮತ್ತು ಸ್ಥಳೀಯ ಕಲಾವಿದರಿಗೆ ಆದ್ಯತೆ ಕೊಡಬೇಕು: ಜಾನಪದ ವಿದ್ವಾಂಸ ಡಾ.ನಂಜಯ್ಯ ಹೊಂಗನೂರು

ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದ ಜಂಬೂಸವಾರಿ ಮೆರವಣಿಗೆಯಲ್ಲಿ ದೇಸಿ ಮತ್ತು ಸ್ಥಳೀಯ ಕಲಾವಿದರಿಗೆ ಆದ್ಯತೆ ಕೊಡಬೇಕು. ಹಾಗೆಯೇ ಗೌರವ ಧನವನ್ನೂ ಹೆಚ್ಚಿಸಬೇಕು ಎಂದು ರಾಜ್ಯ ಸರ್ಕಾರವನ್ನು ಮೈಸೂರು ವಿವಿ ಪ್ರಸಾರಾಂಗದ ನಿರ್ದೇಶಕ ಹಾಗೂ ಜಾನಪದ ವಿದ್ವಾಂಸ ಡಾ.ನಂಜಯ್ಯ ಹೊಂಗನೂರು ಒತ್ತಾಯಿಸಿದರು.

ರಂಗಾಯಣದ ಬಿ.ವಿ. ಕಾರಂತ ರಂಗ ಚಾವಡಿಯಲ್ಲಿ ಗೌತಮ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸೇವಾ ಟ್ರಸ್ಟ್ ವತಿಯಿಂದ ಆಯೋಜಿಸಿದ್ದ ರಂಗಭೂಮಿ ಮತ್ತು ಜಾನಪದ ಕಲಾಪ್ರಕಾರಗಳ ಉಚಿತ ತರಬೇತಿ ಶಿಬಿರದಲ್ಲಿ ಯುವಕರಿಗೆ ಜನಪದ ಕಲೆಗಳ ಅವಶ್ಯಕತೆ ವಿಚಾರ ಸಂಕಿರಣದಲ್ಲಿ ಮಾತನಾಡಿದರು.

ಮೈಸೂರು ದಸರಾ ವರ್ಷದಿಂದ ವರ್ಷಕ್ಕೆ ವೈವಿಧ್ಯತೆಯೊಂದಿಗೆ ಅದ್ಧೂರಿಯಾಗಿ ಆಚರಿಸಲಾಗುತ್ತಿದೆ. ಜಂಬೂಸವಾರಿ ಮೆರವಣಿಗೆಯಲ್ಲಿ ಭಾಗವಹಿಸುವ ಕಲಾವಿದನಿಗೆ 1.5 ಸಾವಿರದಿಂದ 2 ಸಾವಿರ ರೂ. ನೀಡಲಾಗುತ್ತದೆ. ಪ್ರತಿ ಕಲಾವಿದರಿಗೆ ಕನಿಷ್ಠ 5 ಸಾವಿರ ರೂ. ನೀಡಬೇಕು ಎಂದು ಸಲಹೆ ನೀಡಿದರು. ಅಲ್ಲದೇ ಈ ಬಾರಿಯ ದಸರಾ ಜಂಬೂ ಸವಾರಿಯಲ್ಲಿ ಭಾಗವಹಿಸುವ ಪ್ರತಿ ಕಲಾ ತಂಡಗಳಿಗೆ 50,0000 ರೂ ನೀಡಿದರೆ ಸಹಾಯವಾಗುತ್ತದೆ ಹೀಗೆಯೇ ಮಹಿಳಾ ಕಲಾವಿದರಿಗೂ ಸಹ ವಿಶೇಷ ಸೌಲಭ್ಯ ನೀಡಲೂ ಒತ್ತಾಯಿಸಿದರು.

ಸುಗಮ ಸಂಗೀತ, ಶಾಸ್ತಿಥಯ ಸಂಗೀತ ಮತ್ತು ಸಿನಿಮಾ ಕಲಾವಿದರ 1 ಗಂಟೆಯ ಕಾರ್ಯಕ್ರಮಕ್ಕೆ ಲಕ್ಷಾಂತರ ರೂಪಾಯಿ ನೀಡಲಾಗುತ್ತದೆ. ಐಷರಾಮಿ ಹೋಟೆಲ್‌ನಲ್ಲಿ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಗುತ್ತದೆ. ಆದರೆ, ಜಾನಪದ ಕಲಾವಿದರಿಗೆ ಈ ಸೌಕರ್ಯವಿಲ್ಲ. ನಂಜರಾಜ ಬಹದ್ದೂರ್ ಛತ್ರದಲ್ಲಿ ಉಳಿದುಕೊಳ್ಳಬೇಕು. ಮಹಿಳಾ ಕಲಾವಿದರು ನಾನಾ ಕಷ್ಟ ಎದುರಿಸುತ್ತಿದ್ದಾರೆ ಎಂದು ಹೇಳಿದರು.

ಮೆರವಣಿಗೆಯಲ್ಲಿ ಭಾಗವಹಿಸುವ ಕಲಾವಿದರು ಬೆಳಗ್ಗೆ 9 ಗಂಟೆಗೆ ಮೇಕಪ್ ಹಾಕಿಕೊಂಡು ಭಾರವಾದ ತಮ್ಮ ವಾದ್ಯಗಳೊಂದಿಗೆ ಸಿದ್ಧರಾದರೆ ಸಂಜೆಯವರೆಗೆ ಅದೇ ಸ್ಥಿತಿಯಲ್ಲಿರಬೇಕು. ಕುಡಿಯುವ ನೀರು, ಊಟೋಪಚಾರವೂ ಇರುವುದಿಲ್ಲ. ಅನಾರೋಗ್ಯವಿರುವ ಕಲಾವಿದರು ನಾನಾ ತೊಂದರೆ ಎದುರಿಸುತ್ತಾರೆ ಎಂದು ಹೇಳಿದರು.

ಜಾನಪದ ಕಲೆಗಳಿಂದ ವಿಮುಖರಾಗುತ್ತಿರುವ ಯುವಜನತೆ ಜಾನಪದವನ್ನ ತಮ್ಮ ಹೃದಯಕ್ಕೆ ತೆಗೆದುಕೊಂಡು ಬೆಳಸಬೇಕು. ಜಾನಪದ ಕಲೆಗಳಿಂದ ಸಾವಿರಾರು ಜನರು ತಮ್ಮ ಬದುಕು ರೂಪಿಸಿಕೊಂಡಿದ್ದಾರೆ. ಅಮೆರಿಕದ ಅಕ್ಕ ಕನ್ನಡ ಸಮ್ಮೇಳನದಲ್ಲಿ ಕಾರ್ಯಕ್ರಮ ನೀಡಿದ್ದಾರೆ. ಇತ್ತೀಚೆಗೆ ರಿಯಾಲಿಟಿ ಶೋಗಳಲ್ಲಿ ಹೆಚ್ಚು ಅವಕಾಶಗಳು ದೊರೆಯುತ್ತಿವೆ.

ತಮಟೆ ಕಲಾವಿದ ಮುನಿವೆಂಕಟಪ್ಪ, ಸುಗ್ರಿ ಬೊಮ್ಮೇಗೌಡ ಅವರು ಪದ್ಮಶ್ರೀ ಪ್ರಶಸ್ತಿ ಬಂದಿದೆ. ಜಾನಪದ ಗಾಯಕರಾದ ಮಳವಳ್ಳಿ ಮಹದೇವಸ್ವಾಮಿ, ಪಿಚ್ಚಳ್ಳಿ ಶ್ರೀನಿವಾಸ್ ಗೌರವ ಡಾಕ್ಟರೇಟ್‌ಗೆ ಭಾಜನರಾಗಿದ್ದಾರೆ. ಯುವ ಕಲಾವಿದರಿಗೂ ಹೆಚ್ಚು ಅವಕಾಶಗಳು ದೊರೆಯುತ್ತಿದೆ ಎಂದು ನುಡಿದರು.

ಹಿರಿಯ ಜಾನಪದ ಗಾಯಕ ಅಪ್ಪಗೆರೆ ತಿಮ್ಮರಾಜು ಮಾತನಾಡಿದರು. ಟ್ರಸ್ಟ್ ಅಧ್ಯಕ್ಷ ಕೃಷ್ಣಮೂರ್ತಿ ತಲಕಾಡು, ಡಾ.ಶ್ರೀಧರಮೂರ್ತಿ, ಡಾ ಸೋಮಣ್ಣ, ರಾಮಚಂದ್ರು ಇದ್ದರು.