ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ 
ಜಿಲ್ಲೆ

ಈಶ್ವರಪ್ಪ ಅವರದು ಬ್ಲಾಕ್ ಮೇಲ್ ರಾಜಕಾರಣ

ನವೀನ ಬಿ.ಎಂ

ಶಿವಮೊಗ್ಗ: ಮಾಜಿ ಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ ಅವರಿಗೆ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಲು ಧೈರ್ಯವೂ ಇಲ್ಲ, ಸಾಮರ್ಥ್ಯವೂ ಇಲ್ಲ. ಅವರು ಯಾವಗಲೂ ಬ್ಲಾಕ್ ಮೇಲ್ ರಾಜಕಾರಣ ಮಾಡಿಕೊಂಡೇ ಬಂದವರು ಎಂದು ಕೆಪಿಸಿಸಿ ವಕ್ತಾರ ಆಯನೂರು ಮಂಜುನಾಥ ವಾಗ್ದಾಳಿ ನಡೆಸಿದರು.

ವಿಧಾನಸಭೆ ಚುನಾವಣೆಯಲ್ಲಿ ಶಿವಮೊಗ್ಗ ನಗರ ಕ್ಷೇತ್ರದಲ್ಲಿ ಅವರಿಗೆ ಟಿಕೆಟ್ ತಪ್ಪಿಸಿದ್ದು ನಾವಲ್ಲ. ಅವರು ಶೇ.40ರಷ್ಟು ಕಮೀಷನ್ ಪಡೆದಿದ್ದೆ ಕಾರಣ. ಅದರಲ್ಲಿ ಪುತ್ರ ಕೆ.ಇ.ಕಾಂತೇಶ್ ಅವರ ಪಾಲು ಇದ್ದುದ್ದರಿಂದ ಅವರಿಗೂ ಟಿಕೆಟ್ ಕೊಡಲಿಲ್ಲ. ಇದೀಗ ಹಾವೇರಿಯಲ್ಲೂ ಟಿಕೆಟ್ ಸಿಕ್ಕಿಲ್ಲ. ಇದು ಅವರೇ ಮಾಡಿಕೊಂಡಿರುವ ಸ್ವಯಂಕೃತ ಅಪರಾಧ. ಈಶ್ವರಪ್ಪ ಅವರದು ಉತ್ತರಕುಮಾರನ ಪೌರುಷ ಇದ್ದಂತೆ. ಒಂದು ವೇಳೆ ಬಂಡಾಯ ಅಭ್ಯರ್ಥಿಯಾಗಿ ಈಶ್ವರಪ್ಪ ಸ್ಪರ್ಧಿಸಿದರೆ ನನ್ನ ಮತವನ್ನು ಅವರಿಗೇ ಹಾಕುತ್ತೇನೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮುಂದೆ ಪದವೀಧರರ ಮತ್ತು ಶಿಕ್ಷಕರ ಕ್ಷೇತ್ರದ ಚುನಾವಣೆ ಇದೆ. ಅಲ್ಲಿಯೂ ಕಾಂತೇಶ್‌ಗೆ ಟಿಕೆಟ್ ಸಿಗದಿದ್ದರೆ ಜಿಲ್ಲಾ ಪಂಚಾಯಿತಿಯೇ ಗತಿ. ಮಾಡಿದ್ದುಣ್ಣೋ ಮಹಾರಾಯ ಎಂಬಂತೆ ಇಷ್ಟು ದಿನದ ಪಾಪದ ಫಲ ಅನುಭವಿಸುತ್ತಿದ್ದಾರೆ. ಮಾ.18ರಂದು ಶಿವಮೊಗ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಬರುತ್ತಿದ್ದಾರೆ. ಇವರೇ ಹೋಗಿ ಮೋದಿಯ ಕಾಲು ಹಿಡಿಯಬೇಕಷ್ಟೇ ಎಂದರು.
ಕೆಪಿಸಿಸಿ ಸದಸ್ಯ ವೈ.ಎಚ್.ನಾಗರಾಜ್, ಪ್ರಮುಖರಾದ ಶಿ.ಜು.ಪಾಶ, ಜೆ.ಪದ್ಮನಾಭ, ಸೈಯದ್ ವಾಹಿದ್ ಅಡ್ಡು, ಏಸುದಾಸ್, ಆಯನೂರು ಸಂತೋಷ್ ಸುದ್ದಿಗೋಷ್ಠಿಯಲ್ಲಿದ್ದರು.