ಜಿಲ್ಲೆ

ಈ ಬಾರಿ ಬಿಜೆಪಿಗೆ ಪೂರ್ಣ ಬಹುಮತ: ಈಶ್ವರಪ್ಪ ವಿಶ್ವಾಸ

reportermys

ಮಡಿಕೇರಿ:

ಪ್ರಬಲ ನೇತೃತ್ವ, ಕಾರ್ಯಕರ್ತರ ಸಂಘಟನಾ ಶಕ್ತಿ, ಅಭಿವೃದ್ಧಿ ಹಾಗೂ ಭಾರತೀಯ ಸಂಸ್ಕೃತಿಯ ರಕ್ಷಣೆ ಎನ್ನುವ ನಾಲ್ಕು ಅಂಶ ಇಟ್ಟುಕೊಂಡು ಬಿಜೆಪಿ ಚುನಾವಣೆ ಎದುರಿಸುತ್ತಿದ್ದು ಈ ಬಾರಿ ಪೂರ್ಣ ಬಹುಮತ ಸಿಗುವ ನಿರೀಕ್ಷೆ ಇದೆ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ವಿಶ್ವಾಸ ವ್ಯಕ್ತಪಡಿಸಿದರು. ವಿಜಯ ಸಂಕಲ್ಪ ಯಾತ್ತೆಗೆ ಆಗಮಿಸಿದ ವೇಳೆ ಶನಿವಾರ ಇಲ್ಲಿ ಸುದ್ದಿಗೊಷ್ಠಿಯಲ್ಲಿ ಮಾತನಾಡಿದರು.


ಬಿಜೆಪಿಗೆ ಈ ಹಿಂದೆ ಪೂರ್ಣ ಬಹುಮತ ಯಾವತ್ತೂ ಸಿಕ್ಕಿರಲಿಲ್ಲ. ಆದರೆ ಈ ಬಾರಿ ರಾಜ್ಯದ ಜನರು ಪೂರ್ಣ ಬಹುಮತ ಕೊಡಬೇಕು ಎನ್ನುವ ನಿರೀಕ್ಷೆಯಿಂದ ಪಕ್ಷದ ಸಂಘಟನೆ ಮಾಡಲಾಗುತ್ತಿದೆ ಎಂದರು.
ಮಾಜಿ ಮುಖ್ಯಮಂತ್ರಿ ಡಿ.ವಿ. ಸದಾನಂದ ಗೌಡ ಮಾತನಾಡಿ ರಾಜ್ಯ ಚುನಾವಣಾ ರಂಗ ತಯಾರಾಗುತ್ತಿದ್ದಂತೆಯೇ ಬಿಜೆಪಿಯೂ ಸಿದ್ಧತೆ ನಡೆಸಿದೆ. ಮತದಾರರನ್ನು ತಲುಪುವ ಪ್ರಯತ್ನ ನಡೆದಿದೆ. ಭರವಸೆ, ಆಶ್ವಾಸನೆ ಮೇಲೆ ಚುನಾವಣೆ ನಡೆಯಬಾರದು ಎಂದು ಪ್ರಧಾನಿ ಆದ ನಂತರ ನರೇಂದ್ರ ಮೋದಿ ಸ್ಪಷ್ಟ ಸಂದೇಶ ನೀಡಿದ್ದಾರೆ. ಅವಕಾಶಗಳ ಬಳಕೆ ಮಾಡಿಕೊಂಡು ಜನಸೇವೆಗೆ ಉಪಯೋಗ ಮಾಡಿಕೊಳ್ಳಬೇಕು. ಹಾಗಾಗಿ ಪ್ರಜಾತಂತ್ರದ ಮೌಲ್ಯಗಳಿಗೆ ಗೌರವ ತರುವ ತಯಾರಿ ನಡೆದಿದ್ದು, ೪ ರಥಗಳ ಮೂಲಕ. ೨೨೪ ಸಾಧನೆಗಳ ಕ್ಷೇತ್ರಗಳಲ್ಲೂ ಸಾಧನೆಯ ಆಧಾರದಲ್ಲಿ ಮತ ಯಾಚನೆ ಮಾಡಲಾಗುತ್ತಿದೆ ಎಂದರು.


ಈ ಬಾರಿಯ ಜನ ಬೆಂಬಲ ವಿಶೇಷವಾಗಿದೆ. ಕೊಡಗಿನಲ್ಲಿ ಎದುರಾಳಿಗಳೇ ಇಲ್ಲ ಎನ್ನುವುದು ಗೋಣಿಕೊಪ್ಪದಲ್ಲಿ ನಡೆದ ಕಾರ್ಯಕ್ರಮ ವೇಳೆ ಸಾಬೀತಾಗಿದೆ. ಪಕ್ಕದ ಹಾಸನ ಜಿಲ್ಲೆಯಲ್ಲೂ ವಿಶೇಷ ಬೆಂಬಲ ಸಿಗುತ್ತಿದೆ ಎಂದು ಹೇಳಿದರು.


ಗೋಷ್ಟಿಯಲ್ಲಿ ವಿರಾಜಪೇಟೆ ಶಾಸಕ ಕೆ.ಜಿ. ಬೋಪಯ್ಯ, ಮಡಿಕೇರಿ ಶಾಸಕ, ಎಂಎಲ್‌ಸಿ ಸುಜಾ ಕುಶಾಲಪ್ಪ, ಮಾಜಿ ಎಂಎಲ್‌ಸಿ ಸುನೀಲ್ ಸುಬ್ರಹ್ಮಣಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಬಿನ್ ದೇವಯ್ಯ, ಮಡಿಕೇರಿ ನಗರಸಭಾಧ್ಯಕ್ಷೆ ನಿತಾ ಪೂವಯ್ಯ, ಜಿಲ್ಲಾ ಬಿಜೆಪಿ ಮಾಜಿ ಅಧ್ಯಕ್ಷ ಬಿ.ಬಿ. ಭಾರತೀಶ್, ರವಿಕುಶಾಲಪ್ಪ, ಸೇರಿದಂತೆ ಬಿಜೆಪಿ ಪ್ರಮುಖರು ಇದ್ದರು.