ಶಿವಮೊಗ್ಗ: ಉಡುಪಿ ಪೇಜಾವರ ಮಠದ ಸ್ವಾಮೀಜಿ ವಿಚಾರದಲ್ಲಿ ಎಂಎಲ್‌ಸಿ ಬಿ.ಕೆ.ಹರಿಪ್ರಸಾದ್ ಅವರು ನಾಲಿಗೆ ಹರಿಬಿಟ್ಟಿದ್ದಾರೆ. ಶ್ರೀಗಳ ಬಗ್ಗೆ ಮಾತನಾಡುವ ಯೋಗ್ಯತೆಯೇ ಅವರಿಗಿಲ್ಲ ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ವಾಗ್ದಾಳಿ ನಡೆಸಿದರು.
ಜಾತಿ ಗಣತಿ ಬಗ್ಗೆ ಅನೇಕ ಸ್ವಾಮೀಜಿಗಳು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಪೇಜಾವರ ಶ್ರೀಗಳು ರಾಮಮಂದಿರದ ಬಗ್ಗೆಯೂ ಮಾತನಾಡುತ್ತಾರೆ. ಜಾತಿ ಗಣತಿ ಅಗತ್ಯ ಇರಲಿಲ್ಲ ಎಂದು ಅಭಿಪ್ರಾಯ ವ್ಯಕ್ತ್ತಪಡಿಸಲು ಸ್ವತಂತ್ರರಿದ್ದಾರೆ. ಆದರೆ ಅದನ್ನೇ ನೆಪವಾಗಿಸಿಕೊಂಡು ಹರಿಪ್ರಸಾದ್ ಬಾಯಿಗೆ ಬಂದಂತೆ ಮಾತನಾಡುವುದು ಒಳ್ಳೆಯದಲ್ಲ. ತಕ್ಷಣ ಹರಿಪ್ರಸಾದ್ ಅವರು ಪೇಜಾವರ ಶ್ರೀಗಳಲ್ಲಿ ಕ್ಷಮೆಯಾಚಿಸಬೇಕು ಎಂದು ಆಗ್ರಹಿಸಿದರು.
ಸಿಎಂ ಖುರ್ಚಿ ಹೋದರೂ ಜಾತಿ ಗಣತಿ ವರದಿ ಬಿಡುಗಡೆ ಮಾಡಬೇಕೆಂದು ಸಿದ್ದರಾಮಯ್ಯಗೆ ಒತ್ತಡ ತಂದಿದ್ದೀರಿ. ಸಿಎಂ ಕೂಡ ಮುಂದಿನ ಸಂಪುಟದಲ್ಲಿ ಚರ್ಚೆ ಮಾಡಿ ವರದಿ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಈವರೆಗೆ ಯಾಕೆ ಸಾಧ್ಯವಾಗಿಲ್ಲ. ಸ್ವಾಮೀಜಿ, ಸಾಧು ಸಂತರ ಬಗ್ಗೆ ಮಾತನಾಡುವಾಗ ಎಚ್ಚರವಹಿಸಬೇಕು ಎಂದರು.