ಜಿಲ್ಲೆ

ವಸತಿ ಹಗರಣ ತನಿಖೆಗೆ ಈಶ್ವರಪ್ಪ ಆಗ್ರಹ

ನವೀನ ಬಿ.ಎಂ

ಶಿವಮೊಗ್ಗ: ರಾಜ್ಯಾದ್ಯಂತ ವಸತಿ ಮನೆಗಳ ಹಂಚಿಕೆ ಬಗ್ಗೆ ಹಾಲಿ ನ್ಯಾಯಾಧೀಶರಿಂದ ಸಮಗ್ರವಾಗಿ ತನಿಖೆ ನಡೆಸಬೇಕು. ಅಕ್ರಮದಲ್ಲಿ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರ ಪಾಲು ಎಷ್ಟಿದೆ ಎಂಬುದು ಬಹಿರಂಗಗೊಳ್ಳಬೇಕು ಎಂದು ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ ಆಗ್ರಹಿಸಿದರು.

ಕಾಂಗ್ರೆಸ್‌ನ ಹಿರಿಯ ಶಾಸಕ, ನೀತಿ ಮತ್ತು ಯೋಜನಾ ಆಯೋಗದ ಉಪಾಧ್ಯಕ್ಷ ಬಿ.ಆರ್.ಪಾಟೀಲ್ ಅವರು ರಾಜೀವ್‌ಗಾಂಧಿ ವಸತಿ ನಿಗಮದಲ್ಲಿ ಕಮಿಷನ್ ಕೊಡದೆ ಮನೆಗಳು ಮಂಜೂರಾಗಲ್ಲ ಎಂಬ ಆರೋಪ ಮಾಡಿದ್ದಾರೆ. ಶಾಸಕರು ಪತ್ರ ಕೊಟ್ಟರೂ ಮನೆ ಮಂಜೂರಾಗಲ್ಲ ಎಂಬ ಗಭೀರ ಆರೋಪ ಮಾಡಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಗ್ರಾಪಂ ಅಧ್ಯಕ್ಷರು, ಸದಸ್ಯರು ಹಣ ಕೊಟ್ಟು ಮನೆಗಳನ್ನು ಮಂಜೂರು ಮಾಡಿಸಿಕೊಂಡು ಬಂದಿದ್ದಾರೆ ಎಂದು ಹೇಳಿದ್ದಾರೆ. ಸಚಿವರಾದ ಡಾ.ಜಿ.ಪರಮೇಶ್ವರ್, ಶಿವಾನಂದ ಪಾಟೀಲ್, ಬೋಸರಾಜ ಸಹಿತ ಹಲವರು ಬಿ.ಆರ್.ಪಾಟೀಲ್ ಹೇಳಿಕೆಯನ್ನು ಸಮರ್ಥಿಸಿಕೊಂಡು ತನಿಖೆಗೆ ಒತ್ತಾಯಿಸಿದ್ದಾರೆ. ಆದರೆ ಡಿಸಿಎಂ ಡಿ.ಕೆ.ಶಿವಕುಮಾರ್ ಮಾತ್ರ ಯಾವುದೇ ಅಕ್ರಮ ನಡೆದಿಲ್ಲ ಎನ್ನುತ್ತಿದ್ದಾರೆ. ಈ ವಿಚಾರದಲ್ಲಿ ಬಿ.ಆರ್.ಪಾಟೀಲ್ ಅವರು ತಮ್ಮ ಹೇಳಿಕೆಯಿಂದ ಹಿಂದೆ ಸರಿಯಬಾರದು ಎಂದರು.