ಮಂಜುನಾಥ್ 
ಜಿಲ್ಲೆ

ಈಶ್ವರ ಖಂಡ್ರೆ ನಿರ್ಧಾರ ಅವೈಜ್ಞಾನಿಕ

ಲೋಕೇಶ್ ಮನು. ಡಿ

ಮಳವಳ್ಳಿ: ಅರಣ್ಯ ಪ್ರದೇಶದಲ್ಲಿ ಜಾನುವಾರುಗಳನ್ನು ಮೇಯಿಸಲು ಬಿಡುವಂತಿಲ್ಲ ಎಂಬ ಅರಣ್ಯ ಮತ್ತು ಪರಿಸರ ಸಚಿವ ಈಶ್ವರ ಖಂಡ್ರೆ ಅವರ ಸೂಚನೆ ಅವೈಜ್ಞಾನಿಕವಾಗಿದೆ ಎಂದು ಗೋ ಸಂರಕ್ಷಣಾ ಸಮಿತಿ ರಾಜ್ಯ ಸಂಚಾಲಕ ಮಳವಳ್ಳಿ ಮಂಜುನಾಥ್ ಸಚಿವರ ನಿರ್ಧಾರವನ್ನು ಪತ್ರಿಕಾ ಹೇಳಿಕೆಯಲ್ಲಿ ವಿರೋಧಿಸಿದ್ದಾರೆ.

ಕಾಡಂಚಿನಲ್ಲಿ ವಾಸಿಸುವಂತಹ ಗ್ರಾಮಸ್ಥರು ಹಲವು ತಲೆಮಾರುಗಳಿಂದ ದನಗಳನ್ನು ಸಾಕುವುದರ ಮುಖಾಂತರ ತಮ್ಮ ಜೀವನ ಕಟ್ಟಿಕೊಂಡಿದ್ದಾರೆ. ಹಾಲಿನ ಉತ್ಪಾದನೆಯನ್ನೇ ಕಾಣದ ಇವರು, ಜಾನುವಾರುಗಳ ಸಗಣಿಯಿಂದ ಬರುವಂತಹ ಸಣ್ಣ ಪ್ರಮಾಣದ ಆದಾಯದಿಂದ ಜೀವನ ನಡೆಸುತ್ತಿದ್ದಾರೆ. ಪ್ರಕೃತಿ ಕೊಟ್ಟಿರತಕ್ಕಂತಹ ವರದಾನವನ್ನು ಮನುಕುಲ ಹಾಳು ಮಾಡುತ್ತಿದ್ದಾನೆಯೇ ಹೊರತು ಯಾವುದೇ ಜೀವಿಗಳಿಂದ ಹಾನಿಯಾಗಿಲ್ಲ. ಸಾಕುಪ್ರಾಣಿಗಳಿಂದ ಅರಣ್ಯ ನಾಶವಾಗುತ್ತಿದೆ ಎಂಬುದು ಹಾಸ್ಯಾಸ್ಪದ ಸಂಗತಿ. ಅರಣ್ಯ ಒತ್ತುವರಿ ಮಾಡಿ, ಮರಗಳನ್ನು ಕಡಿದು ಕಳ್ಳ ಸಾಗಣೆ ಮಾಡುವುದು ಮನುಷ್ಯರ ಕೃತ್ಯವಾಗಿದೆ. ಜಾನುವಾರುಗಳು ಕಾಡಿನಲ್ಲಿ ಹುಲ್ಲು, ಸೊಪ್ಪು ತಿನ್ನುವ ಜತೆಗೆ ಸಗಣಿ ಮತ್ತು ಗಂಜಲ ಹಾಕುವುದರಿಂದ ಮತ್ತಷ್ಟು ಭೂಮಿ ಫಲವತ್ತವಾಗುತ್ತದೆ. ಕಾಡಂಚಿನಲ್ಲಿ ಅವೈಜ್ಞಾನಿಕವಾಗಿ ರಸ್ತೆ ಮಾಡುವಾಗ ಮರಗಳ ಮಾರಣಹೋಮ ನಡೆಯುವುದು, ಕೆರೆಕಟ್ಟೆ ಮುಚ್ಚುವ ಕ್ರಮದಿಂದ ಅರಣ್ಯ ನಾಶವಾಗುತ್ತಿದೆ. ಸಾಕುಪ್ರಾಣಿಗಳಿಂದ ಖಂಡಿತ ನಾಶವಾಗುವುದಿಲ್ಲ. ಕಾಡಿನ ಮಧ್ಯೆ ಯಾವುದೇ ಕಾರಣಕ್ಕೂ ರೈತರು ಜಾನುವಾರುಗಳನ್ನು ಮೇಯಿಸುವುದಿಲ್ಲ. ಅವನತಿಯ ಅಂಚಿನಲ್ಲಿರುವ ಅನೇಕ ದೇಸಿ ತಳಿಗೋವುಗಳನ್ನು ಕಾಡಂಚಿನ ರೈತರುವ ಸಾಕುತ್ತಿದ್ದಾರೆ. ಇವುಗಳು ಸಂಪೂರ್ಣವಾಗಿ ಅರಣ್ಯದ ಅಂಚಿನ ಪ್ರದೇಶವನ್ನೇ ಆಹಾರಕ್ಕಾಗಿ ಅವಲಂಬಿಸಿವೆ. ಇವುಗಳು ಹಾಕುವ ಸಗಣಿಯಿಂದ ಬದುಕು ನಡೆಸುತ್ತಿರುವ ರೈತಾಪಿ ವರ್ಗದ ನೂರಾರು ಕುಟುಂಬಗಳ ಜೀವನ ಸಚಿವರ ಆದೇಶದಿಂದ ಬೀದಿಗೆ ಬರುತ್ತದೆ. ಅಲ್ಲದೆ ಬೇರೆ ಮಾರ್ಗ ಕಾಣದೆ ಕಸಾಯಿಖಾನೆಗಳಿಗೆ ದೇಸಿ ತಳಿಯ ಹಸುಗಳನ್ನು ಮಾರುವ ಸ್ಥಿತಿ ಎದುರಾಗುತ್ತದೆ. ಕಾಡಂಚಿನ ಗ್ರಾಮಸ್ಥರು ಗೋವುಗಳನ್ನು ವಂಶಪರಂಪರ್ಯವಾಗಿ ಸಾಕಣೆ ಮಾಡುತ್ತಿದ್ದಾರೆ.

ಹಾಗಾಗಿ ಅರಣ್ಯ ಸಚಿವರು ಈ ಬಗ್ಗೆ ತಜ್ಞರಿಂದ ಮಾಹಿತಿ ಪಡೆದು ಸಾಧಕ ಬಾಧಕ ಅವಲೋಕಿಸುವ ಮೂಲಕ ಕೂಡಲೇ ಆದೇಶ ಹಿಂದಕ್ಕೆ ಪಡೆಯಬೇಕು ಎಂದು ಆಗ್ರಹಿಸಿದ್ದಾರೆ.