ವಿಜಯಪುರದಲ್ಲಿ ಎಬಿವಿಪಿ ವಿದ್ಯಾರ್ಥಿಗಳು ಖಾಲಿ ಕುರ್ಚಿಗೆ ಮನವಿ ಪ್ರತಿ ಸಲ್ಲಿಸಿದರು. ಜಿಲ್ಲಾ ಸಂಚಾಲಕ ಮಂಜುನಾಥ ಹಳ್ಳಿ, ಶಿವನಗೌಡ ಬಿರಾದಾರ, ಶ್ರೀಕಾಂತ ಬಿರಾದಾರ ಮತ್ತಿತರರಿದ್ದಾರೆ.  
ಜಿಲ್ಲೆ

ವಿಶ್ವ ವಿದ್ಯಾಲಯಗಳ ತಂತ್ರಾಂಶದಲ್ಲಿ ದೋಷ, ಎಬಿವಿಪಿಯಿಂದ ಖಾಲಿ ಕುರ್ಚಿಗೆ ಮನವಿ

ವಿಜಯಪುರ: ರಾಜ್ಯದ ವಿವಿಧ ವಿಶ್ವವಿದ್ಯಾಲಯಗಳ ತಂತ್ರಾಂಶದ ದೋಷಗಳನ್ನು ಸರಿಪಡಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ನಿಂದ ನಡೆದ ಪ್ರತಿಭಟನೆ ಸ್ಥಳಕ್ಕೆ ಮನವಿ ಸ್ವೀಕರಿಸಲು ಅಧಿಕಾರಿಗಳು ಬಾರದ ಹಿನ್ನೆಲೆ ಖಾಲಿ ಕುರ್ಚಿಗೆ ಮನವಿ ಸಲ್ಲಿಸಲಾಯಿತು.

ಬುಧವಾರ ನಗರದಲ್ಲಿ ಪ್ರತಿಭಟನೆ ನಡೆಸಿದ ಎಬಿವಿಪಿ ಪದಾಧಿಕಾರಿಗಳು, ಬೆಳಗಾವಿಯ ಪ್ರತಿಷ್ಠಿತ ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯ ಸೇರಿದಂತೆ ರಾಜ್ಯದ ಹಲವು ವಿಶ್ವ ವಿದ್ಯಾಲಯಗಳಲ್ಲಿ ಯುಯುಸಿಎಂಎಸ್ ತಂತ್ರಾಂಶದಲ್ಲಿ ಉಂಟಾದ ದೋಷದಿಂದಾಗಿ ವಿದ್ಯಾರ್ಥಿಗಳು ಪರದಾಡುವಂತಾಗಿದೆ ಎಂದರು.

ರಾಜ್ಯದ ವಿವಿಧ ವಿಶ್ವ ವಿದ್ಯಾಲಯಗಳ ವ್ಯಾಪ್ತಿಯ ಪದವಿ ಕಾಲೇಜುಗಳ ಪ್ರಥಮ, ತೃತೀಯ ಹಾಗೂ ಐದನೇ ಸೆಮಿಸ್ಟರ್‌ಗೆ ಡಿಸೆಂಬರ್ ನಲ್ಲಿ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಆನ್‌ಲೈನ್ ಮೂಲಕ ಪರೀಕ್ಷಾ ಅರ್ಜಿ ತುಂಬುತ್ತಿದ್ದಾರೆ. ವಿದ್ಯಾರ್ಥಿಗಳ ಖಾತೆಯಿಂದ ಹಣ ಪಾವತಿಯಾಗುತ್ತಿದೆ. ಆದರೆ ಅರ್ಜಿ ಸಲ್ಲಿಕೆ ಆಗದೆ ವಿದ್ಯಾರ್ಥಿಗಳು ಚಿಂತೆಗೀಡಾಗುತ್ತಿದ್ದಾರೆ. ನಿಮ್ಮ ಅರ್ಜಿ ಫೇಲ್ಡ್ ಎಂಬ ಸಂದೇಶದಿಂದ ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ ಎಂದರು.

ಈಗಾಗಲೇ ರಾಣಿ ಚೆನ್ನಮ್ಮ ವಿಶ್ವವಿದ್ಯಾಲಯ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳ ಪದವಿ ಕಾಲೇಜುಗಳ ಪರೀಕ್ಷಾ ಅರ್ಜಿ ಯುಯುಸಿಎಂಎಸ್ ವೆಬ್ ಸೈಟ್ ನಲ್ಲಿ ಅರ್ಜಿ ತುಂಬುವ ಪ್ರಕ್ರಿಯೆ ಶುರುವಾಗಿದೆ. ಆದರೆ ಬಹುತೇಕ ವಿದ್ಯಾರ್ಥಿಗಳ ಖಾತೆಯಿಂದ ಹಣ ಜಮೆಯಾಗಿದೆ. ಆದರೆ ಸರಿಯಾದ ಅರ್ಜಿ ಯಶಸ್ವಿ ಆಗಿರುವ ಸಂದೇಶ ಬರುತ್ತಿಲ್ಲ. ವಿದ್ಯಾರ್ಥಿಗಳು ಕಾಲೇಜಿನಲ್ಲಿ ವಿಚಾರಿಸಿದರೆ ವಿಶ್ವ ವಿದ್ಯಾಲಯದಲ್ಲಿ ಕೇಳಿ ಎನ್ನುತ್ತಾರೆ. ವಿಜಯಪುರ, ಬಾಗಲಕೋಟೆಯಿಂದ ಬಂದ ವಿದ್ಯಾರ್ಥಿಗಳು ರಾಣಿ ಚೆನ್ನಮ್ಮ ವಿಶ್ವ ವಿದ್ಯಾಲಯದಲ್ಲಿ ಕೇಳಿದರೆ ಶುಲ್ಕ ಮತ್ತೊಮ್ಮೆ ಪಾವತಿಸಿ ಎಂದು ಇಲ್ಲವೇ ಯುಯುಸಿಎಂಎಸ್ ಬಳಿ ಹೋಗಿ ಕೇಳಿ ಎಂದು ಹೇಳುತ್ತಿದ್ದಾರೆ. ಈ ಎಲ್ಲ ವ್ಯವಸ್ಥೆಯಿಂದ ವಿದ್ಯಾರ್ಥಿಗಳು ಗೊಂದಲಕ್ಕೆ ಈಡಾಗಿದ್ದಾರೆ. ಆದ್ದರಿಂದ ಈ ಪರೀಕ್ಷಾ ಶುಲ್ಕ ಸೇರಿದಂತೆ ಇತರೆ ಶುಲ್ಕಗಳನ್ನು ತಮ್ಮ ಕಾಲೇಜು ಹಂತದಲ್ಲಿ ಆನ್‌ಲೈನ್ ವ್ಯವಸ್ಥೆ ರದ್ದುಗೊಳಿಸಿ ಆಫ್ ಲೈನ್ ತುಂಬುವ ವ್ಯವಸ್ಥೆ ಮಾಡಬೇಕು. ಇಲ್ಲವೇ ಈ ಸಮಸ್ಯೆಯನ್ನು ವಿಶ್ವವಿದ್ಯಾಲಯ ಮತ್ತು ಸರ್ಕಾರ ಕೂಡಲೇ ಪರಿಹರಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಮಾಡಿಕೊಡಬೇಕು ಎಂದರು.

ಜಿಲ್ಲಾ ಸಂಚಾಲಕ ಮಂಜುನಾಥ ಹಳ್ಳಿ, ಶಿವನಗೌಡ ಬಿರಾದಾರ, ಶ್ರೀಕಾಂತ ಬಿರಾದಾರ, ಸುಜ್ಞಾತ ಕುಲಕರ್ಣಿ, ಪ್ರವೀಣ ಬಿರಾದಾರ, ಸಂದೀಪ ಅರಳಗುಂಡಿ, ಚೇತನ ಕೊರವಾರ, ಮಹೇಶಗೌಡ ಮಿರ್ಜಿ, ಸುರೇಶ ಲೋನಾರ, ಆನಂದ ಪೂಜಾರಿ, ಕಾರ್ತಿಕ ಮಾಳಿ, ದುಂಡಪ್ಪ ನೆಲೋಗಿ, ರಮೇಶ ನಾಟೀಕಾರ ಮತ್ತಿತರರಿದ್ದರು.