ಜಿಲ್ಲೆ

ಮಾಂಡ್ ಸೊಭಾಣ್ ಗುರಿಕಾರ ಎರಿಕ್ ಒಝೇರಿಯೊ ನಿಧನ



ಮಂಗಳೂರು : ಮಾಂಡ್ ಸೊಭಾಣ್ ಗುರಿಕಾರ, ಕೊಂಕಣಿ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಎರಿಕ್ ಅಲೆಕ್ಸಾಂಡರ್ ಒಝೆರಿಯೊ (76) ಅವರು ಅಸೌಖ್ಯದಿಂದ ಶುಕ್ರವಾರ ನಗರದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು. ಕೊಂಕಣಿ ಚಳುವಳಿಯ ಮೇರು ನಾಯಕ ಎರಿಕ್ ಅವ್ಟ್ಠ ಪತ್ನಿ, ಪುತ್ರ ಹಾಗೂ ಪುತ್ರಿಯನ್ನು ಅಗಲಿದ್ದಾರೆ. ಅವರ ಅಂತಿಮ ವಿಧಿ ವಿಧಾನಗಳು ಆ.31ರಂದು ನಡೆಯಲಿದ್ದು, ಬೆಳಗ್ಗೆ 11.15ಕ್ಕೆ ಸಂತ ವಿನ್ಸೆಂಟ್ ಫೆರೆರ್ ಚರ್ಚ್ ವಲೆನ್ಸಿಯಾ ಇಲ್ಲಿ ಅಂತಿಮ ಬಲಿಪೂಜೆ ನೆರವೇರಲಿದೆ. ಮಧ್ಯಾಹ್ನ 1ರಿಂದ 4.30ವರೆಗೆ ಶಕ್ತಿನಗರದ ಕಲಾಂಗಣದಲ್ಲಿ ಸಾರ್ವಜನಿಕ ವೀಕ್ಷಣೆ ಮತ್ತು ಶ್ರದ್ಧಾಂಜಲಿ ನಡೆಯಲಿದೆ.
ಎರಿಕ್ ಒಝೆರಿಯೊ ಅವರು ಕೊಂಕಣಿ ಸಂಗೀತ ಕ್ಷೇತ್ರಕ್ಕೆ ಹೊಸತನ ನೀಡಲು ಶ್ರಮಿಸಿದವರು. 1986ರಲ್ಲಿ ಮಾಂಡ್ ಸೊಭಾಣ್ ಸಂಗೀತ ಪ್ರಯೋಗ ಆರಂಭಿಸಿ ದೇಶ ವಿದೇಶಗಳಲ್ಲಿ ಪ್ರದರ್ಶನ ನೀಡಿದವರು. ಬಳಿಕ ಮಾಂಡ್ ಸೊಭಾಣ್ ಸಂಘಟನೆ ರಚಿಸಿ ನಾಟ್ಯ, ನಾಟಕ, ಗಾಯನ ಹಾಗೂ ವಿವಿಧ ಕಲಾಪ್ರಕಾರಗಳ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದವರು. ಕೊಂಕಣಿಯ ಗಿನ್ನೆಸ್ ದಾಖಲೆ ಮಾಂಡ್ ಸೊಭಾಣ್ ಹೆಸರಲ್ಲಿದೆ.
ವಿಶ್ವದ ಪ್ರಥಮ ಬಾಯ್ಲ ಶೋ, ಮಾಂಡೊ ಹಬ್ಬ, ಪರಬ್, ಸಾಂತ್, ಮಾಂಡೊ ಉತ್ಸವ, ಕೊಂಕ್ಣಿ ಮಹೋತ್ಸವ, ಪ್ರಥಮ ವಿಶ್ವ ಕೊಂಕಣಿ ಸಾಂಸ್ಕೃತಿಕ ಮಹೋತ್ಸವ ಮುಂತಾದ ಕಾರ್ಯಕ್ರಮಗಳ ನಿರ್ದೇಶಕರಾಗಿ ದುಡಿದವರು.
2005-08 ಅವಧಿಗೆ ಕೊಂಕಣಿ ಸಾಹಿತ್ಯ ಅಕಾಡೆಮಿಗೆ ಅಧ್ಯಕ್ಷರಾಗಿದ್ದರು. ಶಾಲೆಗಳಲ್ಲಿ ತೃತೀಯ ಭಾಷೆಯಾಗಿ ಕೊಂಕಣಿ ಕಲಿಕೆ ಆರಂಭವಾಗಲು ಪ್ರಮುಖ ಕಾರಣರಾಗಿದ್ದರು. ಜಾಗತಿಕ ಮಟ್ಟದ 145 ಸದಸ್ಯ ಸಂಸ್ಥೆಗಳ ಕೊಂಕಣಿ ಸಂಘಟನೆ ಕಟ್ಟಿ ಹಲವಾರು ಜಾಗೃತಿ ಅಭಿಯಾನಗಳನ್ನು ನಡೆಸಿದ್ದಾರೆ.
ಆಂಗ್ಲ ಭಾಷೆಯಲ್ಲಿ ರೆಡ್ ವೈಟ್ ಮತ್ತು ದಿ ಇಂಡಿಫ್ಯಾಟಿಗೇಬಲ್ ಕ್ರುಸೇಡರ್ ಹಾಗೂ ಕೊಂಕಣಿಯಲ್ಲಿ ಥಕಾನಾತ್‌ಲ್ಲೊ ಝುಜಾರಿ ಹೀಗೆ
ಅವರ 3 ಜೀವನಗಾಥೆಗಳು ಪ್ರಕಟವಾಗಿವೆ. ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ (1993) ಸಹಿತ ದೇಶ, ವಿದೇಶಗಳ ಹಲವು ಪ್ರಶಸ್ತಿ ಇವರಿಗೆ ದೊರೆತಿದೆ. ಕೊಂಕಣಿ ಜನರು ವಿಶ್ವ ಕೊಂಕಣಿ ಕಲಾರತ್ನ ಬಿರುದು ನೀಡಿದ್ದಾರೆ. ದೂರದರ್ಶನದ ಸುರಭಿ ಕಾರ್ಯಕ್ರಮದಲ್ಲಿ ಎರಿಕ್ ಅವರನ್ನು ದೇಶಕ್ಕೆ ಪರಿಚಯಿಸಲಾಗಿದೆ.