ಬಸವನಬಾಗೇವಾಡಿ ಪಟ್ಟಣದ ನಂದೀಶ್ವರ ರಂಗ ಮಂದಿರದಲ್ಲಿ ಹಮ್ಮಿಕೊಂಡಿದ್ದ ಬಸವ ಜಾನಪದೋತ್ಸವ ಕಾರ್ಯಕ್ರಮಕ್ಕೆ ಸಹಕಾರ ಮಹಾಮಂಡಳಿ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಚಾಲನೆ ನೀಡಿದರು. ಬಾಳನಗೌಡ ಪಾಟೀಲ, ಸಿದ್ದಲಿಂಗ ಶ್ರೀಗಳು, ಎಂ.ಜಿ.ಆದಿಗೊಂಡ, ಶಿವಾನಂದ ಮಂಗಾನವರ ಇತರರಿದ್ದರು. 
ಜಿಲ್ಲೆ

ಬಸವನಬಾಗೇವಾಡಿಯಲ್ಲಿ ಬಸವ ಜಾನಪದೋತ್ಸವ

ಬಸವನಬಾಗೇವಾಡಿ: ಸನಾತನ ಧರ್ಮದ ಸಂಸ್ಕೃತಿ, ಸಂಪ್ರದಾಯ, ಕಲೆ, ಸಾಹಿತ್ಯ ಬಿಂಬಿಸುವ ಕಲೆಯೇ ಜಾನಪದ ಕಲೆಯಾಗಿದೆ. ನಶಿಸಿ ಹೋಗುತ್ತಿರುವ ಕಲೆಯನ್ನು ಉಳಿಸಿ ಬೆಳೆಸುವ ಕಾರ್ಯವಾಗಬೇಕು ಎಂದು ಸಹಕಾರ ಮಹಾಮಂಡಳಿ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ ಹೇಳಿದರು.

ಬಸವೇಶ್ವರ (ಮೂಲನಂದೀಶ್ವರ) ಜಾತ್ರಾ ಮಹೋತ್ಸವ ನಿಮಿತ್ತ ಪಟ್ಟಣದ ಬಸವೇಶ್ವರ ಆಂಗ್ಲ ಮಾಧ್ಯಮ ಶಾಲಾ ಆವರಣದಲ್ಲಿನ ನಂದೀಶ್ವರ ರಂಗ ಮಂದಿರದಲ್ಲಿ ಬಸವೇಶ್ವರ ಜಾತ್ರಾ ಮಹೋತ್ಸವ ಸಮಿತಿ ಹಾಗೂ ಕನ್ನಡ ಜಾನಪದ ಪರಿಷತ್ ಬೆಂಗಳೂರು, ಜಿಲ್ಲಾ ಘಟಕ, ತಾಲೂಕು ಘಟಕದ ವತಿಯಿಂದ ಗುರುವಾರ ಹಮ್ಮಿಕೊಂಡಿದ್ದ ಬಸವ ಜಾನಪದೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಜಿಲ್ಲಾ ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಬಾಳನಗೌಡ ಪಾಟೀಲ ಮಾತನಾಡಿ, ಮಾನವೀಯತೆಯ ಮೌಲ್ಯಗಳು ಜಾನಪದ ಸಾಹಿತ್ಯದಲ್ಲಿ ಅಡಗಿವೆ. ಆದ್ದರಿಂದ ಜಾನಪದ ಸಾಹಿತ್ಯ ಉಳಿಸಿ ಬೆಳೆಸಿ ಅವುಗಳನ್ನು ಜೀವಂತವಾಗಿ ಉಳಿಸುವ ಕಾರ್ಯದಲ್ಲಿ ನಾವು ತೊಡಗಬೇಕು ಎಂದು ಹೇಳಿದರು.
ಜಾನಪದ ಕಲೆ ಸಾಹಿತ್ಯ ಉಳಿಯಬೇಕಾದರೆ ಕಲಾವಿದರ ಬದುಕು ಹಸನಾಗಬೇಕು. ಕೇಂದ್ರ ಹಾಗೂ ರಾಜ್ಯ ಸರ್ಕಾರ ಜಾನಪದ ಸಾಹಿತ್ಯದ ಉಳಿವಿಗೆ ಮತ್ತು ಕಲಾವಿದರ ಬದುಕಿಗೆ ಆಸರೆಯಾಗಿ ನಿಂತಾಗ ನಿಲ್ಲಬೇಕು ಎಂದರು.

ಪಟ್ಟಣದ ವಿರಕ್ತಮಠದ ಸಿದ್ದಲಿಂಗ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು. ಜಾತ್ರಾ ಉತ್ಸವ ಸಮಿತಿ ಅಧ್ಯಕ್ಷ ಎಂ.ಜಿ. ಆದಿಗೊಂಡ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಸರ್ಕಾರಿ ನೌಕರರ ಸಂಘದ ತಾಲೂಕಾಧ್ಯಕ್ಷ ಶಿವಾನಂದ ಮಂಗಾನವರ, ಬಸವರಾಜ ಹಾರಿವಾಳ, ಸಂಗಣ್ಣ ಕಲ್ಲೂರ, ವೈ.ಎಸ್. ಜಾಗೀರದಾರ, ದೇವೇಂದ್ರ ಗೊನ್ಯಾಳ, ವೈ.ಎಸ್. ಗಂಗಶೆಟ್ಟಿ, ಎ.ಆರ್. ಮುಲ್ಲಾ, ಜಾತ್ರಾ ಕಮೀಟಿ ಉಪಾಧ್ಯಕ್ಷರಾದ ಸುಭಾಷ ಗಾಯಕವಾಡ, ಶ್ರೀಧರ ಕುಂಬಾರ, ವಿಶ್ವನಾಥ ನಿಡಗುಂದಿ ಇತರರಿದ್ದರು. ಪ್ರಭಾಕರ ಖೇಡದ ಸ್ವಾಗತಿಸಿದರು. ಕೊಟ್ರೇಶ ಹೆಗಡ್ಯಾಳ ನಿರೂಪಿಸಿದರು.