ಜಿಲ್ಲೆ

ಸೂಕ್ತ ಚಿಕಿತ್ಸೆಯಿಂದ ಕ್ಷಯರೋಗ ನಿರ್ಮೂಲನೆ

ಮೂಡಿಗೆರೆ: ಕ್ಷಯರೋಗಕ್ಕೆ ಸಂಬಂಧಪಟ್ಟ ಲಕ್ಷಣಗಳು ಕಂಡುಬಂದಲ್ಲಿ ಸಮೀಪದ ಆಸ್ಪತ್ರೆಗೆ ತೆರಳಿ ತಪಾಸಣೆ ನಡೆಸಿದರೆ ರೋಗಕ್ಕೆ ಸೂಕ್ತ ಚಿಕಿತ್ಸೆ ದೊರೆಯುತ್ತದೆ. ಈ ಬಗ್ಗೆ ಆತಂಕಪಡುವ ಅಗತ್ಯವಿಲ್ಲ ಎಂದು ಜಾವಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಆಕರ್ಷ ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಜಾವಳಿ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೋಮವಾರ ನಡೆದ ಕ್ಷಯರೋಗ ನಿವಾರಣಾ ಅಭಿಯಾನ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ಷಯರೋಗ ನಿಯಂತ್ರಿಸಲು ಸರ್ಕಾರ ಹಲವು ರೀತಿಯ ಮುಂಜಾಗ್ರತಾ ಕ್ರಮ ಕೈಗೊಂಡಿದೆ. ಎಲ್ಲ ಆಸ್ಪತ್ರೆಯಲ್ಲಿ ಕ್ಷಯರೋಗಿಗಳಿಗೆ ಪ್ರತ್ಯೇಕ ಚಿಕಿತ್ಸೆ ನೀಡಲು ವ್ಯವಸ್ಥೆ ಮಾಡಲಾಗಿದೆ. ಈ ರೋಗದಿಂದ ಬಳಲುತ್ತಿರುವವರು ಮತ್ತು ರೋಗಿಯನ್ನು ಆರೈಕೆ ಮಾಡುತ್ತಿರುವವರು ಯಾವುದೇ ಆತಂಕಪಡುವ ಅಗತ್ಯವಿಲ್ಲ ಎಂದರು.

ಮಲೆನಾಡು ಭಾಗದಲ್ಲಿ ಕ್ಷಯರೋಗಿಗಳ ಸಂಖ್ಯೆ ಕಡಿಮೆಯಿದೆ. ಆರೋಗ್ಯ ಇಲಾಖೆ ಅರಿವು ಕಾರ್ಯಕ್ರಮದಲ್ಲಿ ಜನರಿಗೆ ತಿಳಿಸಿರುವಂತೆ ಸಾರ್ವಜನಿಕರು ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುತ್ತಿರುವ ಕಾರಣ ಕ್ಷಯರೋಗದಂತಹ ಮಾರಕ ರೋಗಗಳು ದೂರವಾಗಿವೆ ಎಂದು ತಿಳಿಸಿದರು.

ವಕೀಲ ಪರೀಕ್ಷಿತ್ ಜಾವಳಿ, ಆರೋಗ್ಯ ಕೇಂದ್ರದ ಸಿಬ್ಬಂದಿಗಳಾದ ಮಂಜುನಾಥ್, ವಿಜಯಲಕ್ಷ್ಮೀ, ಸುಜಯ, ಕವಿತಾ, ಆಶಾ ಕಾರ್ಯಕರ್ತರಾದ ಮಾಲಾ, ಗೌರಮ್ಮ , ವಸಂತಿ, ಜಯ, ಲಕ್ಷ್ಮೀ ಇತರರಿದ್ದರು.