ಜಿಲ್ಲೆ

ಜೀತ ಪದ್ಧತಿ ನಿರ್ಮೂಲನೆ ಎಲ್ಲರ ಜವಾಬ್ದಾರಿ: ನ್ಯಾ. ಬಿ.ಕೆ. ದಾಕ್ಷಾಯಿಣಿ

ಹಾಸನ: ಜೀತ ಪದ್ಧತಿ ಎಂಬುದು ನಮ್ಮ ಸಮಾಜದಲ್ಲಿ ಪುರಾತನ ಕಾಲದಿಂದಲೂ ಬೇರು ಬಿಟ್ಟಿರುವ ವ್ಯವಸ್ಥೆಯಾಗಿದೆ. ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರೂ ಎಚ್ಚರವಹಿಸಿ ಕಾರ್ಯ ನಿರ್ವಹಿಸಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿ.ಕೆ ದಾಕ್ಷಾಯಿಣಿ ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯಿತಿ ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸಹಯೋಗದಲ್ಲಿ ಹಾಸನಾಂಬ ಕಲಾಕ್ಷೇತ್ರದಲ್ಲಿ ಮಂಗಳವಾರ ಜೀತ ಪದ್ಧತಿ ನಿರ್ಮೂಲನಾ ದಿನಾಚರಣೆಯ ಅಂಗವಾಗಿ ಜಿಲ್ಲಾ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳಿಗೆ ಆಯೋಜಿಸಿದ್ದ ಒಂದು ದಿನದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತಾನಾಡಿದ ಅವರು, ಬಲಾಢ್ಯ ಮತ್ತು ಶ್ರೀಮಂತ ವರ್ಗದವರು ಸಾಲದ ರೂಪದಲ್ಲಿ ಹಣದ ಆಮಿಷ ಅಥವಾ ಮತ್ತಿತರ ರೀತಿಯ ಅನೇಕ ಆಮಿಷಗಳ ಒಡ್ಡಿ ಫಾರ್ಮ್ ಹೌಸ್ ಗಳಲ್ಲಿ, ಗಣಿಗಾರಿಕೆ ಮತ್ತಿತರ ಕ್ಲಿಷ್ಟಕರ ಕೆಲಸಗಳಿಗೆ ಬಡತನದಲ್ಲಿರುವ ಜನರನ್ನು ನೇಮಿಸಿಕೊಂಡು ಜೀವನ ಪೂರ್ತಿ ಸಂಬಳ ರಹಿತವಾಗಿ ಕೆಲಸ ಮಾಡಿಸಿಕೊಳ್ಳುತ್ತಿದ್ದರು. ಈ ವ್ಯವಸ್ಥೆಯನ್ನು ನಿರ್ಮೂಲನೆ ಮಾಡಲು 1976ರಲ್ಲಿ ಜೀತ ಪದ್ಧತಿ ನಿರ್ಮೂಲನೆ ಕಾಯ್ದೆಯನ್ನು ಜಾರಿಗೆ ತರಲಾಗಿದೆ ಎಂದರು.

ಕೆಲ ವರ್ಷಗಳ ಹಿಂದೆ ಮಂಡ್ಯ, ನಾಗಮಂಗಲಗಳಲ್ಲಿ ಜೀತ ಪದ್ಧತಿಯಿಂದ ಕಾರ್ಮಿಕರ ನೋಡಿಕೊಳ್ಳುತ್ತಿದ್ದ ವ್ಯವಸ್ಥೆಯ ಕುರಿತು ವಿವರಿಸಿದರಲ್ಲದೆ, ಮಾಲೀಕರು ಜೀತ ಮಾಡುವ ವ್ಯಕ್ತಿಗಳಿಗೆ ಹೊರಗಿನ ಪ್ರಪಂಚದ ಅರಿವು ಬಾರದಂತೆ ನೋಡಿಕೊಳ್ಳುವುದರ ಜೊತೆಗೆ, ಅವರಿಗೆ ಹೊರಗೆ ಓಡಾಡಲು ಅವಕಾಶ ನೀಡದೆ, ಹೊರ ಜಗತ್ತಿನ ಸಂಬಂಧವಿಲ್ಲದಂತೆ ಬದುಕು ಸಾಗಿಸುವಂತೆ ನೋಡಿಕೊಳ್ಳುತ್ತಾರೆ. ಇದೊಂದು ಶೋಚನೀಯ ಸಂಗತಿ ಎಂದರು.

ಜಿಲ್ಲಾಧಿಕಾರಿ ಸಿ. ಸತ್ಯಭಾಮಾ ಮಾತನಾಡಿ, ಜೀತ ಪದ್ಧತಿ ಎಂಬುದು ಒಂದು ಸಾಮಾಜಿಕ ಪಿಡುಗಾಗಿದೆ. ಇದು ಬೇರೆ ಬೇರೆ ರೂಪದಲ್ಲಿ ಎಲ್ಲೆಡೆ ಪಸರಿಸಿಕೊಂಡಿದೆ. ಇದನ್ನು ಸಮಾಜದಲ್ಲಿರುವ ಎಲ್ಲರೂ ಒಟ್ಟುಗೂಡಿ ನಿರ್ಮೂಲನೆ ಮಾಡಲು ಕಾರ್ಯಪ್ರವೃತ್ತರಾಗಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜೀತ ಪದ್ಧತಿಯಲ್ಲಿ ವೇತನವಿಲ್ಲದೆ ದುಡಿಯುವುದಲ್ಲದೆ ಜತೆಗೆ ಆ ಕಾರ್ಮಿಕನಿಗೆ ಯಾವುದೇ ರೀತಿಯ ಸ್ವಾತಂತ್ರ್ಯ ನೀಡುವುದಿಲ್ಲ. ಮಾಲೀಕ ಹೇಳಿದ ಹಾಗೆ ಎಲ್ಲ ಕೆಲಸಗಳನ್ನು ಮಾಡಬೇಕು. ಯಾವುದಕ್ಕೂ ಕೂಡ ಸ್ವಾತಂತ್ರ್ಯವಿರುವುದಿಲ್ಲ. ಈ ಜೀತ ಪದ್ಧತಿಗೆ ಒಳಪಟ್ಟಿರುವಂತಹವರನ್ನು ಗುರುತಿಸುವಿಕೆ, ರಕ್ಷಣೆ, ಬಿಡುಗಡೆಗೊಳಿಸುವುದು ಹಾಗೂ ಅವರಿಗೆ ಪುನರ್ವಸತಿ ಕಲ್ಪಿಸುವಂತಹ ಕೆಲಸಗಳಾಗಬೇಕು ಎಂದು ಹೇಳಿದರು.

ರಾಜ್ಯದಲ್ಲಿ ಹೆಚ್ಚು ಜೀತ ಕಾರ್ಮಿಕರು ಪತ್ತೆಯಾಗಿರುವ ಪ್ರಕರಣಗಳ ಪೈಕಿ ಹಾಸನ ಜಿಲ್ಲೆಯು ಕೂಡ ಒಂದಾಗಿದೆ. ಇದನ್ನು ನಿರ್ಮೂಲನೆ ಮಾಡಲು ಎಲ್ಲ ಇಲಾಖೆಯ ಅಧಿಕಾರಿಗಳ ಮೇಲೆ ಗುರುತರವಾದ ಜವಾಬ್ದಾರಿ ಇದೆ. ಪ್ರಕರಣಗಳ ಗುರುತಿಸಿ ಬೆಳಕಿಗೆ ತರುವುದು ನಮ್ಮ ನಿಮ್ಮೆಲ್ಲರ ಕರ್ತವ್ಯವಾಗಿದೆ. ಈ ನಿಟ್ಟಿನಲ್ಲಿ ಕಟಿಬದ್ಧರಾಗಿ ಸಮನ್ವಯತೆಯಿಂದ ಉತ್ತಮ ಕೆಲಸ ಮಾಡಲು ಅಧಿಕಾರಿಗಳು ಮುಂದಾಗುವಂತೆ ತಿಳಿಸಿದರು.

ಜೀತ ಪದ್ಧತಿ ವ್ಯವಸ್ಥೆ ಶಿಕ್ಷಾರ್ಹ ಅಪರಾಧವೆಂದು ಸಾರ್ವಜನಿಕರಿಗೆ ಕಾರ್ಯಕ್ರಮಗಳ ಮೂಲಕ ಅರಿವು ಮೂಡಿಸಬೇಕು. ಹಾಗೂ ಎಲ್ಲ ಕಚೇರಿಗಳಲ್ಲಿಯೂ ಜೀತ ಪದ್ಧತಿ ನಿರ್ಮೂಲನೆಯ ಕುರಿತು ಫಲಕಗಳನ್ನು ಅಳವಡಿಸಬೇಕು ಎಂದರಲ್ಲದೆ ಇದನ್ನು ನಿರ್ಮೂಲನೆ ಮಾಡಲು ಇಲಾಖೆಗಳು ಮಾಡಬೇಕಾದ ಕರ್ತವ್ಯಗಳ ಕುರಿತು ವಿವರಿಸಿದರು.

ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ವೆಂಕಟೇಶ್ ನಾಯ್ಡು ಅವರು ಮಾತನಾಡಿ, ಜೀತ ಪದ್ಧತಿಯನ್ನು ನಿರ್ಮೂಲನೆ ಮಾಡುವ ಜವಾಬ್ದಾರಿ ಸಮಾಜದಲ್ಲಿರುವ ಪ್ರತಿಯೊಬ್ಬರದ್ದಾಗಿದೆ. ಮನುಷ್ಯರಿಗೆ ಮನುಷ್ಯರೇ ಬೆಲೆ ಕೊಡಬೇಕು. ಜೀತ ಪದ್ಧತಿ ಮಾಡುತ್ತಿರುವ ಕಾರ್ಮಿಕರ ಕುರಿತು ನಿಮ್ಮ ಗಮನಕ್ಕೆ ಬಂದರೆ ಅಂತಹ ಪ್ರಕರಣಗಳ ಕುರಿತು ಸಂಬಂಧಪಟ್ಟ ಅಧಿಕಾರಿಗಳಿಗೆ ಮಾಹಿತಿಯನ್ನು ನೀಡಿ. ಆ ಕೆಲಸವನ್ನು ಕಾರ್ಯರೂಪಕ್ಕೆ ತನ್ನಿ ಎಂದು ಹೇಳಿದರು.

ಜಿಲ್ಲಾ ಹಿರಿಯ ವಕೀಲರಾದ ಬಿ.ಚಂದ್ರಶೇಖರ್ ಅವರು ಮಾತನಾಡಿ, ಮನುಷ್ಯ ಸಂಘ ಜೀವಿ. ಮನುಷ್ಯನಿಗೆ ಬದುಕಲು ಗಾಳಿ, ಬೆಳಕು, ನೀರಿಗಿಂತಲೂ ಕಾನೂನು ಅತ್ಯವಶ್ಯಕ. ಈ ಅನಿಷ್ಟ ಪದ್ಧತಿಯನ್ನು ಹೋಗಲಾಡಿಸಲು ನಮ್ಮ ಸಂವಿಧಾನ 23ನೇ ವಿಧಿಯಲ್ಲಿ ಬಲವಂತವಾಗಿ ದುಡಿಸಿಕೊಳ್ಳುವುದು ನಿಷೇಧ ಎಂದು ಮೂಲಭೂತ ಹಕ್ಕನ್ನು ಕೊಟ್ಟಿದೆ ಹಾಗೂ ಸಮಾನ ಕೆಲಸಕ್ಕೆ ಸಮಾನ ವೇತನ ಎಂಬುದಾಗಿ ತಿಳಿಸಿದೆ.

ಈ ಕಾನೂನನ್ನು ಜಾರಿಗೊಳಿಸಿದ ನಂತರ ಸಮಾಜದಲ್ಲಿ ಅನೇಕ ಬದಲಾವಣೆಗಳಾಗಿವೆ. ಈ ಪದ್ಧತಿಯನ್ನು ನಿರ್ಮೂಲನೆ ಮಾಡಲು ಸ್ಥೈರ್ಯ, ಧೈರ್ಯವಿರಬೇಕು. ಕಾನೂನಿನ ನಿಯಮಗಳನ್ನು ಹೃದಯದಿಂದ ಪ್ರೀತಿಸಿ ಜಾರಿಗೊಳಿಸಬೇಕು. ಉದ್ದೇಶಪೂರ್ವಕವಾಗಿ ನಾವು ಮಾಡುವ ನಿರ್ಲಕ್ಷೃ ಅಕ್ಷಮ್ಯವಾಗಿದೆ. ಹೃದಯದಿಂದ ಕೆಲಸ ಮಾಡಿ ಉತ್ತಮ ಫಲಿತಾಂಶ ಪಡೆಯೋಣ. ಶೂನ್ಯ ಜೀತ ಪದ್ಧತಿಯಾಗಿ ನಮ್ಮ ಜಿಲ್ಲೆಯನ್ನು ಮಾಡೋಣ ಎಂದರು.

ಇದೇ ಸಂದರ್ಭದಲ್ಲಿ ಜಿಲ್ಲಾಧಿಕಾರಿಯವರು ಜೀತ ಪದ್ಧತಿ ನಿರ್ಮೂಲನೆಯ ಕುರಿತ ಪ್ರತಿಜ್ಞಾವಿಧಿಯನ್ನು ಬೋಧಿಸಿದರು ಹಾಗೂ ಜಿಲ್ಲೆಯಲ್ಲಿ ಜೀತ ಪದ್ಧತಿ ಗುರುತಿಸುವಿಕೆ, ರಕ್ಷಣೆ ಮತ್ತು ಅವರಿಗೆ ಪುನರ್ವಸತಿ ಕಲ್ಪಿಸುವ ಕಾರ್ಯದಲ್ಲಿ ಗಮನಾರ್ಹ, ಗಣನೀಯ ಸೇವೆ ಸಲ್ಲಿಸಿರುವ ಅಧಿಕಾರಿಗಳಾದ ಬೇಲೂರಿನ ತಹಸೀಲ್ದಾರ್ ಮಮತಾ ಹಾಗೂ ಹಾಸನದ ಉಪ ವಿಭಾಗಾಧಿಕಾರಿ ಜೆ.ಬಿ.ಮಾರುತಿ ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯಿತಿಯ ಉಪ ಕಾರ್ಯದರ್ಶಿ ಕೃಷ್ಣಮೂರ್ತಿ, ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಡಿ.ಟಿ.ಪ್ರಸನ್ನ ಯೋಜನಾ ನಿರ್ದೇಶಕ ಚಂದ್ರಮೌಳಿ, ಸಕಲೇಶಪುರದ ಉಪ ವಿಭಾಗಾಧಿಕಾರಿ ಶೃತಿ, ಹಾಗೂ ಜಿಲ್ಲೆಯ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.