ಕೂಡ್ಲಿಗಿ: ಅಕ್ಷರ ಕ್ರಾಂತಿಯಿಂದ ಮಾತ್ರ ಅಸ್ಪಶ್ಯತೆ ನಿವಾರಣೆ ಸಾಧ್ಯ ಎಂದು ಸಮಾಜ ಕಲ್ಯಾಣ ಇಲಾಖೆ ಕಚೇರಿ ಅಧೀಕ್ಷಕ ಎಸ್.ಫಕ್ಕೀರಪ್ಪ ಹೇಳಿದರು.
ತಾಲೂಕಿನ ಬಣವಿಕಲ್ಲು ಗ್ರಾಮದಲ್ಲಿ ತಾಲೂಕು ಆಡಳಿತ, ಸಮಾಜ ಕಲ್ಯಾಣ ಇಲಾಖೆ, ಪೊಲೀಸ್ ಇಲಾಖೆ ಸಹಯೋಗದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅಸ್ಪಶ್ಯತೆ ನಿವಾರಣಾ ಸಪ್ತಾಹದ ಅಂಗವಾಗಿ ಅರಿವು ಮೂಡಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.
ಅಸ್ಪಶ್ಯತೆ ಹೋಗಲಾಡಿಸುವುದು ಪ್ರತಿಯೊಬ್ಬರ ಕರ್ತವ್ಯ. ಸಾಮಾಜಿಕ ಬದಲಾವಣೆಯಿಂದ ಇದನ್ನು ಸರಿಪಡಿಸಬೇಕಿದೆ. ಸಮಾಜದ ಎಲ್ಲಾ ವರ್ಗದವರು ಶಿಕ್ಷಣವಂತರಾದರೆ ಸಮಾನತೆಯ ಸಮಾಜ ಸ್ಥಾಪಿಸುವುದರ ಜತೆ ಅಸ್ಪಶ್ಯತೆ ನಿವಾರಿಸಬಹುದು.
ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಶೋಷಿತ ಸಮಾಜದ ಧ್ವನಿಯಾಗಿದ್ದರು. 12ನೇ ಶತಮಾನದಲ್ಲಿ ಬಸವಣ್ಣ ಅವರು ಮಹಿಳಾ ಸಮಾನತೆ ಹಾಗೂ ಜಾತಿ ಪದ್ಧತಿ ವಿರುದ್ಧ ಹೋರಾಡಿದರು. ಸಾಮಾಜಿಕ ಅಸಮತೋಲನ ಹೋಗಲಾಡಿಸುವ ಕುರಿತು ಜನರಲ್ಲಿ ಜಾಗೃತಿ ಮೂಡಿಸಬೇಕಿದೆ ಎಂದು ಹೇಳಿದರು.
ದಲಿತ ಮುಖಂಡ ಬಿ.ರಾಘವೇಂದ್ರ, ಉಪ ತಹಸೀಲ್ದಾರ್ ಚಂದ್ರಮೋಹನ್, ಶಿಕ್ಷಕಿ ಗೀತಾ ಭಾಪ್ರಿ ಇತರರಿದ್ದರು.