ಜಿಲ್ಲೆ

ಜ್ಞಾನವನ್ನು ನೀಡುವುದೇ ಸಮಾನತೆ

ಹಾಸನ: ವೀರಶೈವ ಲಿಂಗಾಯತ ಸಮಾಜದ ಸಂಘಟನೆಯ ಅಗತ್ಯ ಇದೆ. ಬಸವ ತತ್ವ ಪಾಲಿಸಿಕೊಂಡು ನಮ್ಮ ಜೀವನ ನಡೆಸುವುದು ಸೂಕ್ತವಾಗಿದೆ ಎಂದು ಬಾಲ್ಕಿ ಹೀರೆಮಠ ಸಂಸ್ಥಾನ ಮಠದ ಮಠಾಧೀಶರಾದ ನಾಡೋಜ ಶ್ರೀ ಡಾ.ಬಸವಲಿಂಗ ಪಟ್ಟದೇವರು ಸ್ವಾಮೀಜಿ ಹೇಳಿದರು.

ಭಾನುವಾರ ರಾತ್ರಿ ಹಾಸನ ನಗರದ ಕಲಾಭವನದಲ್ಲಿ ನಡೆದ ವಿಶ್ವ ಗುರು ಜಗಜ್ಯೋತಿ ಸಾಂಸ್ಕೃತಿಕ ಅಭಿಯಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಜನರಲ್ಲಿನ ಅಜ್ಞಾನವನ್ನು ತೊಡೆದು ಹಾಕಿ ಜ್ಞಾನವನ್ನು ನೀಡುವುದು ಸಮಾನತೆ, ಅಂಧಕಾರವನ್ನು ತೊಡೆಯುವುದು ಬಸವೇಶ್ವರ ಮೂಲ ಉದ್ದೇಶವಾಗಿತ್ತು. ಶ್ರೀ ಬಸವೇಶ್ವರರನ್ನು ಸಾಂಸ್ಕೃತಿಕ ನಾಯಕ ಎಂದು ರಾಜ್ಯ ಸರ್ಕಾರ ಘೋಷಣೆ ಮಾಡಿ ಒಂದು ವರ್ಷವಾಯಿತು. ಆ ಹಿನ್ನೆಲೆಯಲ್ಲಿ ಬಸವಣ್ಣನವರ ರಥದೊಂದಿಗೆ ಇಡೀ ರಾಜ್ಯಾದ್ಯಂತ ಪ್ರವಾಸ ಮಾಡಿ ಬಸವ ತತ್ವ ಪ್ರಚಾರ ಮಾಡಲಾಗುತ್ತಿದೆ ಎಂದರು. ಅ.5ರಂದು ಬೆಂಗಳೂರು ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ನಡೆಯುವ ದೊಡ್ಡ ಸಮಾವೇಶದಲ್ಲಿ ಎಲ್ಲರೂ ಪಾಲ್ಗೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ತರಳಬಾಳು ಜಗದ್ಗುರು ಸಾಣೇಹಳ್ಳಿ ಶಾಖಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ, ತೊಂಟಾದಾರ್ಯ ಸಂಸ್ಥಾನ ಮಠದ ಡಾ.ತೊಂಟದ ಸಿದ್ದರಾಮ ಮಹಾಸ್ವಾಮೀಜಿ , ಶ್ರೀಕಂಠ ಸ್ವಾಮೀಜಿ, ಗುರುಬಸವ ಸ್ವಾಮೀಜಿ, ಡಾ. ಶಿವಾನಂದ ಸ್ವಾಮೀಜಿ, ಜ್ಞಾನ ಪ್ರಭುಸಿದ್ಧರಾಮ ದೇಶಿಕೇಂದ್ರ ಸ್ವಾಮೀಜಿ, ಶ್ರೀ ರುದ್ರಮುನಿ ಸ್ವಾಮೀಜಿ, ಶ್ರೀ ಮಲ್ಲಿಕಾರ್ಜುನ ಸ್ವಾಮೀಜಿ, ಪುಷ್ಪಗಿರಿ ಮಠದ ಸೋಮಶೇಖರ್ ಸ್ವಾಮೀಜಿ , ತಣ್ಣೀರು ಹಳ್ಳ ಮಠದ ಶ್ರೀ ವಿಜಯಕುಮಾರ್ ಸ್ವಾಮೀಜಿ, ಜವನಹಳ್ಳಿ ಮಠದ ಶ್ರೀ ಸಂಗಮೇಶ್ವರ ಸ್ವಾಮೀಜಿ, ಡಾ.ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಶ್ರೀ ಜಯದೇವ ಸ್ವಾಮೀಜಿ, ಶ್ರೀ ಬಸವ ರಾಜೇಂದ್ರ ಸ್ವಾಮೀಜಿ, ಡಾ.ಮಹಾಂತ ಬಸವಲಿಂಗ ಸ್ವಾಮೀಜಿ, ಶ್ರೀ ಜಯಬಸವನಂದ ಸ್ವಾಮೀಜಿ ಸೇರಿದಂತೆ ಸುಮಾರು 35 ಮಠಾಧೀಶರು ವೇದಿಕೆಯಲ್ಲಿದ್ದರು.

ಮುಖಂಡರಿಂದ ಅಪಸ್ವರ: ಕಾರ್ಯಕ್ರಮದಲ್ಲಿ ಕೆಲಕಾಲ ಗೊಂದಲದ ವಾತಾವರಣ ಸೃಷ್ಟಿಯಾಯಿತು. ಆಶೀರ್ವಚನದ ನೀಡುತ್ತಿದ್ದ ಸಾಣೇಹಳ್ಳಿಯ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ರಾಜ್ಯ ಸರ್ಕಾರ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಆರಂಭಿಸಿದೆ. ಧರ್ಮದ ಕಾಲಂನಲ್ಲಿ ಲಿಂಗಾಯತ ಎಂದು ನಮೂದಿಸಬೇಕು ಎಂದರು.

ಇದನ್ನು ಕೇಳಿ ಲಿಂಗಾಯತ ಸಮುದಾಯದ ಕೆಲವು ಮುಖಂಡರು ವೇದಿಕೆಯಲ್ಲೇ ಅಪಸ್ವರ ಎತ್ತಿದರು. ಇದರಿಂದ ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣ ಆಗಿತ್ತು. ಇದರಿಂದ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅರ್ಧಕ್ಕೆ ಆಶೀರ್ವಚನ ಮೊಟಕುಗೊಳಿಸಿದರು. ಈ ವೇಳೆ ಮಧ್ಯ ಪ್ರವೇಶಿಸಿದ ಹಳೇಬೀಡು ಪುಷ್ಪಗಿರಿ ಮಠದ ಶ್ರೀ ಸೋಮಶೇಖರ ಶಿವಾಚಾರ್ಯ ಸ್ವಾಮೀಜಿ ಎಲ್ಲರನ್ನು ಸಮಾಧಾನಪಡಿಸಿದರು.