ಚಿಕ್ಕಮಗಳೂರು: ಸ್ವಸಹಾಯ ಸಂಘ, ಸೇವಾ ಪ್ರತಿನಿಧಿಗಳು, ಸರ್ಕಾರಿ ಕಚೇರಿಗಳು, ಔದ್ಯೋಗಿಕ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಮಹಿಳೆಯರ ಪ್ರಾಬಲ್ಯವೆ ಹೆಚ್ಚಿದೆ ಎಂದು ಧರ್ಮಸ್ಥಳ ಮಹಿಳಾ ಜ್ಞಾನ ವಿಕಾಸ ಕೇಂದ್ರ ಹಾಗೂ ಮಾನವ ಸಂಪನ್ಮೂಲ ವಿಭಾಗದ ನಿರ್ದೇಶಕಿ ಮಮತಾರಾವ್ ಹೇಳಿದರು.
ಹಿರೇಮಗಳೂರಿನಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮಂಗಳವಾರ ಹಮ್ಮಿಕೊಂಡಿದ್ದ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಸಾಧನೆ ಮೆಲುಕು ಹಾಕಲು ಆಚರಣೆ:
ವಿಶ್ವ ಮಹಿಳಾ ದಿನಾಚರಣೆ ಆಚರಿಸುವುದು ಹಕ್ಕನ್ನು ಕೇಳುವುದಕ್ಕಾಗಿ ಮಾತ್ರವಲ್ಲ, ನಮ್ಮ ಶ್ರಮ, ಸಾಧನೆ ಮೆಲುಕು ಹಾಕಿ ಸಂಭ್ರಮಿಸುತ್ತಾ ದೂರದೃಷ್ಟಿಯ ಬಗ್ಗೆ ವಿವೇಚನೆಯುಕ್ತ ಆಲೋಚನೆ ಮಾಡಲು ಸಿಕ್ಕಿರುವ ಅವಕಾಶ. ಕುಟುಂಬಗಳಲ್ಲಿ ಬುದ್ಧಿ ಹೇಳುವ ವಿಚಾರದಲ್ಲಿ ಗಂಡು ಮಕ್ಕಳಿಗಿಂತ ಹೆಣ್ಣಿಗೆ ಬಂಧನ ಹೆಚ್ಚಿರುವುದು ಸಹಜ. ಜೀವನದಲ್ಲಿ ಸುಸಂಸ್ಕøತರಾಗಿ ಬೆಳೆಯಲು ಈ ಕ್ರಮವನ್ನು ತಾಯಂದಿರು ರೂಢಿಸಿಕೊಂಡಿರುವಂಥದ್ದು. ತಂದೆ-ತಾಯಂದಿರ ದಿನ, ಹೆಣ್ಣುಮಕ್ಕಳ ದಿನ ಹೀಗೆ ಸಾಮಾಜಿಕವಾಗಿ ಜಾಗೃತಿ ಮೂಡಿಸಲು ಹಲವಾರು ದಿನ ಆಚರಿಸುತ್ತೇವೆ ಎಂದರು.
ಪುರುಷರಷ್ಟೆ ಸಮಾನ ಕೆಲಸ:
ಭಾರತದಲ್ಲಿರುವ ಎಲ್ಲ ಕ್ಷೇತ್ರಗಳಲ್ಲೂ ಹೆಣ್ಣು ಪುರುಷರಷ್ಟೆ ಸಮಾನವಾಗಿ ಕೆಲಸ ಮಾಡುತ್ತಿದ್ದಾಳೆ ಎಂಬುದಕ್ಕೆ ವಿದೇಶಾಂಗ ಸಚಿವೆಯಾಗಿದ್ದ ಸುಷ್ಮಾ ಸ್ವರಾಜ್ ಮಾಡಿದ ಕೆಲಸಗಳು ಹಾಗೂ ರಕ್ಷಣಾ, ಆರ್ಥಿಕ ಸಚಿವೆಯಾಗಿ ನಿರ್ಮಲಾ ಸೀತಾರಾಮನ್ ಮಾಡುತ್ತಿರುವ ಉತ್ತಮ ಕಾರ್ಯ ಸಾಕ್ಷಿ. ಈ ಸಾಮಥ್ರ್ಯ ಎಲ್ಲ ಮಹಿಳೆಯರಲ್ಲೂ ಅಡಗಿದೆ. ಧೈರ್ಯವಾಗಿ ಅದನ್ನು ಜಗತ್ತಿಗೆ ತೋರಿಸಬೇಕು. ಯಾವುದೇ ರಾಷ್ಟ್ರ ಅಭಿವೃದ್ಧಿ ಹೊಂದಲು ದೇಶದಲ್ಲಿರುವ ಪುರುಷ, ಮಹಿಳೆ, ಮಂಗಳಮುಖಿ ಆದಿಯಾಗಿ ಎಲ್ಲರಿಗೂ ಸಮಾನ ಅವಕಾಶ ಸಿಕ್ಕಿ ಸಮಾಜಕ್ಕೆ ಕೊಡುಗೆ ನೀಡಿದರೆ ದೇಶ ತನ್ನಷ್ಟಕ್ಕೆ ಅಭಿವೃದ್ಧಿ ಹೊಂದಲು ಸಾಧ್ಯ. ಮಹಿಳೆಯರು ಮೀಸಲಾತಿಗಾಗಿ ಮುಗಿ ಬೀಳಬಾರದು. ತಮ್ಮ ಬುದ್ಧಿಶಕ್ತಿ, ಶ್ರಮ, ಕೌಶಲ್ಯ ಪ್ರದರ್ಶಿಸಿ ಅದನ್ನು ಸದ್ಬಳಕೆ ಮಾಡಿಕೊಂಡು ಧನಾತ್ಮಕ ಚಿಂತನೆ ನಡೆಸೋಣ ಎಂದರು.
ಮಹಿಳೆಗೆ ಸಮಾನತೆ ಬೇಕು:
ಉಪ ವಿಭಾಗಾಧಿಕಾರಿ ಡಾ.ಎಚ್.ಎಂ.ನಾಗರಾಜ್ ಮಾತನಾಡಿ, ಯಾವುದೇ ಪುರುಷ ಮಹಿಳೆಯನ್ನು ಸಮಾನತೆಯಿಂದ ಕಾಣಬೇಕು. ಗಂಡ ಹೆಂಡತಿ ನಡುವೆ ಹೊಂದಾಣಿಕೆಯ ಮನೋಭಾವ, ಪ್ರೀತಿ, ವಿಶ್ವಾಸ, ಸಮನ್ವಯತೆ ಹೇಗಿರುತ್ತದೆಯೊ ಅದಕ್ಕೆ ತಕ್ಕಂತೆ ಕುಟುಂಬ ಸಂತೋಷದಿಂದ ಇರುತ್ತದೆ. ಹೆಣ್ಣು ಸಮಾಜದಲ್ಲಿ ಗೌರವಯುತವಾಗಿ ನಡೆದುಕೊಂಡರೆ ಮಾತ್ರ ನಮ್ಮ ಸಮಾಜಕ್ಕೆ ಗೌರವವಿರುತ್ತದೆ. ಹೆಣ್ಣು ಮನಸ್ಸು ಮಾಡಿದರೆ ಮಾತ್ರ ಸಮಾಜ ಶಾಂತಿ ನೆಮ್ಮದಿಯಿಂದಿರುತ್ತದೆ ಎಂದರು.
ಸೌಟು ಹಿಡಿವ ಕೈನಿಂದ ಪೈಲೆಟ್ ತನಕ:
ಗ್ರಾಮಾಭಿವೃದ್ಧಿ ಯೋಜನೆಯ ಯೋಜನಾಧಿಕಾರಿ ಸುನೀತಾ ಪ್ರಭು ಮಾತನಾಡಿ, 1948 ರಲ್ಲಿ ಸಾವಿತ್ರಿಬಾಯಿ ಎನ್ನುವವರು ಹೆಣ್ಣು ಮಕ್ಕಳಿಗೆ ಕಡ್ಡಾಯ ಶಿಕ್ಷಣ ನೀಡಬೇಕೆಂದು ಹೋರಾಟ ಮಾಡಿದ ನಿಟ್ಟಿನಲ್ಲಿ ಇಂದು ಮನೆಯಲ್ಲಿ ಸೌಟು ಹಿಡಿಯುವ ಕೈನಿಂದ ಪೈಲೆಟ್ ತನಕ ಮುಂದುವರಿದಿದ್ದಾರೆ. ಮಹಿಳೆಯರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕವಾಗಿ ಮುಂದೆ ಬಂದು ತನ್ನಲ್ಲಿ ಅಡಗಿರುವ ಪ್ರತಿಭೆ ಗುರುತಿಸಲು ಜ್ಞಾನವಿಕಾಸ ವೇದಿಕೆ ಸೃಷ್ಟಿಯಾಗಿದೆ ಎಂದರು. ಕನ್ನಡ ಪೂಜಾರಿ ಹಿರೇಮಗಳೂರು ಕಣ್ಣನ್, ವಕೀಲೆ ಡಿ.ಎಸ್.ಮಮತಾ, ಸಂಸ್ಕøತಿ ಚಿಂತಕಿ ನಾಗಶ್ರೀ ತ್ಯಾಗರಾಜ್, ನಿರ್ದೇಶಕ ಪ್ರಕಾಶ್‍ರಾವ್, ರಾಧಿಕಾ, ಪ್ರಕಾಶ್, ಸವಿತಾ ಇದ್ದರು.