ರಾಯಚೂರು: ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಗರದಲ್ಲಿ ಸಿಐಟಿಯು ನೇತೃತ್ವದಲ್ಲಿ ನಡೆಯುತ್ತಿದ್ದ ಪ್ರತಿಭಟನಾ ನಿರತ ಮಹಿಳೆಯರನ್ನು ಪೊಲೀಸರು ಶುಕ್ರವಾರ ಬಂಧಿಸಿ, ಬಿಡುಗಡೆ ಮಾಡಿದರು. ಅಂಬೇಡ್ಕರ್ ವೃತ್ತದಲ್ಲಿ ಶುಕ್ರವಾರ ಬೆಳಗ್ಗೆ ಸಂಘದ ನೇತೃತ್ವದಲ್ಲಿ ಜಮಾಯಿಸಿದ ವಿವಿಧ ಕ್ಷೇತ್ರದಲ್ಲಿನ ಸೇವಾನಿರತ ಮಹಿಳೆಯರು ಡಿಸಿ ಕಚೇರಿಯವರೆಗೆ ರ‌್ಯಾಲಿ ನಡೆಸಿ ಜೈಲ್ ಭರೋ ಚಳವಳಿ ನಡೆಸಿದರು. ಡಿಸಿ ಕಚೇರಿ ಮುಖ್ಯದ್ವಾರದಲ್ಲಿ ತಳ್ಳಾಡಿದ ಮಹಿಳೆಯರನ್ನು ಪೊಲೀಸರು ಬಂಧಿಸಿ ಕರೆದೊಯ್ದರು. ಸರ್ಕಾರಗಳು ಮಹಿಳೆಯರ ದಿನಾಚರಣೆ ನೆಪದಲ್ಲಿ ಅವರ ಹಕ್ಕುಗಳನ್ನು ಕಡೆಗಣಿಸುತ್ತಿವೆ. ಬಿಸಿಯೂಟ, ಅಂಗನವಾಡಿ ಮತ್ತಿತರ ಕ್ಷೇತ್ರದಲ್ಲಿ ದುಡಿಯುವವರಿಗೆ ಸಮಾನ ವೇತನವಿಲ್ಲ, ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರಗಳಿಗೆ ಕಡಿವಾಣ ಹಾಕಿಲ್ಲ. ಕೂಡಲೆ ವಿವಿಧ ಸ್ಕೀಮ್‌ಗಳಲ್ಲಿ ದುಡಿವ ಮಹಿಳೆಯರನ್ನು ನೌಕರರೆಂದು ಪರಿಗಣಿಸಬೇಕು. ಎಲ್ಲ ಚುನಾಯಿತ ಸಮಿತಿಗಳಲ್ಲಿ ಶೇ.33 ಮೀಸಲು ನೀಡಬೇಕು. ಕೇಂದ್ರದ ಸಿಎಎ, ಎನ್‌ಆರ್‌ಸಿ ಮತ್ತು ಎನ್‌ಪಿಆರ್ ಕಾಯ್ದೆ ವಾಪಸ್ ಪಡೆಯಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಸಿಐಟಿಯು ಜಿಲ್ಲಾ ಪ್ರ.ಕಾರ್ಯದರ್ಶಿ ಡಿ.ಎಸ್.ಶರಣಬಸವ, ಸದಸ್ಯ ಕೆ.ಜಿ. ವೀರೇಶ, ಅಂಗನವಾಡಿ ನೌಕರರ ಸಂಘದ ಜಿಲ್ಲಾಧ್ಯಕ್ಷೆ ಎಚ್.ಪದ್ಮಾ, ಪ್ರ.ಕಾ. ರಂಗಮ್ಮ ಅನ್ವರ, ಖಜಾಂಚಿ ವರಲಕ್ಷ್ಮೀ, ಬಿಸಿಯೂಟ ನೌಕರರ ಸಂಘದ ಜಿಲ್ಲಾಧ್ಯಕ್ಷೆ ರೇಣುಕಮ್ಮ, ಕಾರ್ಯದರ್ಶಿ ಮರಿಯಮ್ಮ, ಖಜಾಂಚಿ ಮಹ್ಮದ್ ಹನೀಫ್, ಮಹಾಂತಮ್ಮ, ಶರಣಮ್ಮ ಸೇರಿದಂತೆ ಹಲವರು ಪಾಲ್ಗೊಂಡಿದ್ದರು.