ಚಿಕ್ಕಬಳ್ಳಾಪುರ: ಹೆಣ್ಣು ಮಕ್ಕಳಿಗೆ ಪುರುಷರಿಗೆ ಸರಿ ಸಮಾನ ಅವಕಾಶವನ್ನು ನೀಡುವ ದೇಶಗಳು ಅಸ್ಥಿತ್ವವನ್ನು ಉಳಿಸಿಕೊಂಡು ಹೋಗುವ ಜೊತೆಗೆ ಸರ್ವತೋಮುಖ ಅಭಿವೃದ್ಧಿ ಕಾಣಲಿವೆ ಎಂದು ಶಾಸಕ ಕೆ.ಎಚ್.ಪುಟ್ಟಸ್ವಾಮಿಗೌಡ ಹೇಳಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ವತಿಯಿಂದ ಜ್ಞಾನ ವಿಕಾಸ ಕಾರ್ಯಕ್ರಮದಡಿ ಗೌರಿಬಿದನೂರು ನಗರದಲ್ಲಿ ಆಯೋಜಿಸಿದ್ದ ಮಹಿಳಾ ವಿಚಾರ ಗೋಷ್ಠಿ ಮತ್ತು ಸ್ವ-ಉದ್ಯೋಗ ಮೇಳ 2024 ಉದ್ಘಾಟಿಸಿ ಮಾತನಾಡಿದರು.
ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರ ಮಾರ್ಗದರ್ಶನದಲ್ಲಿ ಧರ್ಮಸ್ಥಳದ ಗ್ರಾಮಾಭಿವೃದ್ಧಿ ಯೋಜನೆ ಇಡೀ ರಾಜ್ಯಾದ್ಯಂತ
ಕುಡಿತದ ಚಟ ಬಿಡಿಸುವುದು, ಸ್ವಸಹಾಯ ಸಂಘಗಳನ್ನು ಸ್ಥಾಪಿಸಿ ಮಹಿಳೆಯರಿಗೆ ಸಾಲ ಸೌಲಭ್ಯ ಒದಗಿಸುವುದು, ಅಡಿಗೆ ಮನೆಗೆ ಸೀಮಿತವಾಗಿದ್ದ ಹೆಣ್ಣು ಮಕ್ಕಳನ್ನು ಜ್ಞಾನ ವಿಕಾಸಗೊಳಿಸುವುದು, ಉದ್ಯೋಗಾವಕಾಶಗಳನ್ನು ಕಲ್ಪಿಸಿಕೊಡುವುದು ಸೇರಿದಂತೆ ಅನೇಕ ಸಮಾಜ ಮುಖಿ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರುತ್ತಿದೆ. ಸ್ತ್ರೀ ಸಮಾಜದ ಮುಖ್ಯವಾಹಿಗೆ ಬರಲು, ಸಬಲೀಕರಣ ಹೊಂದಲು ಇಂತಹ ಕಾರ್ಯಕ್ರಮಗಳು ಸಹಕಾರಿಯಾಗಲಿವೆ. ಸಂಸ್ಥೆಯ ಇಂತಹ ಕಾರ್ಯಕ್ರಮಗಳನ್ನು ಎಲ್ಲರೂ ಸದ್ಭಳಕೆ ಮಾಡಿಕೊಳ್ಳಬೇಕು ಎಂದರು.
ಬೆಂಗಳೂರಿನ ಕ್ಷೇಮವನ ಚಿಕಿತ್ಸಾ ಕೇಂದ್ರದ ಕಾರ್ಯನಿರ್ವಾಹಕ ನಿರ್ದೇಶಕಿ ಶ್ರದ್ಧಾ ಅಮಿತ್ ಮಾತನಾಡಿ, ನಾಲ್ಕು ಗೋಡೆಗಳ ಮಧ್ಯ ಉಳಿದಾಗ ವ್ಯಕ್ತಿತ್ವದ ಅರಿವು ಆಗವುದಿಲ್ಲ. ಸಮಾಜದ ಮುಖ್ಯ ವಾಹಿನಿಗೆ ಬಂದಾಗ ಮಾತ್ರ ನಿಜವಾದ ವ್ಯಕ್ತಿತ್ವದ ಬೆಲೆ ಗೊತ್ತಾಗುತ್ತದೆ ಎಂದರು. ಸ್ತ್ರೀ ರೋಗ ತಜ್ಞೆ ಡಾ.ಎ.ಬಿ.ಗೀತಾ ಗರ್ಭಕೋಶ ಕ್ಯಾನ್ಸರ್ ಬಗ್ಗೆ ತಗೆದುಕೊಳ್ಳಬೇಕಾದ ಮುನ್ನೆಚ್ಚರಿಕೆ ಕ್ರಮಗಳ ಬಗ್ಗೆ ತಿಳಿಸಿಕೊಟ್ಟರು.
ತಹಸೀಲ್ದಾರ್ ಮಹೇಶ್ ಎಸ್ ಪತ್ರಿ, ಧರ್ಮಸ್ಥಳ ಸಂಘದ ಪ್ರಾದೇಶಿಕ ನಿರ್ದೇಶಕ ಎಂ.ಶಿವಪ್ಪ, ಜಿಲ್ಲಾ ಜನ ಜಾಗೃತಿ ವೇದಿಕೆ ಪ್ರಭಾನಾರಾಯಣ ಗೌಡ, ಲಕ್ಷ್ಮೀ, ಜ್ಞಾನ ಮಂದಿರ ಶಿಕ್ಷಣ ಸಂಸ್ಥೆ ಅಧ್ಯಕ್ಷ ಆವಲಪ್ಪ ಉಪಸ್ಥಿತರಿದ್ದರು.