ಕಡೂರು: ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಮಧ್ಯಸ್ಥಿಕೆ ಅಭಿಯಾನ ಆಯೋಜಿಸಿದ್ದು ಮಧ್ಯಸ್ಥಿಕೆ ರಾಜಿ ಸಂಧಾನದ ಮೂಲಕ ತಮ್ಮ ದಾವೆಗಳನ್ನು ಬಗೆಹರಿಸಿಕೊಳ್ಳಲು ಒಂದು ಉತ್ತಮ ಪ್ರಯತ್ನ ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಇರ್ಫಾನ್ ತಿಳಿಸಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ಕಕ್ಷಿದಾರರನ್ನು ಉದ್ದೇಶಿಸಿ ಮಾತನಾಡಿ, ಪರಸ್ಪರ ಒಪ್ಪಿಗೆ ಮತ್ತು ಮಧ್ಯಸ್ಥಿಕೆ ಮೂಲಕ ವ್ಯಾಜ್ಯಗಳನ್ನು ಇಲ್ಲಿ ಇತ್ಯರ್ಥ ಮಾಡಿಕೊಳ್ಳುವ ಅವಕಾಶವನ್ನು ಕಕ್ಷಿದಾರರಿಗೆ ನೀಡಲಾಗಿದೆ. ಮಧ್ಯಸ್ಥಿಕೆ ವ್ಯವಸ್ಥೆಯಿಂದ ಸಾರ್ವಜನಿಕರಿಗೆ ಸಮಯ, ಹಣ ಮತ್ತು ಸಂಬಂಧಗಳು ಉಳಿಸುತ್ತದೆ. ನ್ಯಾಯಾಲಯಗಳಲ್ಲಿ ಬರುವ ತೀರ್ಪಿನಿಂದ ಒಂದು ಬದಿಯವರಿಗೆ ಮಾತ್ರ ನ್ಯಾಯಾ ದೊರಕುತ್ತದೆ ಆದರೆ ಮಧ್ಯಸ್ಥಿಕೆಯಲ್ಲಿ ಇಬ್ಬರಿಗೂ ನ್ಯಾಯ ದೊರಕುತ್ತದೆ ಎಂಬ ಆಂಶವನ್ನು ಪ್ರಸ್ತಾಪಿಸಿದರು.
ಕಡೂರು ನ್ಯಾಯಾಲಯದಲ್ಲಿ 5 ಜನ ನ್ಯಾಯಧೀಶರು ಇದ್ದು ಒಬ್ಬಬ್ಬರಿಗೆ ಕನಿಷ್ಠ 3 ಸಾವಿರ ಕೇಸ್‌ಗಳನ್ನು ನೋಡಬೇಕಾಗಿದೆ ಇಂತಹ ಸಮಯದಲ್ಲಿ ಮಧ್ಯಸ್ಥಿಕೆ ಮೂಲಕ ರಾಜಿ ಮಾಡಿಸಲು ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಕಾನೂನು ಸೇವಾ ಪ್ರಧಿಕಾರ, ವಕೀಲರ ಸಂಘಗಳು ಸಹಕಾರ ನೀಡಿದ್ದು ಕಡೂರು ನ್ಯಾಯಾಲಯದ 10 ಜನ ಮಧ್ಯಸ್ಥಿಕೆಗೆ ವಕೀಲರಿಗೆ ತರಬೇತಿ ನೀಡಲಾಗಿದೆ. ಈಗಾಗಲೇ 700 ಪ್ರಕರಣಗಳನ್ನು ಗುರುತಿಸಿದ್ದು, ಅವರಿಗೆ ಮಧ್ಯಸ್ಥಿಕೆಯ ಮೂಲಕ ರಾಜಿಗೆ ಸೂಚನೆ ನೀಡಲಾಗಿದೆ. 37 ಜನ ಮಾತ್ರ ಅರ್ಜಿ ಸಲ್ಲಿಸಿದ್ದು 10 ಪ್ರಕರಣಗಳು ಮುಕ್ತಾಯವಾಗಿದೆ ಎಂದರು.
1ನೇ ಹೆಚ್ಚುವರಿ ಸಿವಿಲ್ ನ್ಯಾಯಾಧೀಶೆ ಸವಿತಾರಾಣಿ, 2ನೇ ಹೆಚ್ಚುವರಿ ನ್ಯಾಯಾಧೀಶ ತಹ ಖಲೀಲ್, ಸದಸ್ಯ ಕಾರ್ಯದರ್ಶಿ ಅಂಭ್ರಿಲ್ ಸುಲ್ತಾನ್ ,ವಕೀಲ ಪ್ರಕಾಶ್ ಹಾಗೂ ಹಿರಿಯ ವಕೀಲರು ಮತ್ತು ಕಕ್ಷಿದಾರರು ಇದ್ದರು.