ಹುಬ್ಬಳ್ಳಿ: ನಿವೃತ್ತರಿಗೆ ಕನಿಷ್ಠ 7500 ರೂ. ಪಿಂಚಣಿ ಹಾಗೂ ಇತರ ಸೌಲಭ್ಯಗಳನ್ನು ನೀಡಬೇಕೆಂದು ಹಲವು ವರ್ಷಗಳಿಂದ ಹೋರಾಟ ನಡೆದಿದ್ದು, ಈ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುವ ಸಲುವಾಗಿ ಜುಲೈ 26ರಂದು ಬೆಳಗ್ಗೆ 11ಕ್ಕೆ ಲಿಂಗರಾಜನಗರ ಸಮುದಾಯ ಭವನದಲ್ಲಿ ಇಪಿಎಸ್95 ನ್ಯಾಷನಲ್ ಎಜಿಟೇಶನ್ ಕಮಿಟಿ (ಎನ್ಎಸಿ) ವತಿಯಿಂದ ಸಭೆ ಆಯೋಜಿಸಲಾಗಿದೆ ಎಂದು ಕಮಿಟಿ ಮುಖ್ಯ ಸಂಯೋಜಕ ರಮಾಕಾಂತ ನರಗುಂದ ತಿಳಿಸಿದರು.
ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಮಿಟಿಯ ರಾಷ್ಟ್ರೀಯ ಅಧ್ಯಕ್ಷ ಅಶೋಕ ರಾವುತ್, ವೀರೇಂದ್ರ ಸಿಂಗ್ ಸೇರಿ ಅನೇಕ ಮುಖಂಡರು ಸಭೆಯಲ್ಲಿ ಪಾಲ್ಗೊಂಡು ಪಿಂಚಣಿದಾರರ ಹಕ್ಕುಗಳ ಬಗ್ಗೆ ಮಾಹಿತಿ ನೀಡುವರು. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಪಿಂಚಣಿ ನೀಡಬೇಕೆಂದು ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ದಿಸೆಯಲ್ಲಿ ಚರ್ಚೆ ನಡೆಯಲಿವೆ ಎಂದರು.
ಅನೇಕ ಜನರಿಗೆ ಪಿಂಚಣಿ ಯೋಜನೆ ಮತ್ತು ಅದರ ಪ್ರಯೋಜನಗಳನ್ನು ಹೇಗೆ ಪಡೆಯಬೇಕೆಂಬ ಮಾಹಿತಿ ಇಲ್ಲ. ಹಾಗಾಗಿ ಸದಸ್ಯರಿಗೆ ಈ ವಿಷಯ ಅರ್ಥ ಮಾಡಿಸಲು ಸಹಾಯ ಸಭೆ ಮಾಡುತ್ತಿದ್ದೇವೆ ಎಂದರು.
30- 35 ವರ್ಷ ಸೇವೆ ಸಲ್ಲಿಸಿದ ನಂತರ ನಿವೃತ್ತರಾದ ನೌಕರರು ಕೇವಲ ಸಾವಿರದಿಂದ ಎರಡು ಸಾವಿರ ರೂ. ತಿಂಗಳಿಗೆ ಪಿಂಚಣಿ ಪಡೆಯುತ್ತಿದ್ದಾರೆ. ವಯೋವೃದ್ಧ ದಂಪತಿಗೆ ಎರಡು ಹೊತ್ತಿನ ಊಟಕ್ಕೂ ಆ ಹಣ ಸಾಲುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪಿಂಚಣಿ ಹೆಚ್ಚಿಸಬೇಕೆಂದು ಕೇಂದ್ರ ಸರ್ಕಾರಕ್ಕೆ ಆಗ್ರಹಿಸಿದರು.
ಕಮಿಟಿ ರಾಜ್ಯ ಸಂಯೋಜಕ ಆರ್. ಸುಬ್ಬಣ್ಣ ಮಾತನಾಡಿ, ನಿವೃತ್ತ ನೌಕರರಿಗೆ ಹೆಚ್ಚುವರಿ ಪಿಂಚಣಿ ನೀಡುವಂತೆ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಇಷ್ಟಾದರೂ ಕೇಂದ್ರ ಸರ್ಕಾರ ಗಮನ ಹರಿಸುತ್ತಿಲ್ಲ. ನಿವೃತ್ತರಿಗೂ ಗೌರವದ ಬದುಕು ಕೊಡಿ ಎಂದು ಆಗ್ರಹಿಸಿ ಹೋರಾಟ ನಡೆಸಿದ್ದೇವೆ. ಜುಲೈ 31ರೊಳಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದರೆ ದೆಹಲಿಯಲ್ಲಿ ಆಗಸ್ಟ್ ಮೊದಲ ವಾರದಲ್ಲಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಕ್ಲಸ್ಟರ್ ಉಪಾಧ್ಯಕ್ಷ ಸಿ.ಕೆ. ಕೆರೂರ, ಪ್ರಧಾನ ಕಾರ್ಯದರ್ಶಿ ಸಿ.ಎಸ್. ಮಂಜುನಾಥ, ಇತರರು ಇದ್ದರು.