ಹುಬ್ಬಳ್ಳಿ: ಎಂಪ್ಲಾಯಿಸ್ ಪೆನ್ಶನ್ ಸ್ಕೀಮ್ 95 (ಇಪಿಎಸ್) ಅಡಿ ಬರುವ ಎಲ್ಲ ಪಿಂಚಣಿದಾರರಿಗೆ ಪ್ರತಿ ತಿಂಗಳು 7500 ರೂ. ಹಾಗೂ ಡಿಎ, ಆರೋಗ್ಯ ಪ್ರಯೋಜನಗಳನ್ನು ನೀಡಬೇಕು ಎಂದು ಆಗ್ರಹಿಸಿ ಕೈಗೊಂಡಿರುವ ಹೋರಾಟ ಇದೀಗ ತೀವ್ರ ಸ್ವರೂಪ ಪಡೆದುಕೊಂಡಿದೆ ಎಂದು ಇಪಿಎಸ್ 95 ರಾಷ್ಟ್ರೀಯ ಆಂದೋಲನ ಸಮಿತಿ (ಎನ್ಎಸಿ) ಅಧ್ಯಕ್ಷ ಕಮಾಂಡರ್ ಅಶೋಕ ರಾವುತ್ ತಿಳಿಸಿದರು.
ನಗರದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ವಿಧವೆಯರಿಗೆ ಶೇ. 100ರಷ್ಟು ಪಿಂಚಣಿ ನೀಡಬೇಕು, ಇಪಿಎಸ್ ಸದಸ್ಯರಲ್ಲದವರಿಗೆ 5 ಸಾವಿರ ರೂ. ಪಿಂಚಣಿ ನೀಡಬೇಕು. ಕೇಂದ್ರ ಸರ್ಕಾರ ಈ ಬೇಡಿಕೆಗಳನ್ನು ಕೂಡಲೇ ಈಡೇರಿಸಬೇಕು ಎಂದು ಆಗ್ರಹಿಸಿದರು.
ಈ ಯೋಜನೆಯಡಿ ದೇಶದಲ್ಲಿ 78 ಲಕ್ಷ ಪಿಂಚಣಿದಾರರು ಬರುತ್ತಾರೆ. ಇವರೆಲ್ಲ ನಿವೃತ್ತಿಗೆ ಮೊದಲು 35- 40 ವರ್ಷ ಸೇವೆ ಸಲ್ಲಿಸಿ ಅಗಾಧ ಪ್ರಮಾಣದಲ್ಲಿ ದೇಶಕ್ಕೆ ಕೊಡುಗೆ ನೀಡಿದ್ದಾರೆ. ಸಾವಿರಾರು ಕೋಟಿ ರೂ. ಇದೇ ನೌಕರರ ಹಣ ಸರ್ಕಾರದ ಬಳಿ ಜಮಾ ಆಗಿದೆ. ಅದರಲ್ಲಿ ಒಂದು ಭಾಗವನ್ನು ನೀಡಿದರೂ ಪಿಂಚಣಿದಾರರು ನೆಮ್ಮದಿಯ ಬದುಕು ಸಾಗಿಸುತ್ತಾರೆ ಎಂದು ಬೇಡಿಕೊಂಡರು.
ಸೇವೆಯಲ್ಲಿದ್ದಾಗ ಲಕ್ಷಾಂತರ ರೂ. ಸಂಬಳ ಪಡೆಯುತ್ತಿದ್ದವರು ಇಂದು ಸರಾಸರಿ ಕೇವಲ 1200 ರೂ. ಪಿಂಚಣಿ ಪಡೆಯುತ್ತಿದ್ದಾರೆ. ಇದು ಯಾವ ನ್ಯಾಯ? ಎಂದು ಪ್ರಶ್ನಿಸಿದ ಅವರು, ಈ ಹಣ ಯಾವುದಕ್ಕೂ ಸಾಲುವುದಿಲ್ಲ. ಪಿಂಚಣಿದಾರರ ಸಾಮಾಜಿಕ ಗೌರವ ಕಾಪಾಡಬೇಕಿದೆ. ಇದಕ್ಕಾಗಿ ಹೋರಾಟ ತೀವ್ರಗೊಳಿಸಲಾಗಿದೆ ಎಂದರು.
ರಾಜ್ಯದಲ್ಲಿ ವಿಭಾಗವಾರು ಸಭೆಗಳನ್ನು ಆಯೋಜಿಸುವ ಮೂಲಕ ಸರ್ಕಾರದ ಗಮನ ಸೆಳೆಯಲಾಗುತ್ತಿದೆ. ಹುಬ್ಬಳ್ಳಿಯಲ್ಲಿಯೂ ಶನಿವಾರ ಸಭೆ ನಡೆಸಿ ಪಿಂಚಣಿದಾರರ ಸಮಸ್ಯೆ ಚಚಿರ್ಸಲಾಗಿದೆ. ಸುಮಾರು 1500 ಪಿಂಚಣಿದಾರರು ಪಾಲ್ಗೊಂಡಿದ್ದರು. ಮುಂದಿನ ದಿನಗಳಲ್ಲಿ ಕಲಬುರಗಿ ಸೇರಿ ವಿವಿಧ ವಿಭಾಗದಲ್ಲಿ ಸಭೆ ಮಾಡಿ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದರು.
ರಾಷ್ಟ್ರೀಯ ಮುಖ್ಯ ಸಂಯೋಜಕ ರಮಾಕಾಂತ ನರಗುಂದ ಮಾತನಾಡಿ, ಪಿಂಚಣಿದಾರರ ಪೈಕಿ ಸರಿಯಾದ ಚಿಕಿತ್ಸೆ, ಪೌಷ್ಟಿಕ ಆಹಾರ ಸಿಗದೇ ಶೇ. 10ರಷ್ಟು ಜನರು ಪ್ರತಿ ವರ್ಷ ನಿಧನ ಹೊಂದುತ್ತಿದ್ದಾರೆ. ಜನಪ್ರತಿನಿಧಿಗಳು, ಸಂಸದರು, ಕೇಂದ್ರ ಸಚಿವರು ಎಲ್ಲರಿಗೂ ಸಮಸ್ಯೆಗಳ ಬಗ್ಗೆ ತಿಳಿಸಿದ್ದೇವೆ. ಇನ್ನಾದರೂ ಸರ್ಕಾರ ಗಮನ ಹರಿಸಲಿ ಎಂದರು.
ಎನ್ಎಸಿ ಕರ್ನಾಟಕ ಅಧ್ಯಕ್ಷ ಜೆ.ಎಸ್.ಎಂ. ಸ್ವಾಮಿ, ಸಂಘಟನೆಯ ವಿರೇಂದ್ರಸಿಂಗ್, ಸರಿತಾ, ಶೋಭಾ ಗೋಷ್ಠಿಯಲ್ಲಿದ್ದರು.