ಜಿಲ್ಲೆ

ಮೂರ್ಛೆರೋಗದ ಬಗ್ಗೆ ಮೂಡನಂಬಿಕೆ ಬೇಡ

ಶಿವರಾಜ.ಎಂ

 ವಿಜಯವಾಣಿ ಸುದ್ದಿಜಾಲ ಬೆಂಗಳೂರು ಗ್ರಾಮಾಂತರ

ಮೂರ್ಛೆರೋಗ ಬಾಧಿತ ವ್ಯಕ್ತಿಗಳು ಸಾಮಾನ್ಯರಂತೆ ಜೀವನ ನಡೆಸಲು ಎಲ್ಲರ ಸಹಕಾರ ಬಹಳಮುಖ್ಯ ಎಂದು ಮುಖ್ಯ ಎಂದು ಮೂಳೆ ರೋಗ ತಜ್ಞ ಡಾ.ಮಂಜುನಾಥ್ ಹೇಳಿದರು. ಜಿಲ್ಲಾಡಳಿತ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ದೊಡ್ಡಬಳ್ಳಾಪುರ ಸಾರ್ವಜನಿಕ ಆಸ್ಪತ್ರೆ ಸಹಯೋಗದಲ್ಲಿ ಮೂರ್ಛೆರೋಗ ದಿನಾಚರಣೆ ಅಂಗವಾಗಿ ದೊಡ್ಡಬಳ್ಳಾಪುರದಲ್ಲಿ ಹಮ್ಮಿಕೊಂಡಿದ್ದ ಜಾಗೃತಿ ಜಾಥಾದಲ್ಲಿ ಮಾತನಾಡಿದರು. ಮೂರ್ಛೆರೋಗದ ಬಗ್ಗೆ ಸಾಕಷ್ಟು ಮೂಡನಂಬಿಕೆಗಳಿವೆ ಇದರ ಬಗ್ಗೆ ಸರಿಯಾದ ತಿಳುವಳಿಕೆ ಅವಶ್ಯಕವಾಗಿದೆ ಎಂದರು. ಮೂರ್ಛೆರೋಗ ಅಥವಾ ಅಪಸ್ಮಾರವು ಮೆದುಳಿನ ತೀವ್ರ ಅಸ್ವಸ್ಥತೆಯ ಸ್ಥಿತಿಯಾಗಿರುತ್ತದೆ, ಇದು ಯಾವುದೇ ವಯಸ್ಸಿನಲ್ಲಿಯೂ ಬಾಧಿಸಬಹುದು. ಮೆದುಳಿನ ವಿದ್ಯುತ್ ಚಟುವಟಿಕೆಗಳಲ್ಲಿ ಆಗುವ ಸರಳ ವ್ಯತ್ಯಯವೇ ಮೂರ್ಛೆರೋಗವಾಗಿದೆ ಎಂದು ತಿಳಿಸಿದರು. ಮೆದುಳಿಗೆ ಹಾನಿ ಉಂಟು ಮಾಡುವ ಅನೇಕ ಕಾರಣಗಳಿಂದ ಮೂರ್ಛೆರೋಗ ಕಾಣಿಸಿಕೊಳ್ಳಬಹುದು. ಮೂರ್ಛೆ ರೋಗದ ಲಕ್ಷಣ ಕಂಡುಬಂದವರಿಗೆ ಸೂಕ್ತ ತಪಾಸಣೆ ನಡೆಸಿ ಅಗತ್ಯ ಚಿಕಿತ್ಸೆ ದೊರಕಿಸಿಕೊಡಬೇಕು ಮುಖ್ಯವಾಗಿ ಅವರನ್ನು ನಮ್ಮೆಲ್ಲರೊಂದಿಗೆ ಬೆರೆಯುವಂತೆ ಸಾಮಾನ್ಯರಂತೆ ಅವರೊಂದಿಗೆ ನಾವೆಲ್ಲರೂ ವರ್ತಿಸುವ ಮೂಲಕ ಮಾನಸಿಕ ಸ್ಥೈರ್ಯ ನೀಡಬೇಕು ಎಂದು ತಿಳಿಸಿದರು.

ಡಿ ಕ್ರಾಸ್‌ವರೆಗೆ ಜಾಥಾ: ವಿಶ್ವ ಮೂರ್ಛೆ ರೋಗ ದಿನಾಚರಣಿ ಅಂಗವಾಗಿ ಸಾಮಾನ್ಯ ಜನರಿಗೆ ಮೂರ್ಛೆರೋಗದ ಬಗ್ಗೆ ಇರುವ ಮೂಢನಂಬಿಕೆಯನ್ನು ಹೋಗಲಾಡಿಸಿ ಅವರಿಗೆ ಸರಿಯಾದ ತಿಳುವಳಿಕೆ ನೀಡಲು ಇಂಡೋ ಗ್ಲೋಬಲ್ ನರ್ಸಿಂಗ್ ಕಾಲೇಜು ಮತ್ತು ಹೆಸರುಘಟ್ಟದ ಎಸ್‌ವಿ ಇನ್ಸ್ಟಿಟ್ಯೂಷನ್ ಆ್ ನರ್ಸಿಂಗ್ ಸಹಯೋಗದೊಂದಿಗೆ ಜಾಥಾ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ದೊಡ್ಡಬಳ್ಳಾಪುರದ ಸಾರ್ವಜನಿಕ ಆಸ್ಪತ್ರೆ ಆವರಣದಲ್ಲಿ ಕಾರ್ಯಕ್ರಮ ಉದ್ಘಾಟಿಸಿ ಅಲ್ಲಿಂದ ಡಿ ಕ್ರಾಸ್‌ವರೆಗೆ ಕಾಲ್ನಡಿಗೆ ಜಾಥಾ ಮಾಡುವುದರ ಮೂಲಕ ಸಾರ್ವಜನಿಕರಲ್ಲಿ ಮೂರ್ಛೆ ರೋಗದ ಬಗ್ಗೆ ಇದ್ದ ಕಳಂಕ ಮತ್ತು ತಪ್ಪು ಕಲ್ಪನೆಯನ್ನು ಹೋಗಲಾಡಿಸುವಂತೆ ಅರಿವು ಮೂಡಿಸಲಾಯಿತು.

ನಿಖರ ಕಾರಣವಿಲ್ಲ: ಮೂರ್ಛೆರೋಗಕ್ಕೆ ನಿರ್ದಿಷ್ಟ ಕಾರಣವಿಲ್ಲವಾದರೂ ಅನುವಂಶಿಯವಾಗಿ ಬಂದಂತ ಸಮಸ್ಯೆ ಅಥವಾ ಮೆದುಳಿನ ಬೆಳವಣಿಯಲ್ಲಾಗುವ ನ್ಯೂನತೆ ಪರಿಣಾಮವಾಗಿ ಈ ಕಾಯಿಲೆ ತಲೆದೂರಲಿದೆ ಎಂದು ಜಿಲ್ಲಾ ಕುಷ್ಟರೋಗ ನಿರ್ಮೂಲನ ಅಧಿಕಾರಿ ಡಾ.ನಾಗರಾಜ್ ಹೇಳಿದರು. ತಲೆಗೆ ಬಿದ್ದ ಪೆಟ್ಟು, ಪಾರ್ಶ್ವವಾಯು. ಮೆದುಳಿನಲ್ಲಿ ರಕ್ತಸ್ರಾವ, ಶಿಶುಜನನದ ವೇಳೆ ಆಗುವ ಗಾಯ, ಸೋಂಕು ಹೀಗೆ ಅನೇಕ ಕಾರಣಗಳಿರಬಹುದು ಜತೆಗೆ ಸಂಕೀರ್ಣ ಸಮಸ್ಯೆಗಳೂ ಕಾರಣವಾಗಬಹುದು ಎಂದು ತಿಳಿಸಿದರು.ಸೂಕ್ತ ಚಿಕಿತ್ಸೆ ಹಾಗೂ ಪರಿಣಾಮಗಾರಿ ಔಷಧಿಗಳನ್ನು ನೀಡುವುದರಿಂದ ಅಪಸ್ಮಾರವನ್ನು ಸಂಪೂರ್ಣವಾಗಿ ನಿಯಂತ್ರಿಸಬಹುದು, ಈ ಸಮಸ್ಯೆಗೆ ಒಳಗಾದವು ನಿರ್ದಿಷ್ಟ ಸಮಯದವರೆಗೆ ವೈದ್ಯರ ಸಲಹೆಯಂತೆ ನಿರಂತರವಾಗಿ ಔಷಧಿಯನ್ನು ತೆಗೆದುಕೊಳ್ಳಬೇಕು ಎಂದು ತಿಳಿಸಿದರು.ಕೆಲವು ಮುನ್ನೆಚ್ಚರಿಕೆ ಕ್ರಮಗಳನ್ನು ಅನುರಿಸುವುದರಿಂದ ಈ ರೋಗ ಬರದಂತೆ ತಡೆಯುವ ಸಾಧ್ಯತೆಗಳಿವೆ ಎಂದು ತಿಳಿಸಿದರು.

ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ: ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ನರ್ಸಿಂಗ್ ವಿದ್ಯಾರ್ಥಿಗಳಿಗೆ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಜಿಲ್ಲಾ ಕುಷ್ಟರೋಗ ನಿರ್ಮೂಲನ ಅಧಿಕಾರಿ ಡಾ.ನಾಗರಾಜ್ ಮೂರ್ಛೆರೋಗದ ಬಗ್ಗೆ ಮಾಹಿತಿ ನಿಡಿದರು. ಜಾಥಾ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ವಿದ್ಯಾರ್ಥಿಗಳಿಗೆ ಪಾಲ್ಗೊಳ್ಳುವಿಕೆಯ ಪ್ರಶಸ್ತಿ ಪತ್ರ ನೀಡಲಾಯಿತು. ಆಸ್ಪತ್ರೆಯ ನರ್ಸಿಂಗ್ ಸೂಪರ್ಡೆಂಟ್ ಶೈಲಜಾ ಕಾರ್ಯಕ್ರಮದ ಕುರಿತು ಹಾಗೂ ಮೂರ್ಛೆ ರೋಗದ ಕುರಿತು ಮಕ್ಕಳಲ್ಲಿ ಅರಿವು ಮೂಡಿಸಿದರು. ಆಸ್ಪತ್ರೆಯ ಆಡಿಯೋಲಜಿಸ್ಟ್ ದಿನೇಶ್ ಹಾಗೂ ಆಸ್ಪತ್ರೆಯ ಸೂಪರಿಡಿಟೆಂಟ್ ನಾರಾಯಣ ಕಾರ್ಯಕ್ರಮದಲ್ಲಿ ರೋಗದ ಬಗ್ಗೆ ಮಾಹಿತಿ ನೀಡಿದರು.

----------