ಜಿಲ್ಲೆ

ಮಹಾಕಾವ್ಯಗಳು ಅಂತರಂಗ ಜಾಗೃತಿಯ ಪ್ರೇರಕ : ಶ್ರೀ ಅಭಯಾನಂದ ಸ್ವಾಮೀಜಿ ಅಭಿಪ್ರಾಯ

ಚಿಕ್ಕಬಳ್ಳಾಪುರ: ಧರ್ಮ ಸಂದೇಶ ಸಾರುವ ಮಹಾಕಾವ್ಯಗಳನ್ನು ಪ್ರತಿಯೊಬ್ಬರು ಓದಬೇಕು. ಅದರಲ್ಲೂ ಭಗವದ್ಗೀತೆಯ ಜ್ಞಾನ ಅತ್ಯವಶ್ಯಕವಾಗಿದೆ ಎಂದು ಅಭಿಪ್ರಾಯಪಟ್ಟ ಶ್ರೀ ಅಭಯಾನಂದ ಸ್ವಾಮೀಜಿ, ವಿದ್ಯಾರ್ಥಿಗಳು ತಂದೆ-ತಾಯಿ ಬಗೆಗಿನ ಪ್ರೇಮ, ಗುರುಭಕ್ತಿ ಮತ್ತು ದೇಶಭಕ್ತಿಯನ್ನು ಬೆಳೆಸಿಕೊಳ್ಳಬೇಕೆಂಬ ಕಿವಿಮಾತು ಹೇಳಿದರು.

ತಾಲೂಕಿನ ಹೊಸಹುಡ್ಯದ ಶ್ರೀ ವಿಷ್ಣುಪ್ರಿಯ ಶಾಲೆ ಆವರಣದಲ್ಲಿ ವಿಷ್ಣುಪ್ರಿಯ ಎಜುಕೇಷನ್ ಟ್ರಸ್ಟ್ ವತಿಯಿಂದ ಶುಕ್ರವಾರ ಕೈಗೊಂಡಿದ್ದ ಭಗವದ್ಗಿತೆ ಕಂಠಪಾಠ, ಯಶೋಧಾ ಮತ್ತು ರಾಧಾ-ಕೃಷ್ಣ ವೇಷಾವಳಿ ಅಂತರಶಾಲಾ ಸ್ಪರ್ಧೆಯ ಸಾನಿಧ್ಯ ವಹಿಸಿ ಮಾತನಾಡಿದರು.

ರಾಮಾಯಣ, ಮಹಾಭಾರತ, ಭಗವದ್ಗೀತೆ ಕೇವಲ ಪುಸ್ತಕಗಳಲ್ಲ. ಅವು ಜೀವನದ ಸಮಸ್ಯೆಗಳ ಪರಿಹಾರದ ಮೂಲಮಾರ್ಗದರ್ಶಿ, ಅಂತರಂಗದ ಜಾಗೃತಿಗೆ ಪ್ರೇರಕ. ಎಲ್ಲ ಕಾಲಗಳಲ್ಲೂ ಶಾಶ್ವತ ಅಸ್ತಿತ್ವವನ್ನು ಹೊಂದಿರುತ್ತವೆ ಎಂದರು.

ತಂತ್ರಜ್ಞಾನ ಆಧಾರಿತ ಅತ್ಯಾಧುನಿಕತೆಯ ಪ್ರಭಾವದಿಂದಾಗಿ ಮೌಲ್ಯ, ದೇಶೀಯ ಕಲೆ, ಭಕ್ತಿ ಸೇರಿದಂತೆ ಸದ್ಗುಣಗಳು ಮರೆಯಾಗುತ್ತಿವೆ. ಈ ಹಿನ್ನೆಲೆಯಲ್ಲಿ ಸಾಮಾಜಿಕ ಚಿಂತನೆಗಳೊಂದಿಗೆ ಮಕ್ಕಳನ್ನು ಬೆಳೆಸಬೇಕೆಂದು ಆಶೀರ್ವಚನ ನೀಡಿದರು.

ಭಗವದ್ಗೀತೆಯ ಸಾರವನ್ನು ಸಮರ್ಪಕವಾಗಿ ಅರ್ಥ ಮಾಡಿಕೊಂಡಿದ್ದಲ್ಲಿ ಏನನ್ನಾದರೂ ಗೆಲ್ಲಬಹುದೆಂಬ ಆತ್ಮಸ್ಥೈರ್ಯ ಬರುತ್ತದೆ. ಈ ನಿಟ್ಟಿನಲ್ಲಿ ಶಿಕ್ಷಣ ಸಂಸ್ಥೆಯು ಭಗವದ್ಗೀತೆ ಕಂಠಪಾಠ ಮತ್ತು ಕೃಷ್ಣ-ರಾಧಾ ವೇಷಾವಳಿ ಸ್ಪರ್ಧೆ ಕೈಗೊಳ್ಳುತ್ತ ಬರುತ್ತಿರುವುದು ಶ್ಲಾಘನೀಯ ಎಂದು ಅಭಯಾನಂದ ಸ್ವಾಮೀಜಿ ಮೆಚ್ಚುಗೆ ವ್ಯಕ್ತಪಡಿಸಿದರು.

ಬಾಲ್ಯದಿಂದಲೇ ಮಕ್ಕಳಲ್ಲಿ ಉತ್ತಮ ವ್ಯಕ್ತಿತ್ವವನ್ನು ಬೆಳೆಸಬೇಕು. ಈ ನಿಟ್ಟಿನಲ್ಲಿ ಆಧ್ಯಾತ್ಮಿಕ ಚಟುವಟಿಕೆಯಲ್ಲಿ ಸಕ್ರಿಯ ಭಾಗಿತ್ವ ಸಹಕಾರಿಯಾಗಲಿದೆ ಎಂದು ದಾಸ ಸಂಘದ ಸಂಚಾಲಕ ಆರ್.ನಾಗರಾಜ್ ಅಭಿಪ್ರಾಯಪಟ್ಟರು.

ವಿವಿಧ ಶಾಲೆಯ ವಿದ್ಯಾರ್ಥಿಗಳು ರಾಧಾ-ಕೃಷ್ಣ, ಲಕ್ಷ್ಮೀನಾರಾಯಣ ವೇಷಾವಳಿಯಲ್ಲಿ ಗಮನ ಸೆಳೆದರು. ಪ್ರತಿಭಾವಂತ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಅಂತಾರಾಷ್ಟ್ರೀಯ ಕ್ರೀಡಾಪಟು ಮಂಚನಬಲೆ ಶ್ರೀನಿವಾಸ್, ಪ್ರಾಂಶುಪಾಲ ಥಾಮಸ್ ಮತ್ತಿತರರು ಇದ್ದರು.