ಜಿಲ್ಲೆ

ಡಾ.ಬಿ.ಆರ್. ಅಂಬೇಡ್ಕರ್ ನಗರಕ್ಕೆ ತಾಪಂ ಇಒ ಭೇಟಿ

ನಾಗೇಶ ಎಸ್

ಹುಣಸೂರು: ತಾಲೂಕಿನ ಚಿಕ್ಕಹುಣಸೂರು ಗ್ರಾಮದ ಬಾಚಳ್ಳಿ ರಸ್ತೆಯ ಡಾ.ಬಿ.ಆರ್.ಅಂಬೇಡ್ಕರ್ ನಗರಕ್ಕೆ ಬುಧವಾರ ತಾಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿ ಹೊಂಗಯ್ಯ ಭೇಟಿ ನೀಡಿ ಗ್ರಾಮದ ಸಮಸ್ಯೆಗಳನ್ನು ಆಲಿಸಿದರು.

ಈ ಸಂದರ್ಭದಲ್ಲಿ ದಲಿತ ಸಂಘರ್ಷ ಸಮಿತಿ ಜಿಲ್ಲಾ ಸಂಚಾಲಕ ನಿಂಗರಾಜ್ ಮಲ್ಲಾಡಿ ಮಾತನಾಡಿ, ಅಂಬೇಡ್ಕರ್ ನಗರದಲ್ಲಿ ಆದಿವಾಸಿ, ಅಲೆಮಾರಿ, ಪೌರಕಾರ್ಮಿಕ ಕುಟುಂಬಗಳು ಗುಡಿಸಲುಗಳನ್ನು ಹಾಕಿಕೊಂಡು ವಾಸವಿದ್ದು, ಮನೆ, ರಸ್ತೆ, ಚರಂಡಿ, ಬೀದಿದೀಪ, ಸಮುದಾಯ ಭವನ, ಅಂಗನವಾಡಿ ಕೇಂದ್ರ ಮುಂತಾದ ಮೂಲಸೌಲಭ್ಯಗಳಿಲ್ಲದೆ ತೊಂದರೆಪಡುತ್ತಿದ್ದಾರೆ. ಈ ಬಗ್ಗೆ ಸಮಿತಿಯು ಹಲವಾರು ವರ್ಷಗಳಿಂದ ಹೋರಾಟ ಮಾಡಿ ಕುಟುಂಬಗಳಿಗೆ 94 ಸಿಸಿ ಯೋಜನೆಯಡಿ ಮನೆಗಳ ಹಕ್ಕುಪತ್ರ ಕೊಡಿಸಲಾಗಿದೆ. ಉಳಿದ ಕುಟುಂಬಗಳಿಗೆ ಹಕ್ಕು ಪತ್ರಗಳನ್ನು ಕೊಡಿಸಲು ಹೋರಾಡುತ್ತಿದ್ದೇವೆ. ಅಲೆಮಾರಿ ಜನಾಂಗದ ಬೀದಿಗೆ ಶಾಸಕ ಜಿ.ಡಿ. ಹರೀಶ್‌ಗೌಡ 50 ಲಕ್ಷ ರೂ. ಅನುದಾನ ನೀಡಿದ್ದು, ರಸ್ತೆ ಕಾಮಗಾರಿ ಪ್ರಗತಿಯಲ್ಲಿದೆ. ಇನ್ನು ಆದಿವಾಸಿಗಳು ವಾಸಿಸುತ್ತಿರುವ ಮುಖ್ಯರಸ್ತೆಗೆ ಹಣದ ಕೊರತೆಯಿದೆ. ಇದರಿಂದ ಜನರು ತಿರುಗಾಡಲು ತೊಂದರೆಪಡುತ್ತಿದ್ದಾರೆ. ಕೂಡಲೇ ವಿಶೇಷ ಘಟಕ ಯೋಜನೆಯಡಿ ಬಾಕಿಯಿರುವ ರಸ್ತೆ ಅಭಿವೃದ್ಧಿಪಡಿಸಿಕೊಡಬೇಕು ಎಂದು ಒತ್ತಾಯಿಸಿದರು.

ಇಒ ಕೆ.ಹೊಂಗಯ್ಯ ಮಾತನಾಡಿ, ಅಂಬೇಡ್ಕರ್ ನಗರದಲ್ಲಿ ಬಾಕಿ ಇರುವ ಮೂಲ ಸೌಲಭ್ಯಗಳನ್ನು ಹಂತ ಹಂತವಾಗಿ ಕಲ್ಪಿಸಿಕೊಡಲಾಗುವುದು. ಪ್ರತಿಯೊಬ್ಬರೂ ನಿಮ್ಮ ಮಕ್ಕಳನ್ನು ಶಾಲೆಗೆ ಕಳುಹಿಸಿ ವಿದ್ಯಾವಂತರನ್ನಾಗಿ ಮಾಡಬೇಕು ಎಂದು ಸಲಹೆ ನೀಡಿದರು.

ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪುಟ್ಟ ನಾಗರಾಜು, ಗೋವಿಂದನಹಳ್ಳಿ ಪಿಡಿಒ ರಾಜ್‌ಕುಮಾರ್, ಕಾರ್ಯದರ್ಶಿ ನಟೇಶ್, ಬಿಲ್ ಕಲೆಕ್ಟರ್ ಲೋಕೇಶ್, ಮುಖಂಡರಾದ ದೇವೇಂದ್ರ ಕುಳುವಾಡಿ, ಕಿರಿಜಾಜಿ ಗಜೇಂದ್ರ, ಅಂಬೇಡ್ಕರ್ ನಗರ ವಾಸಿಗಳಾದ ಶೇಖರ, ವಸಂತ, ದಾಸಪ್ಪ, ಶೋಭಮ್ಮ ಗಾಯತ್ರಿ, ಲಕ್ಷ್ಮಮ್ಮ ಮುಂತಾದವರು ಹಾಜರಿದ್ದರು.