ಜಿಲ್ಲೆ

ಪರಿಸರ ಮಾರಕ ಯೋಜನೆ ಬೇಡ: ಸ್ಪೀಕರ್​ ಖಾದರ್​

ಗೋಪಾಲಕೃಷ್ಣ ಪಾದೂರ್

ಉಡುಪಿ: ಮುಂದಿನ ಪೀಳಿಗೆಗಾಗಿ ಪರಿಸರ ಉಳಿಸಬೇಕು. ಅಭಿವೃದ್ಧಿ ಹೆಸರಿನಲ್ಲಿ ಪರಿಸರಕ್ಕೆ ಮಾರಕವಾಗುವ ಯೋಜನೆ ಜಾರಿ ಅನಗತ್ಯ. ಪರಿಸರಕ್ಕೆ ಹಾನಿಯಾಗದಂತಹ ಪೂರಕ ಯೋಜನೆ ರೂಪಿಸುವ ಅಗತ್ಯ ಇದೆ ಎಂದು ವಿಧಾನಸಭಾ ಸ್ಪೀಕರ್​ ಯು.ಟಿ. ಖಾದರ್​ ಹೇಳಿದರು.

ಮಣಿಪಾಲದಲ್ಲಿ ಜಯಶ್ರೀಕೃಷ್ಣ ಪರಿಸರ ಸಮಿತಿ ವತಿಯಿಂದ ಶನಿವಾರ ಆಯೋಜಿಸಿದ್ದ ಕೈಗಾರಿಕೆಗಳಲ್ಲಿ ಮಾಲಿನ್ಯ ನಿಯಂತ್ರಣ ಮತ್ತು ಕರಾವಳಿ ಕರ್ನಾಟಕ ಪ್ರವಾಸೋದ್ಯಮ ಉತ್ತೇಜನ ಸಮ್ಮೇಳನದಲ್ಲಿ ಮಾತನಾಡಿದರು.

ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಜಗದೀಶ ಶೆಟ್ಟರ್​, ಪರಿಸರಕ್ಕೆ ಹಾನಿಯಾಗದಂತೆ ಅಭಿವೃದ್ಧಿ ಕೆಲಸ ನಡೆಯಬೇಕು. ಹುಬ್ಬಳ್ಳಿ&ಅಂಕೋಲಾ ರೈಲ್ವೆ ಯೋಜನೆಗಾಗಿ ಸಾಕಷ್ಟು ಶ್ರಮಿಸಿದ್ದೆವು. ಆದರೆ, ಪರಿಸರ ಹೋರಾಟಗಾರರು ಕೋರ್ಟ್​ ಮೆಟ್ಟಿಲು ಏರಿದ್ದರಿಂದ ಯೋಜನೆ ಸ್ಥಗಿತವಾಯಿತು. ಈ ನಿಟ್ಟಿನಲ್ಲಿ ಅವಲೋಕಿಸಿದಾಗ ಪರಿಸರ ರಕ್ಷಣೆ ಮತ್ತು ಅಭಿವೃದ್ಧಿ ಜತೆಯಾಗಿ ಸಾಗಬೇಕು ಎಂದರು.

ಶಾಸಕ ಆರ್​.ವಿ. ದೇಶಪಾಂಡೆ ಮಾತನಾಡಿ, ಸಣ್ಣ ಮತ್ತು ಮಾಧ್ಯಮ ಕೈಗಾರಿಕೆಗಳು ಪರಿಸರ ಸ್ನೇಹಿ ವ್ಯವಸ್ಥೆ ಅಳವಡಿಸಿಕೊಂಡು ಕಾರ್ಯನಿರ್ವಹಿಸಬಹುದು. ಕೈಗಾರಿಕೆ ಮತ್ತು ಹೂಡಿಕೆದಾರರು ನಮ್ಮಲ್ಲಿ ಬರಬೇಕಾದರೆ ಉತ್ತಮ ಮೂಲ ಸೌಕರ್ಯ ಕಲ್ಪಿಸುವ ವ್ಯವಸ್ಥೆ ಸರ್ಕಾರ ಮಾಡಬೇಕು ಎಂದರು.

ಸಮಿತಿ ಅಧ್ಯಕ್ಷ ಎಲ್​.ವಿ. ಅಮೀನ್​ ಅಧ್ಯಕ್ಷತೆ ವಹಿಸಿದ್ದರು. ಸಮಿತಿ ಸಂಸ್ಥಾಪಕ ತೋನ್ಸೆ ಜಯಕೃಷ್ಣ ಎ. ಶೆಟ್ಟಿ, ವಿಧಾನ ಪರಿಷತ್​ ಮಾಜಿ ಸದಸ್ಯರಾದ ಐವಾನ್​ ಡಿಸೋಜಾ, ಕ್ಯಾ. ಗಣೇಶ್​ ಕಾರ್ಣಿಕ್​, ಮಾಜಿ ಸಚಿವ ನಾಗರಾಜ್​ ಶೆಟ್ಟಿ, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ್​ ನಾಯಕ್​, ಪ್ರಮುಖರಾದ ಜಗದೀಶ್​ ಅಧಿಕಾರಿ, ಸುರೇಂದ್ರ ಮೆಂಡನ್​, ತುಳಸೀದಾಸ್​ ಎಲ್​. ಅಮೀನ್​ ಉಪಸ್ಥಿತರಿದ್ದರು.