ರಾಯಚೂರು ಸಾರ್ವಜನಿಕರು ಪ್ಲಾಸ್ಟಿಕ್ ವಸ್ತುಗಳ ಬಳಕೆ ಕಡಿಮೆ ಮಾಡುವುದರ ಜತೆಗೆ ನಿಷೇಧಿತ ಪ್ಲಾಸ್ಟಿಕ್ ಬಳಸಬಾರದೆಂದು ಹಿರಿಯ ಶ್ರೇಣಿಯ ದಿವಾಣಿ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹೆಚ್. ಎ. ಸಾತ್ವಿಕ್ ತಿಳಿಸಿದರು.
ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಅರಣ್ಯ ಇಲಾಖೆ, ಸಾರ್ವಜನಿಕ ಶಿಕ್ಷಣ ಇಲಾಖೆ, ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಮತ್ತು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ವತಿಯಿಂದ ಬುಧವಾರ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಪರಿಸರ ಜಾಥಾಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.
ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ನಗರಸಭೆ ಸೇರಿದಂತೆ ಇನ್ನೀತರ ಇಲಾಖೆಗಳು ಕ್ರಮ ವಹಿಸಿ ಅಂಗಡಿ, ಮುಂಗಟ್ಟುಗಳ ಮೇಲೆ ದಾಳಿ ನಡೆಸಿ ಪ್ಲಾಸ್ಟಿಕ್ ಮಾರಾಟಗಾರರ ಮೇಲೆ ದಂಡ ವಿಧಿಸಿದರು ಸಹ ಕೆಲವೆಡೆ ಪ್ಲಾಸ್ಟಿಕ್ ಬಳಕೆ ಕಾಣುತ್ತದೆ. ಇದು ಸರಿಯಲ್ಲ. ಸಾರ್ವಜನಿಕರು ಸಹಕರಿಸಬೇಕು.
ಪರಿಸರ ಸರಿಯಾಗಿದ್ದಾಗ ಮಾತ್ರ ಉತ್ತಮ ಆರೋಗ್ಯ ಹೊಂದಲು ಸಾಧ್ಯವಾಗುತ್ತದೆ. ವಾಯು ಮಾಲಿನ್ಯದ ದುಷ್ಪರಿಣಾಮಗಳ ಬಗ್ಗೆ ಜನತೆ ಅರಿಯಬೇಕು. ಪ್ಲಾಸ್ಟಿಕ್ ಬಳಸಬಾರದು ಎಂದು ಮನವಿ ಮಾಡಿದರು.
ವಾಯು ಮಾಲಿನ್ಯ ನಿಯಂತ್ರಣಕ್ಕಾಗಿ ಹಾಗೂ ನಿಷೇಧಿತ ಪ್ಲಾಸ್ಟಿಕ್ ಬಳಸದೆ ಪರಿಸರ ಸ್ನೇಹಿ ಮಾರ್ಗೋಪಾಯಗಳ ಬಗ್ಗೆ ತಿಳಿದು, ಮತ್ತಿತರರಿಗೂ ಅರಿವು ಮೂಡಿಸಲು ಜಿಲ್ಲೆಯ ಸಮಸ್ತ ನಾಗರೀಕರು ಜಿಲ್ಲಾಡಳಿತದೊಂದಿಗೆ ಕೈ ಜೋಡಿಸಬೇಕು. ಪ್ಲಾಸ್ಟಿಕ್ ವಸ್ತು ಬಳಸಬೇಡಿ, ಜಿಲ್ಲೆಯನ್ನು ಪ್ಲಾಸ್ಟಿಕ್ ಮುಕ್ತ ಮಾಡಲು ಸಹಕರಿಸಬೇಕು ಎಂದರು.
ನಂತರ ವಿಶ್ವ ಪರಿಸರ ದಿನಾಚರಣೆ-2025ರ ಅಂಗವಾಗಿ ನಗರದ ಕನ್ನಡ ಭವನದಲ್ಲಿ ಹಮ್ಮಿಕೊಳ್ಳಲಾಗಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ಕಾರ್ಯಕ್ರಮಕ್ಕೆ ಅರಣ್ಯ ಇಲಾಖೆಯ ಉಪ ಅರಣ್ಯ ಸಂರಕ್ಷಣಾಧಿಕಾರಿ ಪ್ರವೀಣ್ ಎಸ್ ಚಾಲನೆ ನೀಡಿ, ಮಾತನಾಡಿದವರು, ಮಾನವನಿಂದ ಪರಿಸರ ನಾಶವಾಗುತ್ತಿದ್ದು, ಮಾನವ ಮತ್ತು ಪರಿಸರ ನಡುವೆ ನಿರಂತರ ಸಂಘರ್ಷ ನಡೆಯುತ್ತಿದೆ. ಆಧುನಿಕ ಯುಗದಲ್ಲಿ ಪ್ಲಾಸ್ಟಿಕ್ ಬಳಕೆ ಹೆಚ್ಚಾಗಿದ್ದು, ಅದನ್ನು ಕಡಿಮೆ ಮಾಡಬೇಕು. ಅದಕ್ಕಾಗಿ ಜಿಲ್ಲೆಯ ಎಲ್ಲಾ ಶಾಲಾ ಹಾಗೂ ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಜಾಗೃತಿ ಮೂಡಿಸಲಾಗುತ್ತದೆ. ವಿದ್ಯಾರ್ಥಿಗಳು ತಮ್ಮ ತಂದೆ-ತಾಯಿಗಳಿಗೆ ಪ್ಲಾಸ್ಟಿಕ್ ಬಳಕೆ ಕುರಿತು ತಿಳಿ ಹೇಳಬೇಕೆಂದು ಹೇಳಿದರು.
ಈ ಸಂದರ್ಭದಲ್ಲಿ ಪಾಲಿಕೆ ಕಂದಾಯ ಅಧಿಕಾರಿ ಸಂಗಮೇಶ್, ಡಿಡಿಪಿಐ ಕೆ.ಡಿ.ಬಡಿಗೇರ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಪರಿಸರ ಅಧಿಕಾರಿ ಬಿ.ಎಸ್.ಮುರಳೀಧರ್,ಈ.ಪ್ರಕಾಶ, ಆರ್.ಹೆಚ್.ಸಾಗರ್ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿ ಸಿಬ್ಬಂದಿ ಇದ್ದರು.