ಅಳವಂಡಿ: ಪರಿಸರ ಸಂರಕ್ಷಣೆ ಕೇವಲ ಸರ್ಕಾರ, ಸಂಘ ಸಂಸ್ಥೆಗಳ ಜವಾಬ್ದಾರಿಯಲ್ಲ. ಎಲ್ಲರ ಹೊಣೆಯಾಗಿದೆ ಎಂದು ಶಿಕ್ಷಕ ಮರ್ದಾನಲಿ ಗಡಾದ ಹೇಳಿದರು.
ಸಮೀಪದ ಬೆಟಗೇರಿ ಸರ್ಕಾರಿ ಪ್ರೌಢಶಾಲೆಯಿಂದ ಶನಿವಾರ ಹಮ್ಮಿಕೊಂಡಿದ್ದ ತಾಯಿಯ ಹೆಸರಲ್ಲಿ ಒಂದು ಗಿಡ ಅಭಿಯಾನದ ನಿಮಿತ್ತ ಪರಿಸರ ಜಾಗೃತಿ ಜಾಥಾ ಕಾರ್ಯಕ್ರಮದಲ್ಲಿ ಮಾತನಾಡಿದರು. ಮನುಷ್ಯನ ದುರಾಸೆ, ವೈಭವ ಜೀವನಶೈಲಿ, ಜಾಗತೀಕರಣ, ಕೈಗಾರೀಕರಣ, ನಗರೀಕರಣದ ಫಲವಾಗಿ ಪರಿಸರ ನಾಶವಾಗುತ್ತಿದೆ ಎಂದರು.
ಮುಖ್ಯಶಿಕ್ಷಕ ಪರಶುರಾಮ ಸಾಲ್ಮನಿ ಮಾತನಾಡಿ, ಮಕ್ಕಳು ಪರಿಸರದ ಬಗ್ಗೆ ಕಾಳಜಿ ವಹಿಸಬೇಕು. ಶುದ್ಧ ಪರಿಸರದಿಂದ ಮಾತ್ರ ಆರೋಗ್ಯಕರ ಜೀವನ ನಡೆಸಲು ಸಾಧ್ಯ ಎಂದು ತಿಳಿಸಿದರು. ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಘೋಷಣೆ ಕೂಗಿ ಸಾರ್ವಜನಿಕರಲ್ಲಿ ಪರಿಸರ ಜಾಗೃತಿ ಮೂಡಿಸಿದರು.
ಶಿಕ್ಷಕರಾದ ಗಿರಿಯಪ್ಪ ಹಾರನಹಳ್ಳಿ, ರವಿಕಿರಣ ಟಿಕಾರೆ, ನಾರಾಯಣಪ್ಪ ಬಿಸನಳ್ಳಿ, ರಾಜಸಾಹೇಬ ಬಳಿಗಾರ, ಪ್ರಕಾಶ ರೆಡ್ಡಿ ಗೋವಿಂದ ರೆಡ್ಡಿ, ಸೋಮಣ್ಣ, ಪರಶುರಾಮ, ಬಸವರಾಜ, ಸುನಿತಾ ಯಾಳಗಿ, ಶ್ವೇತಾ ಇತರರಿದ್ದರು.